ಬೆಂಗಳೂರಿನ ಕೋರಮಂಗಲದ ಸರ್ವೆ ನಂಬರ್ 9 ಮತ್ತು 10ರ ವ್ಯಾಪ್ತಿಯ ಜಾಗವನ್ನು ಆಟದ ಮೈದಾನವನ್ನಾಗಿ ಬಳಕೆ ಮಾಡಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸುವಂತೆ ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ಬೆಂಗಳೂರಿನ ಡಾ. ಬಿ ಆರ್ ಅಂಬೇಡ್ಕರ್ ಯುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಲ್ಯಾಣ ಸಂಘದ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ ಆರ್ ಡೇವಿಡ್ ಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ವಿಭಾಗೀಯ ಪೀಠ ನಡೆಸಿತು.
ಈ ವೇಳೆ ಪಾಸ್‌ಪೋರ್ಟ್ ಕಚೇರಿ ಪರ ವಾದಿಸಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು “ಅಸಲಿಗೆ ಅರ್ಜಿಯು ವಿಚಾರಣಾ ಮಾನ್ಯತೆ ಹೊಂದಿಲ್ಲ. ಇದೊಂದು ಸಿವಿಲ್ ವ್ಯಾಜ್ಯವಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಲಾಗಿದೆ. ಅರ್ಜಿದಾರರ ಸಂಘದ ಬಗ್ಗೆ ಅಗತ್ಯ ದಾಖಲೆಗಳನ್ನೂ ಒದಗಿಸಿಲ್ಲ. ಜಾಗವು ಬಿಬಿಎಂಪಿಗೆ ಸೇರಿದೆ ಎಂದು ಅರ್ಜಿದಾರರು ಹೇಳುತ್ತಾರೆ. ಆದರೆ, ಜಾಗ ತನ್ನದು ಎಂದು ಬಿಬಿಎಂಪಿ ಈವರೆಗೆ ಹೇಳಿಲ್ಲ. ಈ ಜಾಗವು 1993ರಲ್ಲಿ ಪಾಸ್‌ಪೋರ್ಟ್ ಕಚೇರಿಗೆ ಹಂಚಿಕೆಯಾಗಿದೆ. ಸರ್ವೆ ನಂಬರ್ ಗೊಂದಲವನ್ನು 2023ರಲ್ಲಿ ಸರಿಪಡಿಸಲಾಗಿದೆ” ಎಂದು ವಿವರಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ಆಕ್ಷೇಪಾರ್ಹ ಜಾಗವನ್ನು ಆಟದ ಮೈದಾನವನ್ನಾಗಿ ಬಳಕೆ ಮಾಡಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನಿಲುವು ಸ್ಪಷ್ಟಪಡಿಸಿ ಉತ್ತರ ಸಲ್ಲಿಸುವಂತೆ ಬಿಬಿಎಂಪಿ ಪರ ವಕೀಲರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಸದಾನಂದ ಜಿ. ಶಾಸ್ತ್ರಿ ವಾದಿಸಿದರು.
ಕೋರಮಂಗಲದ ಸರ್ವೇ ನಂ.10ರಲ್ಲಿನ ಬಯಲು ಜಾಗವನ್ನು ಕಳೆದ 70 ವರ್ಷಗಳಿಂದ ಆಟದ ಮೈದಾನವನ್ನಾಗಿ ಬಳಕೆ ಮಾಡಲಾಗುತ್ತಿದೆ. 10ರಿಂದ 20 ಸಾವಿರ ವಿದ್ಯಾರ್ಥಿಗಳು ಆಟದ ಮೈದಾನವನ್ನಾಗಿ ಉಪಯೋಗಿಸುತ್ತಿದ್ದಾರೆ. ಈಜೀಪುರದ ಸುತ್ತಲಿನ 30ಕ್ಕೂ ಅಧಿಕ ಶಾಲೆಗಳಿಗೆ ಈ ಮೈದಾನವೇ ಆಧಾರವಾಗಿದೆ. ಇದೀಗ ಪಾಸ್‌ಪೋರ್ಟ್ ಸೇವಾ ಕೇಂದ್ರವು ಈ ಮೈದಾನದಲ್ಲಿ ಸಭಾಂಗಣ ನಿರ್ಮಿಸುತ್ತಿದೆ. ಕಾಂಪೌಂಡ್ ಕಟ್ಟಿ ಕಳೆದ 10 ತಿಂಗಳಿಂದ ಪ್ರವೇಶ ನಿರ್ಬಂಧಿಸಿದೆ. ಆದ್ದರಿಂದ ಈ ಒತ್ತುವರಿ ತೆರವುಗೊಳಿಸುವಂತೆ ಬಿಬಿಎಂಪಿಗೆ ನಿರ್ದೇಶ ನೀಡಬೇಕು. ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಸೂಚನೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.