
ಶ್ರೀಮಂತ ಕಕ್ಷಿದಾರರು ಸರದಿಯಲ್ಲಿ ಕಾಯದೆ ವಿಚಾರಣೆಗಳನ್ನು ಪಡೆಯಲು ಸಾಧ್ಯವಾಗುವ ರೀತಿಯಲ್ಲಿ ಪ್ರಕರಣಗಳ ಪಟ್ಟಿ ಇರಬಾರದು ಎಂದು ಸುಪ್ರೀಂ ಕೋರ್ಟ್ ಗುರುವಾರ ಬುದ್ಧಿವಾದ ಹೇಳಿದೆ.
ಗುಜರಾತ್ ಮೂಲದ ರಿಯಲ್ ಎಸ್ಟೇಟ್ ಮತ್ತು ಖಾಸಗಿ ರೆಸಾರ್ಟ್ ನಿರ್ವಹಣಾ ಕಂಪನಿಯಾದ ವೈಲ್ಡ್‌ವುಡ್ಸ್ ರೆಸಾರ್ಟ್ಸ್ ಅಂಡ್ ರಿಯಾಲ್ಟೀಸ್ ಸಲ್ಲಿಸಿದ್ದ ಅರ್ಜಿಯನ್ನು ತುರ್ತಾಗಿ ಪಟ್ಟಿ ಮಾಡಲು ನಿರಾಕರಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮೊದಲು ಜನವರಿ 2026ರಲ್ಲಿ ಪ್ರಕರಣ ಆಲಿಸುವುದಾಗಿ ತಿಳಿಸಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠ ಕಡೆಗೆ ಆಗಸ್ಟ್ 2025ರಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿತು.
ಅದರಲ್ಲಿಯೂ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದೆದುರು ಸಂಸ್ಥೆಯು ಪ್ರಕರಣವನ್ನು ಪ್ರಸ್ತಾಪಿಸಿದ ನಂತರ ಇಂದು (ಮೇ ) ಅದನ್ನು ಪಟ್ಟಿ ಮಾಡಿರುವುದರಿಂದ ಪ್ರಕರಣವನ್ನು ಆದ್ಯತೆ ಮೇರೆಗೆ ಆಲಿಸುವಂತಹ ತುರ್ತು ಏನಾದರೂ ಇದೆಯೇ? ಎಂದು ಕಂಪನಿಯ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ನ್ಯಾಯಾಲಯ ಕೇಳಿತು.
ಗುಜರಾತ್ ಹೈಕೋರ್ಟ್ ಡಿಸೆಂಬರ್ 2024ರಲ್ಲಿ ಆದೇಶ ನೀಡಿತ್ತಾದರೂ ಕಂಪೆನಿ ಅದರ ವಿರುದ್ಧ ಕಳೆದ ತಿಂಗಳಷ್ಟೇ ಮೇಲ್ಮನವಿ ಸಲ್ಲಿಸಿತ್ತು. ಅದನ್ನು ಮೇ 1ರಂದೇ ಪಟ್ಟಿ ಮಾಡಲಾಗುತ್ತಿದೆಯೇ ಎಂದು ಗಮನಸೆಳೆದ ನ್ಯಾಯಾಲಯ ಇದು ಸುಪ್ರೀಂ ಕೋರ್ಟ್ ಶ್ರೀಮಂತರಿಗೆ ಮಾತ್ರವೇ ಎಂಬ ಅಭಿಪ್ರಾಯವನ್ನು ಮೂಡಿಸಬಹುದೇ? ನಾವು ಅದನ್ನು ಒಪ್ಪುವುದಿಲ್ಲ. ಅಂತಹ ತುರ್ತು ಏನಿದೆ ಎಂದು ನ್ಯಾಯಪೀಠ ಪ್ರಶ್ನಿಸಿತು.
2016ರಲ್ಲಿ ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನದ ಬಳಿ ವೈಲ್ಡ್‌ವುಡ್ ರೆಸಾರ್ಟ್ಸ್ ನಡೆಸಿದ ಭೂ ವ್ಯವಹಾರಗಳು ವಿವಾದಕ್ಕೆ ಕಾರಣವಾಗಿದ್ದವು. ಅಂದಿನ ಮುಖ್ಯಮಂತ್ರಿ ಬಿಜೆಪಿಯ ಆನಂದಿ ಬೆನ್ ಪಟೇಲ್ ಅವರ ಮಗಳ ವ್ಯಾಣಿಜ್ಯ ಪಾಲುದಾರರು ರೆಸಾರ್ಟ್ ನಡೆಸುತ್ತಿದ್ದರಿಂದ, ರಾಜಕೀಯ ಪಕ್ಷಪಾತ ನಡೆದು ಗಿರ್ ಅಭಯಾರಣ್ಯದ ಬಳಿ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು .
ರಾಜ್ಯ ವನ್ಯಜೀವಿ ಮಂಡಳಿ ಯೋಜನೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕಂಪನಿ ಈ ಹಿಂದೆ ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿ ವೈಲ್ಡ್‌ವುಡ್ ರೆಸಾರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.