ಕೆಎಂಎಫ್‌ ನೇಮಕಾತಿಯಲ್ಲಿ ಅಕ್ರಮ: ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸದಂತೆ ಹೈಕೋರ್ಟ್‌ ತಡೆಯಾಜ್ಞೆ

ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಕೆಎಂಎಫ್, ಗುಜರಾತ್ ಮೂಲದ ನೇಮಕಾತಿ ಏಜೆನ್ಸಿ ಇನ್ಸ್‌ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್ ಮತ್ತು ಸಿಐಡಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿದ ನ್ಯಾಯಾಲಯ.
KMF and Karnatka High Court
KMF and Karnatka High Court

ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್) ನಡೆಸುತ್ತಿದ್ದ 487 ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಆರೋಪ ಹಿನ್ನೆಲೆಯಲ್ಲಿ ಅಂತಿಮ ಆಯ್ಕೆಪಟ್ಟಿ ಪ್ರಕಟಿಸದಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಐತಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿ ಐದು ಸಂಘಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ವೆಂಕಟೇಶ್ ನಾಯಕ್ ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಮಧ್ಯಂತರ ಆದೇಶ ಮಾಡಿತು. ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಕೆಎಂಎಫ್, ಗುಜರಾತ್ ಮೂಲದ ನೇಮಕಾತಿ ಏಜೆನ್ಸಿ ಇನ್ಸ್‌ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್ ಮತ್ತು ಸಿಐಡಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಅರ್ಜಿದಾರರ ಪರ ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರು ನೇಮಕಾತಿಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ. ಲಿಖಿತ ಪರೀಕ್ಷೆಯಲ್ಲಿ ಕನ್ನಡವೂ ಒಂದು ವಿಷಯವಾಗಿದೆ, ಆದರೆ, ನೇಮಕ ಪರೀಕ್ಷೆಗಳನ್ನು ನಡೆಸಿ ಅನುಭವ ಇಲ್ಲದ, ಕನ್ನಡದ ಬಗ್ಗೆ ಜ್ಞಾನವಿಲ್ಲದ ಗುಜರಾತ್‌ನ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್‌ಗೆ ಹೊಣೆ ನೀಡಲಾಗಿದೆ. ಅದಕ್ಕೂ ಮುಖ್ಯವಾಗಿ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಸಂದರ್ಶಕರಿಗೆ ನೀಡಿದ್ದಾರೆ. ಇದು ನಿಯಮಬಾಹಿರ ಕ್ರಮ. ಆದ್ದರಿಂದ, ಆಯ್ಕೆಪಟ್ಟಿಗೆ ತಡೆ ನೀಡಬೇಕು ಎಂದು ಕೋರಿದರು.

ಪ್ರಸ್ತುತ ನಡೆಸುತ್ತಿರುವ 487 ಹುದ್ದೆಗಳ ನೇಮಕದಿಂದ ವಾರ್ಷಿಕ 30ರಿಂದ 40 ಕೋಟಿ ರೂಪಾಯಿ ಹೆಚ್ಚುವರಿ ವೆಚ್ಚ ತಗುಲಲಿದೆ. ಈ ಹೆಚ್ಚುವರಿ ಹುದ್ದೆಗಳ ಭರ್ತಿ ಅಗತ್ಯವಿಲ್ಲದಿದ್ದರೂ ನೇಮಕ ಮಾಡಲಾಗುತ್ತಿದೆ. ಇದರಿಂದ, ಹಾಲು ಉತ್ಪಾದಕರ ಸಂಘಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಜತೆಗೆ, ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಅಭ್ಯರ್ಥಿಗಳ ಅಂಕಗಳನ್ನು ತಿದ್ದಲು ಪ್ರತಿ ಹುದ್ದೆಗೆ 30ರಿಂದ 50 ಲಕ್ಷ ರೂಪಾಯಿಗಳವರೆಗೆ ಲಂಚ ಪಡೆಯಲಾಗಿದೆ. ಅಕ್ರಮದ ಆರೋಪದ ಬಗ್ಗೆ ಕೆಎಂಎಫ್‌ಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನೇಮಕಾತಿ ತಡೆ ಹಿಡಿಯುವಂತೆ ಮುಖ್ಯಮಂತ್ರಿಗಳಿಗೆ ಕೋರಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಿಐಡಿಗೆ ನಿರ್ದೇಶಿಸಬೇಕು ಎಂದು ಕೋರಿರುವ ಅರ್ಜಿದಾರರು, ತನಿಖೆ ಪೂರ್ಣಗೊಳ್ಳುವವರೆಗೆ ಆಯ್ಕೆ ಪಟ್ಟಿ ತಡೆ ಹಿಡಿಯುವಂತೆ ಮಧ್ಯಂತರ ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ: ಕಳೆದ ವರ್ಷ ಅಕ್ಟೋಬರ್‌ 20ರಂದು 487 ಹುದ್ದೆಗಳ ನೇಮಕಕ್ಕೆ ಕೆಎಂಎಫ್ ಅಧಿಸೂಚನೆ ಹೊರಡಿಸಿತ್ತು. ನೇಮಕಾತಿ ಪ್ರಕ್ರಿಯೆಯ ಜವಾಬ್ದಾರಿಯನ್ನು ಗುಜರಾತ್ ಮೂಲದ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್ ಏಜೆನ್ಸಿಗೆ ವಹಿಸಲಾಗಿತ್ತು. ಪರೀಕ್ಷೆ ನಂತರ 2023ರ ಫೆಬ್ರವರಿ 2ರಿಂದ 28ವರೆಗೆ ಸಂದರ್ಶನ ನಡೆಸಿ, ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com