'ಇವಿಎಂ ತಿರುಚುವವರಿಗೆ ಯಾವುದಾದರೂ ಶಿಕ್ಷೆ ಇದೆಯೇ?' ಚುನಾವಣಾ ಆಯೋಗಕ್ಕೆ ಸುಪ್ರೀಂ ಪ್ರಶ್ನೆ

ಆದರೆ ಅದೇ ಉಸಿರಿನಲ್ಲಿಯೇ ನ್ಯಾಯಾಲಯ ಪ್ರಸ್ತುತ ಇರುವ ವ್ಯವಸ್ಥೆಯನ್ನು ಅನುಮಾನಿಸಬಾರದು ಎಂದೂ ನುಡಿಯಿತು.
Supreme Court, EVMs
Supreme Court, EVMs

ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ದುರ್ಬಳಕೆ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಶಿಕ್ಷಿಸುವಂತಹ ಯಾವುದಾದರೂ ಕಾನೂನು ಇದೆಯೇ ಎಂದು ಭಾರತೀಯ ಚುನಾವಣಾ ಆಯೋಗವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಶ್ನಿಸಿದೆ.

 ಕಠಿಣ ಶಿಕ್ಷೆಯ ಭಯ ಇಲ್ಲದಿದ್ದರೆ ಮತಯಂತ್ರಗಳನ್ನು ತಿರುಚುವ ಸಾಧ್ಯತೆ ಇರುತ್ತದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

ವೋಟರ್-ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಚೀಟಿಗಳನ್ನು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳ (ಇವಿಎಂ) ಮೂಲಕ ಚಲಾಯಿಸಿದ ಮತಗಳೊಂದಿಗೆ ತಾಳೆ ಮಾಡಬೇಕು ಎಂದು ನಿರ್ದೇಶನ ನೀಡುವಂತೆ ಕೋರಿ ಹಾಗೂ ಇವಿಎಂ ಕುರಿತಾದ ಆಕ್ಷೇಪಣೆಗಳನ್ನು ಮಾಡಿ ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಲ್ಲಿಸಿರುವ ಅರ್ಜಿಯೂ ಸೇರಿದಂತೆ ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಾಲಯವು, “ಮತಯಂತ್ರಗಳನ್ನು ತಿರುಚುತ್ತಾರೆ ಎಂದಿಟ್ಟುಕೊಳ್ಳೋಣ. ಅದು ಗಂಭೀರ ವಿಚಾರ. ಏನಾದರೂ ತಪ್ಪು ಮಾಡಿದರೆ ಶಿಕ್ಷೆಯಾಗುತ್ತದೆ ಎಂಬ ಭಯ ಇರಬೇಕು” ಎಂದು ನ್ಯಾಯಾಲಯ ಹೇಳಿತು. ಹುದ್ದೆಯಿಂದ ವಜಾಗೊಳಿಸುವ ಶಿಕ್ಷೆ ಇದೆ ಎಂದು ಇಸಿಐ ಪ್ರತಿಕ್ರಿಯಿಸಿತು.

“ನಾವು ಕಾರ್ಯವಿಧಾನದ ಬಗ್ಗೆ ಹೇಳುತ್ತಿಲ್ಲ. ತಿರುಚುವಿಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಸೆಕ್ಷನ್‌ ಇಲ್ಲವೇ ಇಲ್ಲ” ಎಂದು ನ್ಯಾ. ಖನ್ನಾ ಹೇಳಿದರು. ಆದರೆ ಅದೇ ಉಸಿರಿನಲ್ಲಿಯೇ ವ್ಯವಸ್ಥೆಯನ್ನು ಅನುಮಾನಿಸಬಾರದು ಎಂದೂ ಸಹ ಪೀಠ ನುಡಿಯಿತು.

ಇದಕ್ಕೆ ದನಿಗೂಡಿಸಿದ ನ್ಯಾ. ದತ್ತಾ ಅವರು “ನನ್ನ ತವರು ರಾಜ್ಯ ಪ. ಬಂಗಾಳದಲ್ಲಿ ಜರ್ಮನಿಗಿಂತಲೂ ಅಧಿಕ ಜನಸಂಖ್ಯೆ ಇದೆ. ನಾವು ಯಾರ ಮೇಲಾದರೂ ಸ್ವಲ್ಪ ನಂಬಿಕೆ ಇಡಬೇಕು. ಈ ರೀತಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ಯತ್ನಿಸದಿರಿ” ಎಂದು ಅರ್ಜಿದಾರರಿಗೆ ಕಿವಿಮಾತು ಹೇಳಿದರು.

ಪ್ರಸ್ತುತ ಪ್ರತಿ ಕ್ಷೇತ್ರದ ಐದು ಮತಗಟ್ಟೆಗಳಲ್ಲಿ ಮಾತ್ರ ವಿವಿಪ್ಯಾಟ್‌ ಚೀಟಿಗಳನ್ನು ತಾಳೆ ನೋಡಲಾಗುತ್ತಿದ್ದು ಅದರ ಬದಲಿಗೆ ಪ್ರತಿ ಕ್ಷೇತ್ರದ ಎಲ್ಲಾ ಮತಗಟ್ಟೆಗಳ ಇವಿಎಂ- ವಿವಿಪ್ಯಾಟ್‌ ತಾಳೆ ಕಾರ್ಯ ನಡೆಯಬೇಕು ಎಂಬುದು ಅರ್ಜಿದಾರರ ಕೋರಿಕೆಯಾಗಿತ್ತು.

ಇವಿಎಂಗಳ ಬದಲಿಗೆ ಮತ ಪ್ರತಗಳ ಮೂಲಕ ಚುನಾವಣೆ ನಡೆಸುವ ಹಳೆಯ ಕ್ರಮವೇ ಇರಲಿ ಎಂಬ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.  

ಮತದಾನ ಮತ್ತು ಎಣಿಕೆ ಪ್ರಕ್ರಿಯೆಯಲ್ಲಿ ಮಾನವ ಹಸ್ತಕ್ಷೇಪವು ಮತ್ತಷ್ಟು ಸಮಸ್ಯೆಗಳು ಮತ್ತು ಪಕ್ಷಪಾತಗಳಿಗೆ ಕಾರಣವಾಗಬಹುದು. ಇದನ್ನು ತಡೆಯಲು ಯಾವುದೇ ಸಲಹೆ ಇದ್ದರೆ ನಮಗೆ ನೀಡಬಹುದು ಎಂದು ಪೀಠ ಈ ಹಂತದಲ್ಲಿ ನುಡಿಯಿತು. ಸ್ವತಂತ್ರ ತಾಂತ್ರಿಕ ತಂಡದಿಂದ ಇವಿಎಂ ತಪಾಸಣೆ ನಡೆಸುವುದು ಸಾಧ್ಯವೇ? ಎಲ್ಲಾ ಮತಗಟ್ಟೆಗಳಲ್ಲಿ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆಯೇ ಎಂದು ಅದು ಪ್ರಶ್ನಿಸಿತು.

ಇದಕ್ಕೆ ಪ್ರತಿಯಾಗಿ ಶೇ 50ರಷ್ಟು ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿತು.

ವಿವಿಧ ಅರ್ಜಿದಾರರ ಪರವಾಗಿ ವಕೀಲ ಪ್ರಶಾಂತ್‌ ಭೂಷಣ್‌, ಹಿರಿಯ ನ್ಯಾಯವಾದಿಗಳಾದ ಶಂಕರನಾರಾಯಣನ್‌, ಸಂಜಯ್‌ ಹೆಗ್ಡೆ ಹಾಗೂ ಹುಝೆಫಾ ಅಹ್ಮದಿ ವಾದ ಮಂಡಿಸಿದರು.

ಪ್ರಶಾಂತ್‌ ಭೂಷಣ್‌ ವಾದದ ಪ್ರಮುಖಾಂಶಗಳು

  • ಹಿಂದಿನ ಮತಪತ್ರ ವ್ಯವಸ್ಥೆಗೆ ಮತದಾನ ಪ್ರಕ್ರಿಯೆ ಮರಳಬೇಕು.

  • ಎಲ್ಲಾ ವಿವಿಪ್ಯಾಟ್ ಸ್ಲಿಪ್‌ಗಳನ್ನು ಇವಿಎಂ ಮತಗಳೊಂದಿಗೆ ತಾಳೆ ಮಾಡಬೇಕು.

  • ಈ ಹಿಂದೆ ಇದ್ದ ಪಾರದರ್ಶಕ ಗಾಜಿನ ಬದಲಾಗಿ ವಿವಿಪ್ಯಾಟ್‌ ಯಂತ್ರಕ್ಕೆ 7 ಸೆಕೆಂಡ್‌ಗಳ ಕಾಲ ಬೆಳಕು ಇದ್ದಾಗ ಮಾತ್ರ ಕಾಣುವ ಅಪಾರದರ್ಶಕ ಗಾಜನ್ನು ಅಳವಡಿಸಲಾಗಿದೆ.

  • 7 ಸೆಕೆಂಡ್‌ಗಳ ಕಾಲವಷ್ಟೇ ಬೆಳಕು ಇರುವುದರಿಂದ ಚೀಟಿಗಳನ್ನು ತಿರುಚುವ ಸಾಧ್ಯತೆ ಇದೆ.

  • ಇವಿಎಂಗಳಲ್ಲಿ ಬಳಸುವ ಚಿಪ್‌ಗಳು ಪ್ರೋಗ್ರಾಮಬಲ್‌ ಆಗಿದ್ದು ಹಲವು ಐರೋಪ್ಯ ದೇಶಗಳು ಬ್ಯಾಲೆಟ್‌ ಪೇಪರ್‌ ಬಳಸುವ ವ್ಯವಸ್ಥೆಗೆ ಹಿಂತಿರುಗಿವೆ.

  • ಕೇವಲ ಐದು ವಿವಿಪ್ಯಾಟ್‌ಗಳ ಮೌಲ್ಯಮಾಪನ ತೀರಾ ಕಡಿಮೆ ಆಯಿತು.

  • ವಿವಿಪ್ಯಾಟ್‌ ಚೀಟಿಗಳನ್ನು ಪಡೆದು ಮತಪೆಟ್ಟಿಗೆಗೆ ಹಾಕಲು ಮತದಾರರಿಗೆ ಅವಕಾಶ ನೀಡಬೇಕು.

ಶಂಕರನಾರಾಯಣನ್‌ ಅವರ ವಾದದ ಪ್ರಮುಖಾಂಶಗಳು

  • ಎಲ್ಲಾ ವಿವಿಪಿಎಟಿ ಸ್ಲಿಪ್‌ಗಳನ್ನು ಎಣಿಸಲು 12 ದಿನ ಹಿಡಿಯುತ್ತದೆ ಎಂದು ಇಸಿಐ ಹೇಳಿದೆ.

  • ಬ್ಲೂಮ್‌ಬರ್ಗ್‌ ಕ್ವಿಂಟ್‌ನ ವರದಿ ಪ್ರಕಾರ 373 ಕ್ಷೇತ್ರಗಳಲ್ಲಿ ಇವಿಎಂಗಳು ಮತ್ತು ವಿವಿಪ್ಯಾಟ್ ಚೀಟಿಗಳ ನಡುವೆ ವ್ಯತ್ಯಾಸ ಕಂಡುಬಂದಿದೆ. 

ಈ ಹಂತದಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ ತಾಳೆ ನಡೆಯಬೇಕು ಎಂದು ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಹೆಗ್ಡೆ ಹೇಳಿದರು. ಆದರೆ ಈ ಸಲಹೆಗಳ ಪ್ರಾಯೋಗಿಕತೆಯನ್ನು ಪೀಠ ಪ್ರಶ್ನಿಸಿತು.

 ಹುಝೆಫಾ ಅಹ್ಮದಿ ಅವರ ವಾದದ ಪ್ರಮುಖಾಂಶಗಳು

  • ನಾಗರಿಕರ ಮನಸ್ಸಿನಲ್ಲಿ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಸಂದೇಹವಿಲ್ಲದಂತೆ ನೋಡಿಕೊಳ್ಳುವುದು ಆದರ್ಶಯುತವಾಗುತ್ತದೆ.

  • ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪಾಲು ಹೊಂದಿರುವ ಮತದಾರರ ಮನಸ್ಸಿನಲ್ಲಿ ಉಳಿಯುವ ಸಂದೇಹವನ್ನು ಪ್ರಾಯೋಗಿಕ ರೀತಿಯಲ್ಲಿ ಪರಿಹರಿಸಬಹುದಾದರೆ ಅದನ್ನು ಅಳವಡಿಸಿಕೊಳ್ಳಬೇಕು.

  • ಪ್ರಕ್ರಿಯೆಯು ಕೇವಲ ನ್ಯಾಯೋಚಿತವಾಗಿದ್ದರೆ ಸಾಲದು, ನ್ಯಾಯುತವಾಗಿ ಕಾಣುವಂತೆಯೂ ಇರಬೇಕು. ಹೀಗಾಗಿ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ತಾಳೆ ನೋಡಬೇಕು. ಇದರಿಂದ ಚುನಾವಣಾ ಆಯೋಗದ ವರ್ಚಸ್ಸು ವೃದ್ಧಿಸಲಿದೆ.

ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 18ರಂದು ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com