“ಭಾರತದಲ್ಲಿ ಪ್ರತಿಭೆಗೆ ಕೊರತೆ ಇದೆಯೇ?” ವಿದೇಶಿ ಬೋಧಕರನ್ನು ನೇಮಿಸುವ ಬಿಸಿಐ ಪ್ರಸ್ತಾವಕ್ಕೆ ನ್ಯಾ. ಗವಾಯಿ ಅಸಮ್ಮತಿ

“ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌, ಮಹಾತ್ಮಾ ಗಾಂಧಿ, ಪಂಡಿತ್‌ ಜವಹರಲಾಲ್‌ ನೆಹರೂ, ಮೋತಿಲಾಲ್‌ ನೆಹರೂ, ವಲ್ಲಭಭಾಯಿ ಪಟೇಲ್‌ ಎಲ್ಲರೂ ಕಾನೂನು ಬೋಧಕರು. ತಮ್ಮ ಲಾಭದಾಯಕ ವಕೀಲಿಕೆ ಬಿಟ್ಟು ದೇಶದ ಏಳ್ಗೆಗೆ ಶ್ರಮಿಸಿದರು” ಎಂದ ನ್ಯಾ. ಗವಾಯಿ.
“ಭಾರತದಲ್ಲಿ ಪ್ರತಿಭೆಗೆ ಕೊರತೆ ಇದೆಯೇ?” ವಿದೇಶಿ ಬೋಧಕರನ್ನು ನೇಮಿಸುವ ಬಿಸಿಐ ಪ್ರಸ್ತಾವಕ್ಕೆ ನ್ಯಾ. ಗವಾಯಿ ಅಸಮ್ಮತಿ

ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಟ್ರಸ್ಟ್‌ ಗೋವಾದಲ್ಲಿ ಆರಂಭಿಸಿರುವ ಭಾರತೀಯ ಅಂತಾರಾಷ್ಟ್ರೀಯ ಕಾನೂನು ಶಿಕ್ಷಣ ಮತ್ತು ಸಂಶೋಧನಾ ವಿಶ್ವವಿದ್ಯಾಲಯ (ಐಐಯುಎಲ್‌ಇಆರ್‌) ವಿದೇಶಿ ಕುಲಪತಿ ಮತ್ತು ಬೋಧಕರನ್ನು ನೇಮಕ ಮಾಡುವ ಸಲಹೆಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಅವರು ಅಸಮ್ಮತಿ ವ್ಯಕ್ತಪಡಿಸಿದರು.

ಗೋವಾದಲ್ಲಿ ಗುರುವಾರ ನಡೆದ ಐಐಯುಎಲ್‌ಇಆರ್‌ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾನೂನು ವಿಶ್ವವಿದ್ಯಾಲಯವು ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿರುವ ಅಗತ್ಯವಿದೆ. ಆದರೆ, ವಿದೇಶಿ ಬೋಧಕರನ್ನು ನೇಮಕ ಮಾಡಬೇಕು ಎಂಬ ಗೀಳನ್ನು ಬಿಡಬೇಕು ಎಂದರು.

ಬಿಸಿಐ ಅಧ್ಯಕ್ಷ ಮತ್ತು ಹಿರಿಯ ವಕೀಲ ಮನನ್‌ ಕುಮಾರ್‌ ಮಿಶ್ರಾ ಅವರ ಸಲಹೆಗೆ ಪ್ರತಿಕ್ರಿಯಿಸುತ್ತಾ ʼಜಾಗತಿಕವಾಗಿ ಚಿಂತಿಸಬೇಕು ಮತ್ತು ಸ್ಥಳೀಯವಾಗಿ ವರ್ತಿಸಬೇಕುʼ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಧ್ಯೇಯವನ್ನು ಒತ್ತಿ ಹೇಳಿದರು.

“ವಿದೇಶಿ ಬೋಧಕರನ್ನು ಹೊಂದುವ ಗೀಳಿನ ಬಗ್ಗೆ ನನಗೆ ಸಮ್ಮತಿ ಇಲ್ಲ. ಭಾರತದಲ್ಲಿ ಪ್ರತಿಭೆಗೆ ಕೊರತೆ ಇದೆಯೇ?” ಎಂದು ನ್ಯಾ. ಗವಾಯಿ ಪ್ರಶ್ನಿಸಿದರು. “ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌, ಮಹಾತ್ಮಾ ಗಾಂಧಿ, ಪಂಡಿತ್‌ ಜವಹರಲಾಲ್‌ ನೆಹರೂ, ಮೋತಿಲಾಲ್‌ ನೆಹರೂ, ವಲ್ಲಭಭಾಯಿ ಪಟೇಲ್‌ ಎಲ್ಲರೂ ಕಾನೂನು ಬೋಧಕರು. ಅವರೆಲ್ಲರೂ ತಮ್ಮ ಲಾಭದಾಯಕ ವಕೀಲಿಕೆ ಬಿಟ್ಟು ದೇಶದ ಏಳಿಗೆಗೆ ಶ್ರಮಿಸಿದರು” ಎಂದು ನ್ಯಾ. ಗವಾಯಿ ನುಡಿದರು.

ತಮ್ಮ ಭಾಷಣದ ಸಂದರ್ಭದಲ್ಲಿ ಮಿಶ್ರಾ ಅವರು ವಿಶ್ವದರ್ಜೆಯ ಕುಲಪತಿ ಹೊಂದುವ ಸೂಚನೆ ಹಾಗೂ ಐವರು ವಿದೇಶಿ ಬೋಧಕರು ಸೇರಿದಂತೆ ಒಟ್ಟು 11 ಮಂದಿ ಶೈಕ್ಷಣಿಕ ಸಿಬ್ಬಂದಿ ಹೊಂದುವ ಬಗ್ಗೆ ಪ್ರಸ್ತಾಪಿಸಿದ್ದರು. “ನಾವು ನೈಜ ವಕೀಲರು ಮತ್ತು ಪರಿಪೂರ್ಣ ನ್ಯಾಯಮೂರ್ತಿಗಳನ್ನು ಸೃಷ್ಟಿಸುತ್ತೇವೆ” ಎಂದಿದ್ದರು.

ಖ್ಯಾತ ವಕೀಲರಾದ ಸರ್‌ ಹರಿ ಸಿಂಗ್‌ ಗೌರ್‌ ಅವರು ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್‌ ಕಕ್ಷಿದಾರರನ್ನು ಹೊಂದಿದ್ದರು ಎಂದು ನ್ಯಾ. ಗವಾಯಿ ಹೇಳಿದರು. “ವಿಶ್ವದರ್ಜೆಯ ವಿಶ್ವವಿದ್ಯಾಲಯಗಳಿಗೆ ಸ್ಪರ್ಧೆ ಒಡ್ಡುವಂಥ ಅಂತಾರಾಷ್ಟ್ರೀಯ ಗುಣಮಟ್ಟದ ಕಾನೂನು ವಿಶ್ವವಿದ್ಯಾಲಯ ಹೊಂದಬೇಕು ಎಂಬುದಕ್ಕೆ ನನಗೆ ಸಹಮತವಿದೆ. ಆದರೆ, ಮಿಶ್ರಾ ಅವರು ಹೇಳುವಂತೆ ವಿದೇಶಿ ಬೋಧಕರು ಮತ್ತು ಕುಲಪತಿ ಎಂಬ ವಿಚಾರದಲ್ಲಿ ಬಿಸಿಐ ಮರುಪರಿಶೀಲಿಸಿಬೇಕು. ಈ ಪರಿಕಲ್ಪನೆ ನನಗೆ ಅರ್ಥವಾಗುತ್ತಿಲ್ಲ… ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ” ಎಂದರು.

“ಸಮಾಜದ ಅಗತ್ಯತೆಗೆ ತಕ್ಕಂತೆ ಕಾನೂನು ಬದಲಾವಣೆಯಾಗಬೇಕು. ಸಂವಿಧಾನದ ಮೂಲರಚನೆಯನ್ನು ಬದಲಾವಣೆ ಮಾಡುವಂತಿಲ್ಲವಾದರೂ ಅಗತ್ಯಕ್ಕೆ ತಕ್ಕಂತೆ ಸಂವಿಧಾನದಲ್ಲಿ ತಿದ್ದುಪಡಿ ಮಾಡಲು ಅವಕಾಶವಿದೆ. ಹೀಗಾಗಿ, ಈ ವಿಶ್ವವಿದ್ಯಾಲಯವು ಅತ್ಯುತ್ತಮ ವಕೀಲರು ಮತ್ತು ನ್ಯಾಯಮೂರ್ತಿಗಳನ್ನಷ್ಟೇ ಅಲ್ಲದೇ ಶ್ರೇಷ್ಠ ವ್ಯಕ್ತಿಗಳನ್ನು ರೂಪಿಸಬೇಕು” ಎಂದರು.

Related Stories

No stories found.
Kannada Bar & Bench
kannada.barandbench.com