ಮನರಂಜನಾ ಚಟುವಟಿಕೆ ನಡೆಸಲು ಕ್ಲಬ್‌, ಸಂಘ ಸಂಸ್ಥೆಗಳು ಪೊಲೀಸ್‌ ಕಾಯಿದೆ ಅನುಮತಿ ಪಡೆಯುವ ಅಗತ್ಯವಿಲ್ಲ: ಹೈಕೋರ್ಟ್‌

“ಕರ್ನಾಟಕ ಪೊಲೀಸ್‌ ಕಾಯಿದೆ ಸೆಕ್ಷನ್‌ 2 ಉಪ ಕಲಂಗಳಾದ (14) & (15)ರ ಅಡಿ ಸಾರ್ವಜನಿಕ ಅಮ್ಯೂಸ್‌ಮೆಂಟ್‌ ಅಥವಾ ಸಾರ್ವಜನಿಕ ಮನರಂಜನೆಯಾದರೆ ಮಾತ್ರ ಪರವಾನಗಿ ಪಡೆಯಬೇಕಾಗುತ್ತದೆ” ಎಂದು ನ್ಯಾಯಾಲಯವು ಹಲವು ತೀರ್ಪುಗಳನ್ನು ಉಲ್ಲೇಖಿಸಿ ಹೇಳಿದೆ.
Karnataka High Court
Karnataka High Court
Published on

“ಮನರಂಜನಾ ಚಟುವಟಿಕೆ ನಡೆಸಲು ಕ್ಲಬ್‌ ಅಥವಾ ಸಂಘ ಸಂಸ್ಥೆಗಳು ಕರ್ನಾಟಕ ಪೊಲೀಸ್‌ ಕಾಯಿದೆ ಅಡಿ ಪರವಾನಗಿ ಪಡೆಯಬೇಕು ಎಂದು ಹೇಳುವುದು ಸ್ವೇಚ್ಛೆ ಮತ್ತು ತರ್ಕಹೀನ” ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶ ಮಾಡಿದೆ.

ಮೈಸೂರು ಜಿಲ್ಲೆಯ ಟಿ ನರಸೀಪುರದ ಟಿ ಮೇಗದಹಳ್ಳಿಯಲ್ಲಿರುವ ಸೀರಗಳ್ಳಿ ಲಕ್ಷ್ಮಿದೇವಿ ರಿಕ್ರಿಯೇಷನ್‌ ಕ್ಲಬ್‌ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ಏಕಸದಸ್ಯ ಪೀಠವು ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಿದೆ.

“ತನ್ನ ಸದಸ್ಯರಿಗೆ ಮನರಂಜನಾ ಚಟುವಟಿಕೆ ನಡೆಸಲು ಇರುವ ಕ್ಲಬ್‌ ಒಂದು ಸಂಸ್ಥೆಯಾಗಿದೆ. ಉಚಿತವಾಗಿ ಅಥವಾ ಶುಲ್ಕ ಪಾವತಿಸುವ ಮೂಲಕ ಸಾರ್ವಜನಿಕರು ಪ್ರವೇಶ ಕೋರಲಾಗದು. ಬೈಲಾದ ಪ್ರಕಾರ ಪ್ರವೇಶಾತಿಯು ನಿರ್ಬಂಧಿತವಾಗಿದ್ದು, ಕ್ಲಬ್‌ ಸದಸ್ಯರಿಗೆ ಮಾತ್ರ ಪ್ರವೇಶವಿರಲಿದೆ. ಹೀಗಾಗಿ, ಈಗಾಗಲೇ ಚಾಲ್ತಿಯಲ್ಲಿರುವ ಕಾನೂನಿನ ಅನ್ವಯ ಯಾವುದೇ ಕ್ಲಬ್‌ ಅಥವಾ ಸಂಘಸಂಸ್ಥೆಯು ಮನರಂಜನಾ ಚಟುವಟಿಕೆ ನಡೆಸಲು ಯಾವುದೇ ಅನುಮತಿ ಅಥವಾ ಪರವಾನಗಿ ಪಡೆಯುವ ಅಗತ್ಯವಿಲ್ಲ. ಕರ್ನಾಟಕ ಪೊಲೀಸ್‌ ಕಾಯಿದೆ ಅಡಿ ಅರ್ಜಿದಾರರು ಪರವಾನಗಿ ಪಡೆಯುವಂತೆ ಸೂಚಿಸುವುದು ಸ್ವೇಚ್ಛೆಯಿಂದ ಕೂಡಿದ್ದು, ತರ್ಕಹೀನವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ” ಎಂದು ಪೀಠ ಆದೇಶದಲ್ಲಿ ಹೇಳಿದೆ.

“ಕ್ಲಬ್‌ ಎಂದು ನೋಂದಾಯಿಸಿಕೊಂಡಿರುವ ಎಲ್ಲವೂ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿವೆ ಎಂಬ ರೀತಿಯಲ್ಲಿ ಸರ್ಕಾರದ ಪ್ರಾಧಿಕಾರಗಳು ಭಾವಿಸಿಕೊಂಡು ನಡೆದುಕೊಳ್ಳಬಾರದು. ಕಾಯಿದೆಯ ನಿಬಂಧನೆಗಳನ್ನು ಜಾರಿಗೊಳಿಸಲು ನಿಗಾ ಮತ್ತು ದಾಳಿಯನ್ನು ಬಳಕೆ ಮಾಡಬೇಕು. ಅದಾಗ್ಯೂ, ಪೊಲೀಸರು ಪರಿಶೀಲನೆ ನಡೆಸಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಬಹುದಾಗಿದೆ. ಇದರಿಂದ ಕ್ಲಬ್‌ ಸ್ಥಳವನ್ನು ಅಕ್ರಮ ಚಟುವಟಿಕೆಗಳಿಗೆ ನಡೆಸದಂತೆ ತಡೆಯಬಹುದಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಕರ್ನಾಟಕ ಪೊಲೀಸ್‌ ಕಾಯಿದೆ ಸೆಕ್ಷನ್‌ 2 ಉಪ ಕಲಂಗಳಾದ (14) ಮತ್ತು (15)ರ ಅಡಿ ಸಾರ್ವಜನಿಕ ಅಮ್ಯೂಸ್‌ಮೆಂಟ್‌ ಅಥವಾ ಸಾರ್ವಜನಿಕ ಮನರಂಜನೆಯಾದರೆ ಮಾತ್ರ ಪರವಾನಗಿ ಪಡೆಯಬೇಕಾಗುತ್ತದೆ” ಎಂದು ನ್ಯಾಯಾಲಯವು ಹಲವು ತೀರ್ಪುಗಳನ್ನು ಉಲ್ಲೇಖಿಸಿ ಹೇಳಿದೆ.

ಪ್ರಕರಣದ ಹಿನ್ನೆಲೆ: ತಮ್ಮ ಕ್ಲಬ್‌ನ ಸದಸ್ಯರು ಒಳಾಂಗಣ ಆಟಗಳಾದ ರಮ್ಮಿ (ಕಾರ್ಡ್‌ ಗೇಮ್ಸ್)‌, ಚೆಸ್‌, ಕೇರಂ, ಬಿಲಿಯರ್ಡ್ಸ್‌/ಸ್ನೂಕರ್‌, ಕೌಶಲ ಆಟಗಳು ಮತ್ತು ಹೊರಾಂಗಣದ ಆಟಗಳನ್ನು ಆಡಲು ಸಾರ್ವಜನಿಕ ಮನರಂಜನಾ ಸ್ಥಳಗಳ ಪರವಾನಗಿ ಮತ್ತು ನಿಯಂತ್ರಣ ನಿಬಂಧನೆಯ ಅಡಿ ಪರವಾನಗಿ ಅಥವಾ ಅನುಮತಿ‌ ಪಡೆಯುವ ಅಗತ್ಯವಿಲ್ಲ ಎಂದು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಅರ್ಜಿದಾರರು ಮನರಂಜನಾ ಚಟುವಟಿಕೆ ನಡೆಸಲು ವ್ಯಾಪ್ತಿ ಹೊಂದಿರುವ ಪ್ರತಿವಾದಿ ಪೊಲೀಸರಿಗೆ ಅನುಮತಿ ಕೋರಿದ್ದರು. ಇದಕ್ಕೆ ಪ್ರತಿವಾದಿಗಳು ನಿರಾಕರಿಸಿದ್ದರು. ಮನರಂಜನಾ ಚಟುವಟಿಕೆ ನಡೆಸಲು ಪೊಲೀಸರು ಅನಗತ್ಯ ಸಮಸ್ಯೆ ಉಂಟು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com