ಎನ್ಎಲ್ಎಸ್‌ಐಯು ಶ್ರೇಷ್ಠವೋ? ಉತ್ಕೃಷ್ಟವೋ?ಗಮನಸೆಳೆದ ಅಡ್ವೊಕೇಟ್ ಜನರಲ್ ನಾವದಗಿ ಅವರ ವಾದ

ಶ್ರೇಷ್ಠ ಮತ್ತು ಉತ್ಕೃಷ್ಟ ಸಂಸ್ಥೆಗಳ ನಡುವೆ ತೆಳುವಾದ ಗೆರೆ ಇದೆ. ಕಾನೂನಿನಲ್ಲಿ ಶ್ರೇಷ್ದ ಸಂಸ್ಥೆಗೆ (ಇನ್ ಸ್ಟಿಟ್ಯೂಟ್ ಆಫ್ ಎಮಿನೆನ್ಸ್) ಮಾನ್ಯತೆ ಇದೆಯೇ ವಿನಾ ಉತ್ಕೃಷ್ಟ ಸಂಸ್ಥೆಗಲ್ಲ (ಇನ್ ಸ್ಟಿಟ್ಯೂಟ್ ಆಫ್ ಎಕ್ಸೆಲೆನ್ಸ್).
ಎನ್ಎಲ್ಎಸ್‌ಐಯು ಶ್ರೇಷ್ಠವೋ? ಉತ್ಕೃಷ್ಟವೋ?ಗಮನಸೆಳೆದ ಅಡ್ವೊಕೇಟ್ ಜನರಲ್ ನಾವದಗಿ ಅವರ ವಾದ

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ಎನ್ಎಲ್ಎಸ್ಐಯು) ಸ್ಥಳೀಯರಿಗೆ ಶೇ.25 ಮೀಸಲಾತಿ ಕಲ್ಪಿಸಿರುವ ವಿಚಾರ ಭಾರಿ ಚರ್ಚೆ ಹುಟ್ಟುಹಾಕಿದೆ. ರಾಜ್ಯ ಸರ್ಕಾರವು ಮೀಸಲಾತಿಯ ಮೂಲಕ ಸ್ಥಳೀಯರಿಗೆ ಆದ್ಯತೆ ಕಲ್ಪಿಸುವ ಮಾತುಗಳನ್ನಾಡುತ್ತಿದ್ದರೆ, ಭಾರತೀಯ ವಕೀಲರ ಪರಿಷತ್ತು ಭಿನ್ನರಾಗ ತೆಗೆದಿದ್ದು, ಈ ಸಂಬಂಧ ಹೈಕೋರ್ಟ್ ನಿರ್ಧಾರ ಕೈಗೊಳ್ಳಲಿದೆ ಎಂದಿದೆ. ಈ ಮಧ್ಯೆ, ಕಾನೂನು ಶಾಲೆಯ ಶ್ರೇಷ್ಠತೆ ಮತ್ತು ಉತ್ಕೃಷ್ಟತೆ ವಿಚಾರಗಳು ಚರ್ಚೆಗೆ ಈಡಾಗಿವೆ.

ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ನಿಲುವನ್ನು ಸೋಮವಾರ ನಡೆದ ವಿಚಾರಣೆಯಲ್ಲಿ ಸಮರ್ಥಿಸಿರುವ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಇಂಥದೊಂದು ಚರ್ಚೆಗೆ ನಾಂದಿ ಹಾಡಿದ್ದು, ಕಾನೂನು ಶಾಲೆಯು ಉತ್ಕೃಷ್ಟವಾಗಿದೆಯೇ ವಿನಾ ಶ್ರೇಷ್ಠವಾದುದಲ್ಲ ಎಂದಿದ್ದಾರೆ. ಕಾನೂನು ಶ್ರೇಷ್ಠವಾದ ಸಂಸ್ಥೆಯನ್ನು ಮಾತ್ರ ಮಾನ್ಯ ಮಾಡುತ್ತದೆ ಎನ್ನುವ ಮೂಲಕ ತಮ್ಮ ವಾದಕ್ಕೆ ಪುಷ್ಟಿ ಒದಗಿಸಿದ್ದಾರೆ.

ಎನ್ಎಲ್ಎಸ್‌ಐಯುವನ್ನು ನಾವು ಉತ್ಕೃಷ್ಟವಾದ ಸಂಸ್ಥೆ ಎನ್ನಬಹುದು. ಆದರೆ, ಕಾನೂನು ಶ್ರೇಷ್ಠ ಸಂಸ್ಥೆ ಅಥವಾ ರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ಸಂಸ್ಥೆಗಳನ್ನು ಮಾತ್ರ ಪರಿಗಣಿಸುತ್ತದೆ. ಹಾಗೆಂದ ಮಾತ್ರ ಎನ್‌ಎಲ್‌ಎಸ್‌ಐಯು ವಿಶೇಷ ಮಹತ್ವ ಹೊಂದಿಲ್ಲದ ಸಂಸ್ಥೆ ಎಂದಲ್ಲ. ಆದರೆ, ರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ಸಂಸ್ಥೆಗಳಿಗೆ ಕಾನೂನಿನಲ್ಲಿ ತಮ್ಮದೇ ಆದ ಮಹತ್ವವಿದೆ. ಎಐಐಎಂಎಸ್‌ (ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಮತ್ತು ಇತರೆ ಸಂಸ್ಥೆಗಳನ್ನು ರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ಸಂಸ್ಥೆಗಳಲ್ಲಿ ಸೇರ್ಪಡೆಗೊಳಿಸಲಾಗಿದೆ. ಐಐಎಸ್ಸಿ ಬೆಂಗಳೂರು, ಐಐಟಿ-ಬಾಂಬೆ (ಭಾರತೀಯ ತಾಂತ್ರಿಕ ಸಂಸ್ಥೆ) ಎಲ್ಲವೂ ಶ್ರೇಷ್ಠ ಸಂಸ್ಥೆಗಳ ಪಟ್ಟಿಯಲ್ಲಿವೆ” ಎಂದು ನಾವದಗಿ ವಿವರಿಸಿದ್ದಾರೆ.

ಕಳೆದ ವರ್ಷ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅಡಿ ಬರುವ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ಸ್ಥಾಪಿಸಲಾಗಿರುವ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ತನ್ನ 542ನೇ ಸಭೆಯಲ್ಲಿ ಎನ್ ಗೋಪಾಲಸ್ವಾಮಿ ನೇತೃತ್ವದ ವಿಶೇಷಾಧಿಕಾರ ಹೊಂದಿರುವ ತಜ್ಞರ ಸಮಿತಿ (ಇಇಸಿ) ಸಲ್ಲಿಸಿದ್ದ ವರದಿಯನ್ನು ಒಪ್ಪಿಕೊಂಡಿದೆ. ವರದಿಯಲ್ಲಿ ತಲಾ 15 ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಶ್ರೇಷ್ಠತಾ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಜಾಗತಿಕ ಶ್ರೇಷ್ಠ ಸಂಸ್ಥೆಗಳ ಪಟ್ಟಿಗೆ ಅನುಗುಣವಾಗಿ ಭಾರತೀಯ ಸಂಸ್ಥೆಗಳನ್ನು ರೂಪಿಸುವುದು ಯೋಜನೆಯ ಉದ್ದೇಶವಾಗಿದೆ.

ಖಾಸಗಿ ಸಂಸ್ಥೆಗಳಿಗೆ ಶ್ರೇಷ್ಠ ಸಂಸ್ಥೆ ಸ್ಥಾನ ಕಲ್ಪಿಸಿದರೆ ಅವುಗಳಿಗೆ ಯಾವುದೇ ತೆರನಾದ ಆರ್ಥಿಕ ನೆರವು ದೊರೆಯುವುದಿಲ್ಲ. ಬದಲಾಗಿ ವಿಶೇಷ ವಿಭಾಗದ ಸ್ವಾಯತ್ತ ವಿಶ್ವವಿದ್ಯಾಲಯಗಳ ಪೈಕಿ ಅವುಗಳಿಗೆ ಮತ್ತಷ್ಟು ಸ್ವಾಯತ್ತತೆ ಪ್ರಾಪ್ತಿಯಾಗಲಿದೆ.

ಯುಜಿಸಿ ನಿಯಮದ ಪ್ರಕಾರ ತಲಾ 10 ಸಂಸ್ಥೆಗಳಿಗೆ ಮಾತ್ರ ಶ್ರೇಷ್ಠ ಸಂಸ್ಥೆ ಎಂಬ ಹಿರಿಮೆ ಕಲ್ಪಿಸಬಹುದು. ಆದರೆ, ಪಾರದರ್ಶಕ ಮತ್ತು ಪರಿಶೀಲಿಸಬಹುದಾದ ಮಾನದಂಡಗಳ ಆಧಾರದ ಅನ್ವಯ ಇಇಸಿ ಶಿಫಾರಸು ಮಾಡಿದ ಸಂಸ್ಥೆಗಳಿಗೆ ಯುಜಿಸಿ ‘ಶ್ರೇಷ್ಠ’ ವಿಶೇಷಣ ಕಲ್ಪಿಸಿದೆ.

ದೆಹಲಿ, ಬಾಂಬೆ, ಮದ್ರಾಸ್ ಮತ್ತು ಖರಗ್ ಪುರ ಭಾರತೀಯ ತಾಂತ್ರಿಕ ಸಂಸ್ಥೆಗಳು (ಐಐಟಿ), ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ದೆಹಲಿ, ಹೈದರಾಬಾದ್, ಜಾಧವಪುರ, ಅಣ್ಣಾ, ಪಂಜಾಬ್, ಆಂಧ್ರ ವಿಶ್ವವಿದ್ಯಾಲಯಗಳು, ಸಾವಿತ್ರಿಬಾಯಿ ಪುಲೆ-ಪುಣೆ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ(ಎಎಂಯು), ಬನಾರಸ್ ಹಿಂದೂ ವಿಶ್ವವಿದ್ಯಾಲಯಗಳು ಯುಜಿಸಿಯ 15 ಶ್ರೇಷ್ಠ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

Also Read
ಎನ್‌ಎಲ್‌ಎಸ್ಐಯುನಲ್ಲಿ ಸ್ಥಳೀಯರಿಗೆ ಶೇ. 25 ಮೀಸಲಾತಿ: ಆದೇಶ ಕಾಯ್ದಿರಿಸಿದ ಹೈಕೋರ್ಟ್

ಯುಜಿಸಿಯು ಎನ್ಎಲ್ಎಸ್‌ಐಯುವನ್ನು ರಾಜ್ಯ ವಿಶ್ವವಿದ್ಯಾಲಯ ಎಂದು ಪರಿಗಣಿಸಿದೆ ಎಂದಿರುವ ನಾವದಗಿ, ಎನ್ಎಲ್ಎಸ್‌ಐಯು ತಿದ್ದುಪಡಿ ಕಾಯ್ದೆ-2020 ತಂದಿರುವ ಏಕೈಕ ಉದ್ದೇಶವು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ರಾಜ್ಯದಲ್ಲೇ ಉಳಿಸಿಕೊಳ್ಳುವುದಾಗಿದೆ ಎಂದು ವಾದಿಸಿದ್ದಾರೆ. “ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಾತಿ ಕಲ್ಪಿಸುವುದು ರಾಜ್ಯದ ನೀತಿ” ಎಂಬುದು ಅವರ ವಿವರಣೆ.

ಎನ್ಎಲ್ಎಸ್‌ನಿಂದ ಪ್ರತಿ ವರ್ಷ 80 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಹೊರಬರುತ್ತಾರೆ. ಕಳೆದ 10 ವರ್ಷಗಳಲ್ಲಿ 800 ಮಂದಿ ಪದವೀಧರರಾಗಿದ್ದು, ಈ ಪೈಕಿ ಕೇವಲ 33 ಮಂದಿ ಮಾತ್ರ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಣಿ ಮಾಡಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ರಾಜ್ಯದಲ್ಲೇ ಉಳಿಯಲಿ ಎಂಬ ಉದ್ದೇಶದಿಂದ ಮೀಸಲಾತಿ ತರಲಾಗಿದೆ ಎಂದು ನಾವದಗಿ ತಮ್ಮ ವಾದದಲ್ಲಿ ಸಮರ್ಥಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com