[ಸಂವಿಧಾನದ ಪೀಠಿಕೆ ಓದು] ಸಮ ಸಮಾಜದ ನಿರ್ಮಾಣಕ್ಕೆ ಸಂವಿಧಾನದ ಆಶಯಗಳನ್ನು ಪಾಲಿಸುವುದು ಮುಖ್ಯ: ಸಿಎಂ ಸಿದ್ದರಾಮಯ್ಯ

“ಸಂವಿಧಾನದ ನಾಶ ಮತ್ತು ಮನುಸ್ಮೃತಿಯ ಜಾರಿ ಎಂದರೆ ಶೇ.90 ರಷ್ಟು ಭಾರತೀಯರನ್ನು ಮತ್ತೆ ಗುಲಾಮಗಿರಿಗೆ ತಳ್ಳುವುದಾಗಿದೆ. ಇದಕ್ಕಾಗಿ ಬಹಳ ಕುತಂತ್ರಗಳು ನಡೆಯುತ್ತಿವೆ” ಎಂದು ಎಚ್ಚರಿಸಿದ ಮುಖ್ಯಮಂತ್ರಿ.
[ಸಂವಿಧಾನದ ಪೀಠಿಕೆ ಓದು] ಸಮ ಸಮಾಜದ ನಿರ್ಮಾಣಕ್ಕೆ ಸಂವಿಧಾನದ ಆಶಯಗಳನ್ನು ಪಾಲಿಸುವುದು ಮುಖ್ಯ: ಸಿಎಂ ಸಿದ್ದರಾಮಯ್ಯ
Published on

“ನಾವು ಭಾರತೀಯರು ಎನ್ನುವ ಮೂಲಕವೇ ನಮ್ಮ ಸಂವಿಧಾನ ತೆರೆದುಕೊಳ್ಳುತ್ತದೆ. ಸಂವಿಧಾನದ ಆಶಯಗಳನ್ನು ಪರಿಣಾಮಕಾರಿಯಾಗಿ ಅರ್ಥೈಸಿಕೊಂಡು ಪಾಲಿಸದಿದ್ದರೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಿದ್ದ ಭಾರತದ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

“ಸಂವಿಧಾನ ವಿರೋಧಿ ಶಕ್ತಿಗಳು ಸಂವಿಧಾನ ನಾಶಗೊಳಿಸಿ ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿವೆ. ಈ ಬಗ್ಗೆ ಎಚ್ಚರ ಮತ್ತು ಜಾಗೃತಿ ಇರಬೇಕು. ಸಂವಿಧಾನದ ನಾಶ ಮತ್ತು ಮನುಸ್ಮೃತಿಯ ಜಾರಿ ಎಂದರೆ ಶೇ.90 ರಷ್ಟು ಭಾರತೀಯರನ್ನು ಮತ್ತೆ ಗುಲಾಮಗಿರಿಗೆ ತಳ್ಳುವುದಾಗಿದೆ. ಇದಕ್ಕಾಗಿ ಬಹಳ ಕುತಂತ್ರಗಳು ನಡೆಯುತ್ತಿವೆ” ಎಂದು ಎಚ್ಚರಿಸಿದರು.

"ಸಂವಿಧಾನದ ಸಮ ಸಮಾಜ ಮತ್ತು ಜಾತ್ಯತೀತ ತತ್ವದ ಆಶಯಗಳಂತೆಯೇ ನಮ್ಮ ಸರ್ಕಾರ ಸರ್ವರ ಏಳಿಗೆಯ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಜನರ ಹಣವನ್ನು ಮತ್ತೆ ಜನರ ಬದುಕಿಗೇ ಮರಳಿಸುವುದು ನಮ್ಮ ಕಾರ್ಯಕ್ರಮಗಳ ಉದ್ದೇಶವಾಗಿದೆ” ಎಂದರು.

ಸಂವಿಧಾನ ಜಾರಿಯಾದ ಬಳಿಕ ಭಾರತದಲ್ಲಿ ಅಧಿಕೃತವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಯಿತು. ಬುದ್ದ, ಬಸವ ಕಾಲದಿಂದಲೂ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ನೆಲದಲ್ಲಿ ರೂಪುಗೊಂಡಿದೆ. ಸಂವಿಧಾನ ಜಾರಿ ಆಗುವ ಸಂದರ್ಭದಲ್ಲಿ ಸಂಸತ್‌ನಲ್ಲಿ ನಡೆದ ಚರ್ಚೆಗಳು ನಮ್ಮ ಸಂವಿಧಾನದ ಮಹತ್ವಕ್ಕೆ ಮತ್ತು ಸಂವಿಧಾನ ವಿರೋಧಿಗಳ ಮನಸ್ಥಿತಿಗೆ ಕನ್ನಡಿ ಹಿಡಿದಂತಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ, ಗೃಹ ಸಚಿವ ಜಿ ಪರಮೇಶ್ವರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹಾಗೂ ಸಚಿವರುಗಳಾದ ಮಂಕಾಳ ವೈದ್ಯ, ಸತೀಶ್ ಜಾರಕಿಹೊಳಿ, ಕೆ ಜೆ ಜಾರ್ಜ್, ಈಶ್ವರ್ ಖಂಡ್ರೆ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಲು 2.25 ಕೋಟಿ ಮಂದಿ ಆನ್‌ಲೈನ್‌ ಮೂಲಕ ನೋಂದಾಯಿಸಿಕೊಂಡಿದ್ದರು ಎಂದು ಸರ್ಕಾರ ತಿಳಿಸಿತ್ತು

Kannada Bar & Bench
kannada.barandbench.com