

ಹಾಲಿ ಪ್ರಕರಣಕ್ಕೆ ಹೊರತಾದ ವಿಡಿಯೊ/ಚಿತ್ರಗಳನ್ನು ಒದಗಿಸಲಾಗದು ಎಂದು ಸ್ಪಷ್ಟವಾಗಿ ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್, “ಪ್ರಜ್ವಲ್ ರೇವಣ್ಣ ಎಂದ ಮಾತ್ರಕ್ಕೆ ಕಾನೂನು ಬದಲಿಸಲಾಗದು” ಎಂದು ಗುರುವಾರ ಮೌಖಿಕವಾಗಿ ಹೇಳಿದೆ.
ಪ್ರಜ್ವಲ್ ಕಾರು ಚಾಲಕನ ಸ್ಯಾಮ್‌ಸಂಗ್ ಫೋನ್‌ನಿಂದ ಪಡೆದಿರುವ ಫೋಟೊ ಮತ್ತು ಎಲ್ಲಾ ವಿಡಿಯೊಗಳನ್ನು ಒದಗಿಸಲು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಬೇಕು ಎಂದು ಕೋರಿ ಪ್ರಜ್ವಲ್ ರೇವಣ್ಣ ಸಿಆರ್‌ಪಿಸಿ ಸೆಕ್ಷನ್ 207ರ ಅಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇತ್ಯರ್ಥಪಡಿಸಿತು.
“(ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊ/ಚಿತ್ರಗಳು) ಇಲ್ಲಿ ಎಲ್ಲವೂ ಅಶ್ಲೀಲವಾಗಿದೆ. ಅಶ್ಲೀಲಕ್ಕೂ ಒಂದು ಮಿತಿ ಇರಬೇಕು. ಇದು ಎಲ್ಲವನ್ನೂ ಮೀರಿದೆ. ಈ ಚಿತ್ರಗಳನ್ನು ಯಾರು ಸೆರೆ ಹಿಡಿಯಲು ಸಾಧ್ಯ?” ಎಂದು ಪ್ರಜ್ವಲ್ ಪರ ವಕೀಲ ಜಿ ಅರುಣ್ ಅವರನ್ನು ನ್ಯಾಯಾಲಯವು ವಿಚಾರಣೆಯ ವೇಳೆ ಪ್ರಶ್ನಿಸಿತು.
“ಸುಪ್ರೀಂ ಕೋರ್ಟ್ ಗೋಪಾಲಕೃಷ್ಣ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಪ್ರಕಾರ ಹಾಲಿ ಪ್ರಕರಣಕ್ಕೆ ಅಗತ್ಯವಾದ ವಿಡಿಯೊ/ಚಿತ್ರಗಳನ್ನು ಪ್ರಾಸಿಕ್ಯೂಷನ್ ಒದಗಿಸಲಿದೆ. ಇದನ್ನು ಹೊರತುಪಡಿಸಿ ಬೇರೆ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುವ ವಿಡಿಯೊ/ಚಿತ್ರಗಳನ್ನು ನೀಡಲಾಗದು. ನೀವು ಏನೋ ಮಾಡಬೇಕು ಎಂಬುದಕ್ಕೆ ಬೇರೊಬ್ಬ ಮಹಿಳೆಯ ಖಾಸಗಿತನದ ಉಲ್ಲಂಘನೆಯಾಗುವುದಕ್ಕೆ ಅವಕಾಶ ನೀಡಲಾಗದು” ಎಂದು ನ್ಯಾಯಾಲಯ ಹೇಳಿತು.
“ಅರ್ಜಿದಾರರು ಕೋರುತ್ತಿರುವ ದಾಖಲೆಗಳನ್ನು ಪ್ರಾಸಿಕ್ಯೂಷನ್ ಆಧರಿಸುತ್ತಿಲ್ಲ. ಸಂತ್ರಸ್ತೆಯ ಚಿತ್ರಗಳು ಮತ್ತು ಹೇಳಿಕೆ ಹೊರತುಪಡಿಸಿ ಬೇರೆ ಯಾವುದನ್ನೂ ಪ್ರಾಸಿಕ್ಯೂಷನ್ ಆಧರಿಸುವುದಿಲ್ಲ. ಇನ್ನು ಗೋಪಾಲಕೃಷ್ಣ ಪ್ರಕರಣದ ತೀರ್ಪಿನ ಪ್ರಕಾರ ಅರ್ಜಿದಾರರಿಗೆ ಒದಗಿಸಿರುವ ವಿಡಿಯೊ/ಚಿತ್ರಗಳನ್ನು ಪರಿಶೀಲನೆ ನಡೆಸಲು ಅನುಮತಿಸಲಾಗುವುದು. ಇತರೆ ಮಹಿಳೆಯರಿಗೆ ಸಂಬಂಧಿಸಿದ ವಿಡಿಯೊ/ಚಿತ್ರಗಳನ್ನು ನೀಡಲು ಪ್ರಾಸಿಕ್ಯೂಷನ್‌ಗೆ ಆದೇಶಿಸಲಾಗದು. ಬೇರೆಯವರ ಖಾಸಗಿತನ ಉಲ್ಲಂಘಿಸುವ ಚಿತ್ರಗಳು ನಿಮಗೇಕೆ?” ಎಂದು ಕಟುವಾಗಿ ನ್ಯಾಯಾಲಯ ಪ್ರಶ್ನಿಸಿತು.
ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ಜಿ ಅರುಣ್ ಅವರು “ನಾನು ಯಾವುದೇ ಅಶ್ಲೀಲ ಚಿತ್ರಗಳನ್ನು ಒದಗಿಸಿ ಎಂದು ಕೋರಿಲ್ಲ. ಪ್ರಾಸಿಕ್ಯೂಷನ್ ಎಫ್‌ಎಸ್‌ಎಲ್ ವರದಿಯಲ್ಲಿ ಎಷ್ಟು ಅಶ್ಲೀಲ ಚಿತ್ರಗಳಿವೆ ಎಂದು ಉಲ್ಲೇಖಿಸಿಲ್ಲ. 2024ರ ಏಪ್ರಿಲ್ 30ರ ಮಹಜರ್ ಸಂದರ್ಭದಲ್ಲಿ ಮಾಜಿ ಕಾರು ಚಾಲಕನ ಫೋನ್ ಮತ್ತು ಸಿಮ್ ಜಫ್ತಿ ಮಾಡಲಾಗಿದೆ” ಎಂದರು.
ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ನ್ಯಾಯಾಲಯ ನಿರ್ದೇಶಿಸಿದರೆ ಕ್ಲೋನ್ ಮಾಡಿರುವ ಎಲ್ಲಾ ದಾಖಲೆಗಳನ್ನು ಒದಗಿಸಲಾಗುವುದು. ಆದರೆ, ಬೇರೆ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ವಿಚಾರಣಾಧೀನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ವಿಳಂಬಿಸಲು ಇಂಥ ಅರ್ಜಿಗಳನ್ನು ಸಲ್ಲಿಕೆ ಮಾಡಲಾಗುತ್ತಿದೆ” ಎಂದು ಆಕ್ಷೇಪಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ಹಾಲಿ ಸಲ್ಲಿಕೆ ಮಾಡಿರುವ ಅರ್ಜಿಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅರ್ಜಿ ಇತ್ಯರ್ಥಪಡಿಸಿತು.