'ಸ್ಮಾರ್ಟ್‌ ಮೀಟರ್‌ ದರ ಹೆಚ್ಚಳ ಉಚಿತ ಕೊಡುಗೆಗಳ ಪರಿಣಾಮವೇ?' ಹೈಕೋರ್ಟ್‌ ಕಿಡಿ

“ಉಚಿತವಾಗಿ ವಿದ್ಯುತ್ ಕೊಡಿ ಎಂದು ನಿಮ್ಮನ್ನು ಯಾರು ಕೇಳಿದ್ದರು? ಏಕಾಏಕಿ ಈ ರೀತಿ ಬೆಲೆ ಏರಿಕೆ ಮಾಡಿದರೆ ಹೇಗೆ? ಎಲ್ಲರೂ ಹೆಚ್ಚು ಹಣ ಕೊಟ್ಟು ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕು ಎಂದರೆ ಬಡವರು ಏನು ಮಾಡಬೇಕು?” ಎಂದ ನ್ಯಾಯಾಲಯ.
'ಸ್ಮಾರ್ಟ್‌ ಮೀಟರ್‌ ದರ ಹೆಚ್ಚಳ ಉಚಿತ ಕೊಡುಗೆಗಳ ಪರಿಣಾಮವೇ?' ಹೈಕೋರ್ಟ್‌ ಕಿಡಿ
Published on

ಉಚಿತವಾಗಿ ವಿದ್ಯುತ್ ಕೊಡಿ ಎಂದು ನಿಮ್ಮನ್ನು ಯಾರು ಕೇಳಿದ್ದರು ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್‌, ಹೊಸದಾಗಿ ನಿರ್ಮಾಣಗೊಂಡಿರುವ ಮನೆಯೊಂದಕ್ಕೆ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳುವಂತೆ ಒತ್ತಾಯಿಸಿ, ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ನೀಡಿದ್ದ ಪತ್ರಕ್ಕೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ. 

ದೊಡ್ಡಬಳ್ಳಾಪುರದ ಟಿ ಬಿ ನಾರಾಯಣಪ್ಪ ಲೇ ಔಟ್ ನಿವಾಸಿ ಎಂ ಜಯಲಕ್ಷ್ಮಿ ಅವರು ಹೊಸದಾಗಿ ನಿರ್ಮಿಸಿರುವ ತಮ್ಮ ಮನೆಗೆ ಸಿಂಗಲ್ ಫೇಸ್‌ನಿಂದ ತ್ರೀ ಫೇಸ್‌ಗೆ ಮೀಟರ್‌ ಪರಿವರ್ತನೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಬೆಸ್ಕಾಂ ಅಧಿಕಾರಿಗಳು, ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕು ಎಂದು ತಾಕೀತು ಮಾಡಿ ಸಂವಹನ ಪತ್ರವೊಂದನ್ನು ನೀಡಿದ್ದರು.

ಈ ಸಂಬಂಧ ದೊಡ್ಡಬಳ್ಳಾಪುರ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೀಡಿದ್ದ ಸಂವಹನ ಪತ್ರವನ್ನು ಪ್ರಶ್ನಿಸಿ ಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿ, ಸ್ಮಾರ್ಟ್ ಮೀಟರ್‌ಗಳ ಬೆಲೆ ನಿಗದಿಗೆ ಸಂಬಂಧಿಸಿದ ಸರ್ಕಾರದ ಕ್ರಮಕ್ಕೆ ಚಾಟಿ ಬೀಸಿತು.

“ಉಚಿತವಾಗಿ ವಿದ್ಯುತ್ ಕೊಡಿ ಎಂದು ನಿಮ್ಮನ್ನು ಯಾರು ಕೇಳಿದ್ದರು? ಏಕಾಏಕಿ ಈ ರೀತಿ ಬೆಲೆ ಏರಿಕೆ ಮಾಡಿದರೆ ಹೇಗೆ? ಎಲ್ಲರೂ ಹೆಚ್ಚು ಹಣ ಕೊಟ್ಟು ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕು ಎಂದರೆ ಬಡವರು ಏನು ಮಾಡಬೇಕು? ಇದೆಲ್ಲವೂ ಉಚಿತ ಗ್ಯಾರಂಟಿಗಳಿಂದ ಎದುರಾಗಿರುವ ಸಮಸ್ಯೆಯೇ?” ಎಂದು ಸರ್ಕಾರದ ನಿಲುವನ್ನು ಪ್ರಶ್ನಿಸಿತು.

“ತಾತ್ಕಾಲಿಕ ಸಂಪರ್ಕಕ್ಕೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ಎಂದು ತಿಳಿಸಿ, ಇದೀಗ ಶಾಶ್ವತ ಸಂಪರ್ಕಕ್ಕೂ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳುವಂತೆ ಒತ್ತಾಯ ಮಾಡುವುದು ಕಠಿಣ ಕ್ರಮವಲ್ಲವೇ? ಈ ಸ್ಮಾರ್ಟ್ ಮೀಟರ್‌ಗಳನ್ನು ಹೊರ ಗುತ್ತಿಗೆದಾರರ ಮೂಲಕ ಖರೀದಿ ಮಾಡುವುದು ಅತ್ಯಂತ ಅಪಾಯಕಾರಿ ಕ್ರಮವಲ್ಲವೇ? ಇದು ಗ್ರಾಹಕರಿಗೆ ದೊಡ್ಡ ಹೊರೆಯಾಗುವುದಿಲ್ಲವೇ? ಇದು ಯಾವ ನ್ಯಾಯ?” ಎಂದು ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿತು.

ರಾಜ್ಯ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪರ ವಕೀಲರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಜೂನ್ 4ಕ್ಕೆ ಮುಂದೂಡಿತು.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಕೆ ಪ್ರಭುಲಿಂಗ ನಾವದಗಿ ಅವರು “ಸ್ಮಾರ್ಟ್‌ ಮೀಟರ್‌ ದೇಶದ ಬೇರೆಬೇರೆ ಕಡೆ ₹950 ರೂಪಾಯಿ ಇದೆ. ಆದರೆ, ನಮ್ಮಲ್ಲಿ ₹8,000ಕ್ಕೂ ಅಧಿಕ ಹಣ ಸಂಗ್ರಹಿಸಲಾಗುತ್ತಿದೆ” ಎಂದು ಆಕ್ಷೇಪಿಸಿದರು.

Also Read
ಸ್ಮಾರ್ಟ್‌ ಮೀಟರ್ ಮಾರಾಟ, ನಿರ್ವಹಣೆ ಟೆಂಡರ್ ರದ್ದತಿಗೆ ಮನವಿ: ರಾಜ್ಯ ಸರ್ಕಾರ, ಬೆಸ್ಕಾಂಗೆ ಹೈಕೋರ್ಟ್‌ ನೋಟಿಸ್‌

ಅರ್ಜಿಯಲ್ಲಿ ಕೋರಿಕೆ ಏನು: ಕರ್ನಾಟಕ ವಿದ್ಯುತ್ ನಿಯಂತ್ರಣಾ ಆಯೋಗ (ಪ್ರೀ ಪೇಯ್ಡ್ ಸ್ಮಾರ್ಟ್ ಮೀಟರ್) ನಿಯಮಗಳು-2024ರ ಅನ್ವಯ ಎಲ್ಲ ವರ್ಗದ ಗ್ರಾಹಕರೂ ಪ್ರೀ ಪೇಯ್ಡ್‌ ಮೀಟರ್‌ಗಳನ್ನು ಪಡೆಯಲು ಅವಕಾಶ ಇದೆ. ಈ ಕ್ರಮ 2025ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನಿಯಮ ರೂಪಿಸಲಾಗಿದೆ. ಈ ಪ್ರಕ್ರಿಯೆ ತಾತ್ಕಾಲಿಕ ಸಂಪರ್ಕಕ್ಕೆ ಮಾತ್ರ ಎಂದು ತಿಳಿಸಲಾಗಿದೆ. ನಮ್ಮ ಸಂಪರ್ಕ ಶಾಶ್ವತವಾದದ್ದು. ಆದರೆ, ಸ್ಮಾರ್ಟ್‌ ಮೀಟರ್‌ ಅಳವಡಿಸಿಕೊಳ್ಳುವಂತೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪತ್ರವೊಂದನ್ನು ನೀಡಿದ್ದಾರೆ. ಈ ಮೀಟರ್‌ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಹೊರ ಭಾಗದ ಏಜೆನ್ಸಿಗಳ ಮೂಲಕ ₹2 ಸಾವಿರ ಬೆಲೆಯ ಮೀಟರ್‌ ಅನ್ನು ₹10 ಸಾವಿರಕ್ಕೆ ಖರೀದಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

Kannada Bar & Bench
kannada.barandbench.com