ಮಾದಕವಸ್ತುವಿನ ವಿಧಿವಿಜ್ಞಾನ ವರದಿ ಪಡೆಯದೆ ತನಿಖೆ ಪೂರ್ಣಗೊಳಿಸಬಹುದೇ? ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್

ಅಂತಹ ಸಂದರ್ಭಗಳಲ್ಲಿ ತನಿಖೆ ಪೂರ್ಣಗೊಳಿಸಲು ನೀಡಲಾದ ಕಾಲಾವಕಾಶಕ್ಕೆ ಏನಾದರೂ ಮಿತಿ ಇದೆಯೇ ಎಂದು ನ್ಯಾಯಾಲಯ ನಿರ್ಧರಿಸಬೇಕು ಎಂಬುದಾಗಿಯೂ ಅರ್ಜಿದಾರರು ಮನವಿ ಮಾಡಿದರು.
NDPS Act
NDPS Act

ವಶಪಡಿಸಿಕೊಂಡ ಮಾದಕವಸ್ತುವಿನ ವಿಧಿ ವಿಜ್ಞಾನ ಪರೀಕ್ಷಾ ವರದಿ ಪಡೆಯದೆಯೇ 1985ರ ಮಾದಕವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್‌) ಕಾಯಿದೆಯಡಿಯ ಪ್ರಕರಣಗಳನ್ನು ಪೂರ್ಣಗೊಳಿಸಬಹುದೇ ಎಂದು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಕೇಂದ್ರಕ್ಕೆ ಗುರುವಾರ ನೋಟಿಸ್‌ ನೀಡಿದೆ (ಮೊಹಮ್ಮದ್ ಅರ್ಬಾಜ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ).

ಈ ಕಾಯಿದೆಯಡಿ ಆರೋಪಿಗಳ ಜಾಮೀನು ತಿರಸ್ಕರಿಸಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ನಡೆಸಿತು.

ಕಾನೂನುಬದ್ಧವಾಗಿ ಅನುಮತಿಸಲಾದ ಕಾಲಮಿತಿಯೊಳಗೆ ತನಿಖೆ ಪೂರ್ಣಗೊಳಿಸಲು ತನಿಖಾ ಸಂಸ್ಥೆ ವಿಫಲವಾದ ಕಾರಣ ಕಾನೂನುಬದ್ಧ ಜಾಮೀನಿಗೆ ಅರ್ಹರಾಗಿದ್ದೇವೆ ಎಂದು ಮೂವರು ಆರೋಪಿಗಳು ವಾದಿಸಿದ್ದರು. ವಿಳಂಬದ ಕಾರಣ ನೀಡಿ ಮೊದಲು ಇವರ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಮೇಲ್ಮನವಿ ಸಲ್ಲಿಸಿದಾಗ ಹೈಕೋರ್ಟ್‌ ವಿಳಂಬ ಕುರಿತಾದ ತೀರ್ಪನ್ನು ರದ್ದುಗೊಳಿಸಿತು. ಆದರೆ ಆರೋಪಿಗಳಿಗೆ ಶಾಸನಬದ್ಧ ಜಾಮೀನು ನೀಡಲಾಗದು ಏಕೆಂದರೆ ಸಂಬಂಧಪಟ್ಟ ಸಮಯದಲ್ಲಿ ತನಿಖೆ ಅಪೂರ್ಣವಾಗಿದೆ ಎನ್ನಲಾಗದು ಎಂದು ವಿವರಿಸಿತು.

Also Read
ಮಾದಕವಸ್ತು ಪ್ರಕರಣ: ಶಾರೂಖ್ ಖಾನ್ ಪುತ್ರ ಆರ್ಯನ್‌ ಸಹಿತ ಮೂವರಿಗೆ ಜಾಮೀನು ಮಂಜೂರು ಮಾಡಿದ ಬಾಂಬೆ ಹೈಕೋರ್ಟ್

ಆರೋಪಿಯಿಂದ ವಶಪಡಿಸಿಕೊಳ್ಳಲಾದ ಮಾದಕವಸ್ತುವಿನ ಸ್ವರೂಪ ಮತ್ತು ಗುರುತನ್ನು ಅವಲಂಬಿಸಿ ಪ್ರಕರಣದ ತನಿಖೆ ಪೂರ್ಣಗೊಂಡಿದೆ ಎನ್ನಬಹುದೇ ಅಥವಾ ವಶಪಡಿಸಿಕೊಂಡ ಮಾದಕವಸ್ತುವಿನ ಸ್ವರೂಪ, ಅಂಶ ಇತ್ಯಾದಿಗಳನ್ನು ಸಾಬೀತುಪಡಿಸುವ ಯಾವುದೇ ಪುರಾವೆ ಸಂಗ್ರಹಿಸದಿದ್ದರೂ ತನಿಖೆ ಪೂರ್ಣಗೊಂಡಿದೆ ಎಂದು ಹೇಳಬಹುದೇ ಎಂಬುದು ಈ ಪ್ರಕರಣದಲ್ಲಿ ನಿರ್ಧಾರವಾಗಬೇಕು ಎಂಬುದಾಗಿ ವಕೀಲರಾದ ಆನಸ್‌ ತನ್ವೀರ್‌ ಮತ್ತು ರುಡ್ರೊ ಚಟರ್ಜಿ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ಕೇಳಲಾಗಿದೆ.

ಅಂತಹ ಸಂದರ್ಭಗಳಲ್ಲಿ ತನಿಖೆ ಪೂರ್ಣಗೊಳಿಸಲು ನೀಡಲಾದ ಕಾಲಾವಕಾಶಕ್ಕೆ ಏನಾದರೂ ಮಿತಿ ಇದೆಯೇ ಎಂದು ನ್ಯಾಯಾಲಯ ನಿರ್ಧರಿಸಬೇಕು ಎಂಬುದಾಗಿಯೂ ಅರ್ಜಿದಾರರು ಮನವಿ ಮಾಡಿದ್ದಾರೆ.

ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ (ಸಿಎಫ್‌ಎಸ್‌ಎಲ್) ವರದಿಯ ಅನುಪಸ್ಥಿತಿಯಲ್ಲಿ ಎನ್‌ಡಿಪಿಎಸ್ ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸುವ ಬಗ್ಗೆ ಹೈಕೋರ್ಟ್‌ಗಳ ವಿಭಿನ್ನ ಅಭಿಪ್ರಾಯಗಳನ್ನು ನೀಡಿವೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗದ ಹಿತದೃಷ್ಟಿಯಿಂದ ಸುಪ್ರೀಂಕೋರ್ಟ್‌ ಅಂತಿಮ ತೀರ್ಪು ನೀಡುವ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com