ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಎರಡು ವರ್ಷ ಮೂರು ತಿಂಗಳು ಕೆಲಸ ಮಾಡಿರುವುದು ಆಹ್ಲಾದಕರ ಅನುಭವ ನೀಡಿದೆ ಎಂದಿರುವ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ವಕೀಲರ ಪರಿಷತ್‌ಗೆ ಗುರುವಾರ ಕೃತಜ್ಞತೆ ಸಲ್ಲಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನಾಗಿಸುವ ಕೊಲಿಜಿಯಂ ಶಿಫಾರಸ್ಸಿಗೆ ಬುಧವಾರ ಸಂಜೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂಬ ಸುದ್ದಿ ತಿಳಿದ ವಕೀಲರ ಪರಿಷತ್ ಸದಸ್ಯರ ಅಭಿನಂದನಾ ಸಂದೇಶಗಳಿಗೆ ಸಿಜೆ ಓಕಾ ನಗುಮೊಗದಿಂದ ಪ್ರತಿಕ್ರಿಯಿಸಿದರು.
ಗುರುವಾರ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದ ಕಲಾಪದ ಮೊದಲ ಸೆಷನ್ ಪೂರ್ಣಗೊಳ್ಳುತ್ತಿದ್ದಂತೆ ವಕೀಲರು ನ್ಯಾ. ಓಕಾ ಅವರನ್ನು ಅಭಿನಂದಿಸಲು ಆರಂಭಿಸಿದರು. “ಧನ್ಯವಾದ. ಎಲ್ಲರಿಗೂ ಧನ್ಯವಾದಗಳು. ನನಗೆ ಸಂತೋಷವಾಗಿದೆ. ಎರಡು ವರ್ಷ ಮೂರು ತಿಂಗಳು ಕರ್ನಾಟಕ ಹೈಕೋರ್ಟ್‌ನಲ್ಲಿ ಕೆಲಸ ಮಾಡಿರುವುದು ಸಂತೋಷ ನೀಡಿದೆ. ಇದು ಆಹ್ಲಾದಕರ ಅನುಭವ ನೀಡಿದೆ” ಎಂದು ನ್ಯಾ. ಓಕಾ ಪ್ರತಿಕ್ರಿಯಿಸಿದರು.
ನ್ಯಾ. ಓಕಾ ಅವರ ಜೊತೆಗೆ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ನ್ಯಾ. ನಾಗರತ್ನಾ ಅವರು ಸುಪ್ರೀಂ ಕೋರ್ಟ್‌ನ ಮೊದಲ ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆ ಇದ್ದು, ಒಂದೊಮ್ಮೆ ಅವರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಬಡ್ತಿ ಪಡೆದರೆ 36 ದಿನಗಳು ಮಾತ್ರ ಮಹತ್ವದ ಹುದ್ದೆಯಲ್ಲಿರಲಿದ್ದಾರೆ. 2027ರ ಸೆಪ್ಟೆಂಬರ್ 24ರಿಂದ ಅಕ್ಟೋಬರ್ 29ರ ವರೆಗೆ ನ್ಯಾ. ನಾಗರತ್ನ ಸಿಜೆಐ ಹುದ್ದೆಯಲ್ಲಿ ಇರಲಿದ್ದಾರೆ. ನ್ಯಾ. ಓಕಾ ಅವರು 2025ರ ಮೇನಲ್ಲಿ ನಿವೃತ್ತಿ ಹೊಂದಲಿದ್ದಾರೆ.