ಪೊಲೀಸ್‌ ಅಧಿಕಾರಿ ಅನಗತ್ಯವಾಗಿ ಇತರರ ಕರೆ ವಿವರ ದಾಖಲೆ ಪಡೆಯುವುದು ಅಕ್ರಮ: ಹೈಕೋರ್ಟ್ ಎಚ್ಚರಿಕೆ

ವ್ಯಕ್ತಿಯ ಸಿಡಿಆರ್ ದಾಖಲೆಗಳು ಗೋಪ್ಯತೆಯ ಹಕ್ಕಿನಿಂದ ನಿಯಂತ್ರಿಸಲಾಗುವ ವೈಯಕ್ತಿಕ, ಖಾಸಗಿ ವಿವರಗಳಾಗಿವೆ. ಹೀಗಾಗಿ, ನಿರ್ದಿಷ್ಟ ವ್ಯಕ್ತಿಯ ಸಿಡಿಆರ್ ಪಡೆಯುವ ಅಧಿಕಾರವನ್ನು ತನಿಖಾ ಅಧಿಕಾರಿ ಮಾತ್ರ ಚಲಾಯಿಸಬೇಕಾಗುತ್ತದೆ ಎಂದಿರುವ ನ್ಯಾಯಾಲಯ.
Justice Suraj Govindraj
Justice Suraj Govindraj
Published on

“ನಾನು ಪೊಲೀಸ್‌ ಅಧಿಕಾರಿಯಾಗಿದ್ದೇನೆ ಎಂಬ ಅಧಿಕಾರದ ಏಕೈಕ ಗತ್ತಿನಲ್ಲಿ, ಯಾವುದೇ ಪೊಲೀಸ್ ಅಧಿಕಾರಿ, ಯಾವುದೇ ವ್ಯಕ್ತಿಯ ಮೊಬೈಲ್ ಫೋನ್‌ನ ಸಿಡಿಆರ್‌ಅನ್ನು (ಕರೆ ವಿವರ ದಾಖಲೆ), ಕಾನೂನುಬದ್ಧ ತನಿಖಾ ಅಗತ್ಯದ ಅನುಮತಿ ಇಲ್ಲದೆ ಪಡೆಯಲು ಸಾಧ್ಯವಿಲ್ಲ” ಎಂದು ಗುರುವಾರ ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್‌, “ಪೊಲೀಸರು ತಮ್ಮ ಇಚ್ಛೆಗೆ ಅನುಗುಣವಾಗಿ ಸಿಡಿಆರ್‌ ಪಡೆಯುವ ಅಧಿಕಾರ ಚಲಾಯಿಸುತ್ತಾ ಹೋದರೆ ಅದು ಪೊಲೀಸ್ ರಾಜ್ಯವಾಗುತ್ತದೆ” ಎಂದು ಎಚ್ಚರಿಸಿದೆ.

ಮಹಿಳೆಯೊಬ್ಬರ ಸಿಡಿಆರ್ ಅನ್ನು ಅಕ್ರಮವಾಗಿ ಪಡೆದ ಆರೋಪ ಎದುರಿಸುತ್ತಿರುವ ಬ್ಯಾಟರಾಯನಪುರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಎಂ ವಿ ವಿದ್ಯಾ ಅವರು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ರಜಾಕಾಲೀನ ಏಕಸದಸ್ಯ ಪೀಠ ವಜಾಗೊಳಿಸಿದೆ.

ಅರ್ಜಿದಾರರ ಪರ ವಕೀಲ ಸತ್ಯನಾರಾಯಣ್ ಚಾಲ್ಕೆ ಅವರು “ವಿದ್ಯಾ ತಮ್ಮ ಅಧಿಕೃತ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ, ಕರ್ನಾಟಕ ಪೊಲೀಸ್ ಕಾಯಿದೆ ಸೆಕ್ಷನ್‌ 197 (ಸಾರ್ವಜನಿಕ ಸೇವಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ತಡೆಯುವ) ಮತ್ತು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 170ರ (ಸಾರ್ವಜನಿಕ ನೌಕರನ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಮತ್ತು ವಿಚಾರಣೆಗೆ ಒಳಪಡಿಸಲು ಅಗತ್ಯವಿರುವ ಕೇಂದ್ರ ಅಥವಾ ರಾಜ್ಯ ಸರ್ಕಾರದ ಪೂರ್ವಾನುಮತಿ) ಅಡಿಯಲ್ಲಿ, ಅನುಮತಿಯ ಆದೇಶವಿಲ್ಲದೆ ಸಿಡಿಆರ್‌ ಕೋರಿದ್ದಾರೆ” ಎಂದು ಪೀಠಕ್ಕೆ ಮನದಟ್ಟು ಮಾಡಲು ಪ್ರಯತ್ನಿಸಿದರು.

ಆದರೆ, ಇದನ್ನು ಒಪ್ಪದ ಪೀಠವು “ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಕನ್ನಡಿಗ ದಿವಂಗತ ಪುಟ್ಟಸ್ವಾಮಿ ಪ್ರಕರಣದಲ್ಲಿ ಸ್ಪಷ್ಟಪಡಿಸಿರುವಂತೆ ಯಾವುದೇ ವ್ಯಕ್ತಿಯ ಸಿಡಿಆರ್ ದಾಖಲೆಗಳು ಗೋಪ್ಯತೆಯ ಹಕ್ಕಿನಿಂದ ನಿಯಂತ್ರಿಸಲಾಗುವ ವೈಯಕ್ತಿಕ ಮತ್ತು ಖಾಸಗಿ ವಿವರಗಳಾಗಿವೆ. ಹೀಗಾಗಿ, ನಿರ್ದಿಷ್ಟ ವ್ಯಕ್ತಿಯ ಸಿಡಿಆರ್ ಪಡೆಯುವ ಅಧಿಕಾರವನ್ನು ತನಿಖಾ ಅಧಿಕಾರಿ ಮಾತ್ರ ಚಲಾಯಿಸಬೇಕಾಗುತ್ತದೆ” ಎಂಬ ಅಂಶವನ್ನು ಉಲ್ಲೇಖಿಸಿತು.

“ಐಪಿಸಿ ಸೆಕ್ಷನ್‌ಗಳಾದ 354(ಡಿ) 409, 506, 509 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66(ಡಿ) ಮತ್ತು 66(ಇ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕು” ಎಂದು ಅರ್ಜಿದಾರರು ಕೋರಿದ್ದರು.

Kannada Bar & Bench
kannada.barandbench.com