
ಶಾಸಕಾಂಗ ಅಂಗೀಕರಿಸಿದ ಮಸೂದೆಗೆ ರಾಜ್ಯಪಾಲರು ವರ್ಷಾನುಗಟ್ಟಲೆ ಅಂಕಿತ ಹಾಕದೆ ಹೋದರೆ ನ್ಯಾಯಾಲಯಗಳು ಕ್ರಮ ಕೈಗೊಳ್ಳಲಾಗದೆ ಕೈಕಟ್ಟಿ ಕೂರಬೇಕೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ರಾಜ್ಯ ಶಾಸಕಾಂಗಗಳು ಒಪ್ಪಿಗೆ ಕೋರಿ ಕಳುಹಿಸಲಾದ ಮಸೂದೆಗಳಿಗೆ ಸಂಬಂಧಿಸಿದಂತೆ ಅಂಕಿತ ಹಾಕಲು ರಾಜ್ಯಪಾಲರು ನಿರಾಕರಿಸಬಹುದು ಎಂಬ ಕೇಂದ್ರ ಸರ್ಕಾರದ ವಾದಕ್ಕೆ ನ್ಯಾಯಾಲಯ ಈ ರೀತಿ ಪ್ರತಿಕ್ರಿಯಿಸಿತು.
ರಾಷ್ಟ್ರಪತಿ ಮತ್ತು ರಾಜ್ಯಪಾಲರು ಮಸೂದೆಗಳ ಕುರಿತು ನಿರ್ಧರಿಸಲು ಗಡುವು ನಿಗದಿಪಡಿಸಿ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿದ್ದ ತೀರ್ಪು ಪ್ರಶ್ನಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸರ್ವೋಚ್ಚ ನ್ಯಾಯಾಲಯದ ಸಲಹೆ ಕೋರಿ ಸಂವಿಧಾನದ 143ನೇ ವಿಧಿಯ ಅಡಿಯಲ್ಲಿ ಮಾಡಿದ್ದ ಶಿಫಾರಸ್ಸಿನ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಪಿ ಎಸ್ ನರಸಿಂಹ ಹಾಗೂ ಅತುಲ್ ಎಸ್. ಚಂದೂರ್ಕರ್ ಅವರಿದ್ದ ಪೀಠ ಈ ವಿಚಾರ ಕೇಳಿತು.
ಸಾಂವಿಧಾನಿಕ ಅಧಿಕಾರ ಎಷ್ಟೇ ಅತ್ಯುನ್ನತವಾಗಿದ್ದರೂ ಮತ್ತು ಅದು ಕಾರ್ಯನಿರ್ವಹಿಸದಿದ್ದರೆ, ಆಗಲೂ ನ್ಯಾಯಾಲಯ ಕ್ರಮ ಕೈಗೊಳ್ಳಲಾಗದೆ ಅಸಹಾಯಕವಾಗಿ ಕೂರಬೇಕು ಎಂದು ಹೇಳಲಾಗುತ್ತದೆಯೇ ಎಂದು ಸಿಜೆಐ ಗವಾಯಿ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಅದಕ್ಕೆ ಪರಿಹಾರ ಎಂಬುದು ರಾಜಕೀಯ ವಲಯದಲ್ಲಿದೆ ಎಂದು ಹೇಳಿದರು.
“ನ್ಯಾಯಾಂಗ ಪರಿಹರಿಸಲಾಗದ ಕೆಲ ಸಮಸ್ಯೆಗಳಿವೆ. ಅವುಗಳನ್ನು ರಾಜಕೀಯ ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೂಲಕ ಪರಿಹರಿಸಬೇಕು. ಅಂತಹ ವಿಚಾರ ಬಂದಾಗ, ಜವಾಬ್ದಾರಿಯುತ ಮತ್ತು ಸ್ಪಂದಿಸುವ ಸಾಂವಿಧಾನಿಕ ಕಾರ್ಯಕರ್ತರು ಇರುತ್ತಾರೆ ಎಂಬ ನಿರೀಕ್ಷೆ ಇರಿಸಿಕೊಳ್ಳಬೇಕು ಮತ್ತು ಒಪ್ಪಿಕೊಳ್ಳಬೇಕು ಏಕೆಂದರೆ ಅವರು ಪ್ರತಿದಿನ ಮತ್ತು ಕನಿಷ್ಠ ಐದು ವರ್ಷಗಳ ಕಾಲ ಜನರಿಗೆ ಉತ್ತರಿಸಬೇಕಾಗುತ್ತದೆ" ಎಂದು ಮೆಹ್ತಾ ಹೇಳಿದರು.
ಅಂತಹ ಸಂದರ್ಭದಲ್ಲಿ ರಾಜ್ಯಪಾಲರು ಯಾರಿಗೂ ಉತ್ತರದಾಯಿಯಾಗದೆ ಉಳಿದುಬಿಡುತ್ತಾರೆ ಎಂದು ಸಿಜೆಐ ಗವಾಯಿ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿಗಳು ಪ್ರಧಾನಿ ಅಥವಾ ರಾಷ್ಟ್ರಪತಿಗಳ ಬಳಿಗೆ ವಿಷಯ ಕೊಂಡೊಯ್ಯಬಹುದಾದ್ದರಿಂದ ರಾಜ್ಯಪಾಲರು ದುರ್ಬಲವಾಗಿಯೇ ಇರುತ್ತಾರೆ ಎಂದರು.
ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 26, 2025ರಂದು ನಡೆಯಲಿದೆ. ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಹಾಗೂ ಮಧ್ಯಪ್ರದೇಶ ಸರ್ಕಾರದ ಪರವಾಗಿ ಮತ್ತೊಬ್ಬ ಹಿರಿಯ ನ್ಯಾಯವಾದಿ ನೀರಜ್ ಕಿಶನ್ ಕೌಲ್ ಅವರು ಕೂಡ ಇಂದು ಸಂಕ್ಷಿಪ್ತ ವಾದ ಮಂಡಿಸಿದರು.