ಕಾಂಗ್ರೆಸ್ ಮತ್ತು ದೆಹಲಿ ಹೈಕೋರ್ಟ್
ಕಾಂಗ್ರೆಸ್ ಮತ್ತು ದೆಹಲಿ ಹೈಕೋರ್ಟ್

ಕಾಂಗ್ರೆಸ್‌ಗೆ ಮೇಘಾ ಗ್ರೂಪ್‌ನಿಂದ ಲೆಕ್ಕಕ್ಕೆ ಸಿಗದ ಹಣ ಸಂದಾಯ: ಐಟಿ ಇಲಾಖೆ ಬಳಿ ದಾಖಲೆ ಇದೆ ಎಂದ ದೆಹಲಿ ಹೈಕೋರ್ಟ್

ಮೇಘಾ ಎಂಜಿನಿಯರಿಂಗ್ ಅಂಡ್‌ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಸಮೂಹ ಸಂಸ್ಥೆಯಿಂದ ವಶಪಡಿಸಿಕೊಂಡ ದಾಖಲೆಗಳನ್ನು ಪ್ರಸ್ತಾಪಿಸಿದ ನ್ಯಾಯಾಲಯ, ಲೆಕ್ಕಕ್ಕೆ ಸಿಗದ ಹಣ ಕಾಂಗ್ರೆಸ್‌ಗೆ ವರ್ಗಾವಾಗಿರುವಂತೆ ತೋರುತ್ತಿದೆ ಎಂದಿದೆ.

ಆದಾಯ ತೆರಿಗೆ ಕಾಯಿದೆಯಡಿ 2014-15 ರಿಂದ 2020-21ರವರೆಗೆ ಕಾಂಗ್ರೆಸ್‌ನ ಆದಾಯವನ್ನು ಮತ್ತಷ್ಟು ಪರಿಶೀಲನೆ ನಡೆಸುವುದಕ್ಕೆ ಆದಾಯ ತೆರಿಗೆ ಇಲಾಖೆಯ ಬಳಿ ಯಥೇಚ್ಛ ಹಾಗೂ ದೃಢವಾದ ಪುರಾವೆಗಳಿವೆ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಹೇಳಿದೆ [ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಆದಾಯ ತೆರಿಗೆ ಕೇಂದ್ರದ ಉಪ ಆಯುಕ್ತರು - 19 ಹಾಗೂ ಇನ್ನಿತರರ ನಡುವಣ ಪ್ರಕರಣ].

2019ರ ಲೋಕಸಭಾ ಚುನಾವಣೆ ಹಾಗೂ 2018 ಮತ್ತು 2013ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಲೆಕ್ಕಕ್ಕೆ ಸಿಗದ ವಹಿವಾಟು ನಡೆದಿರುವ ಬಗ್ಗೆ ಮೌಲ್ಯಮಾಪನ ಅಧಿಕಾರಿ ಪಡೆದ ಟಿಪ್ಪಣಿಯಲ್ಲಿ ಉಲ್ಲೇಖವಿದೆ ಎಂದು ನ್ಯಾಯಮೂರ್ತಿ ಯಶವಂತ್ ವರ್ಮಾ ಮತ್ತು ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

"ಆದಾಯ ತೆರಿಗೆ ಕಾಯಿದೆಯಡಿ ಹೆಚ್ಚಿನ ಪರಿಶೀಲನೆ ಮತ್ತು ಪರೀಕ್ಷೆಗೆ ಅಗತ್ಯವಾದ ಗಣನೀಯ ಮತ್ತು ದೃಢವಾದ ಪುರಾವೆಗಳನ್ನು ಪ್ರತಿವಾದಿಗಳು ಒಗ್ಗೂಡಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ" ಎಂದು ನ್ಯಾಯಾಲಯ ಹೇಳಿದೆ.

2014-15, 2015-16 ಮತ್ತು 2016-17ರ ಮೌಲ್ಯಮಾಪನ ವರ್ಷಗಳಲ್ಲಿ ಲೆಕ್ಕಕ್ಕೆ ಸಿಗದ ವಹಿವಾಟು ನಡೆದಿರುವ ಬಗ್ಗೆ ನಿರ್ದಿಷ್ಟ ಉಲ್ಲೇಖ ಇದೆ ಎಂದು ನ್ಯಾಯಾಲಯ ಹೇಳಿದೆ.

ಮೇಘಾ ಎಂಜಿನಿಯರಿಂಗ್ ಅಂಡ್‌ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಸಮೂಹ ಸಂಸ್ಥೆಯಿಂದ ವಶಪಡಿಸಿಕೊಂಡ ದಾಖಲೆಗಳನ್ನು ಪ್ರಸ್ತಾಪಿಸಿದ ನ್ಯಾಯಾಲಯ, ಲೆಕ್ಕಕ್ಕೆ ಸಿಗದ ಹಣ ಕಾಂಗ್ರೆಸ್‌ಗೆ ವರ್ಗವಾಗಿರುವಂತೆ ತೋರುತ್ತಿದೆ ಎಂದಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ ಚುನಾವಣಾ ಬಾಂಡ್ ಯೋಜನೆ ಮೂಲಕ ಎಂಇಐಎಲ್ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಅತಿ ಹೆಚ್ಚು ದೇಣಿಗೆ ನೀಡಿದೆ ಎಂದು ವರದಿಯಾಗಿತ್ತು.

ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೀಂದ್ರ ಕುಮಾರ್ ಕೌರವ್
ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೀಂದ್ರ ಕುಮಾರ್ ಕೌರವ್

ಆದಾಯ ತೆರಿಗೆ ಕಾಯಿದೆಯಡಿ ಹೆಚ್ಚಿನ ಪರಿಶೀಲನೆ ಮತ್ತು ಪರೀಕ್ಷೆಗೆ ಅಗತ್ಯವಾದ ಗಮನಾರ್ಹ ಹಾಗೂ ದೃಢವಾದ ಪುರಾವೆಗಳನ್ನು ಪ್ರತಿವಾದಿಗಳು ಒಗ್ಗೂಡಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ದೆಹಲಿ ಹೈಕೋರ್ಟ್

ಆದಾಯ ತೆರಿಗೆ ಇಲಾಖೆ ತನ್ನ ವಿರುದ್ಧ ಆರಂಭಿಸಿದ್ದ ತೆರಿಗೆಯ ಮರುಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಅರ್ಜಿ ಸಲ್ಲಿಸಿತ್ತು. ಇದನ್ನು ತಿರಸ್ಕರಿಸಿ ಶುಕ್ರವಾರ ನೀಡಿದ ತೀರ್ಪಿನಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿವಿಧ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದಂತೆ ನಡೆಸಿದ ಶೋಧದ ಆಧಾರದ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಕಳೆದ ವರ್ಷ ಕಾಂಗ್ರೆಸ್ ಪಕ್ಷದ ಆದಾಯದ ಮರುಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭಿಸಿತ್ತು. 

ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಸಹಿ ಮಾಡಿದ ರಸೀದಿಗಳೊಂದಿಗೆ ವಿತರಿಸಿದ ವಿವರಗಳನ್ನು ಒಳಗೊಂಡ ಪುರಾವೆಗಳು ಐಟಿ ಅಧಿಕಾರಿಗಳ ಬಳಿ ಇವೆ ಎಂದು ನ್ಯಾಯಾಲಯ ಹೇಳಿದೆ.

ಈ ಹಿನ್ನೆಲೆಯಲ್ಲಿ ತನ್ನ ಆದಾಯವನ್ನು ಮತ್ತಷ್ಟು ಪರಿಶೀಲಿಸುವುದಕ್ಕೆ ಐಟಿ ಇಲಾಖೆ ಬಳಿ ಯಾವುದೇ ಸಾಕ್ಷ್ಯ ಇಲ್ಲ ಎಂದು ಸಾಬೀತುಪಡಿಸಲು ಕಾಂಗ್ರೆಸ್‌ ದಯನೀಯವಾಗಿ ವಿಫಲವಾಗಿದೆ ಎಂದು ಹೇಳಿದೆ.

ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ವಿವೇಕ್ ತಂಖಾ, ಎ.ಎಸ್.ಚಾಂದಿಯೋಕ್ ಮತ್ತು ಪಿ.ಸಿ.ಸೇನ್ , ವಕೀಲರಾದ ಪ್ರಸನ್ನ, ಅಮಿತ್ ಭಂಡಾರಿ, ಸಿದ್ಧಾರ್ಥ್ ಎಸ್, ವಿಪುಲ್ ತಿವಾರಿ, ಇಂದರ್ ಸಿಂಗ್, ಸಿಮ್ರಾನ್ ಕೊಹ್ಲಿ, ವಿಧುಷಿ ಕೇಸರಿ, ಕನಿಷ್ಕಾ ಸಿಂಗ್, ನಿಖಿಲ್ ಭಲ್ಲಾ ಮತ್ತು ಸ್ವಾತಿ ಆರ್ಯ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ವಾದ ಮಂಡಿಸಿದರು.

ಆದಾಯ ತೆರಿಗೆ ಇಲಾಖೆಯನ್ನು ಹಿರಿಯ ಸ್ಥಾಯಿ ವಕೀಲರಾದ ಜೊಹೆಬ್ ಹುಸೇನ್ ಮತ್ತು ವಿಪುಲ್ ಅಗರ್ವಾಲ್, ವಕೀಲರಾದ ಸಂಜೀವ್ ಮೆನನ್, ಸಾಕ್ಷಿ ಶೈರ್ವಾಲ್ ಮತ್ತು ವಿವೇಕ್ ಗುರ್ನಾನಿ ಪ್ರತಿನಿಧಿಸಿದ್ದರು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Indian National Congress Vs. Deputy Commissioner Of Income Tax Central - 19 & Anr.pdf
Preview
Kannada Bar & Bench
kannada.barandbench.com