
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ (ಎಸ್‌ಸಿ–ಎಸ್‌ಟಿ) ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ವಿಶೇಷ (ಸತ್ರ) ನ್ಯಾಯಾಲಯಗಳು ಆರೋಪಿಗಳನ್ನು ಖುಲಾಸೆಗೊಳಿಸಿದಾಗ ಅಂತಹ ಆದೇಶಗಳನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಹೆಚ್ಚಿನ ಸಮಯಾವಕಾಶ ನೀಡುವುದು ಶಾಸಕಾಂಗದ ವಿವೇಚನೆಗೆ ಬಿಟ್ಟ ವಿಚಾರ ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣವೊಂದರಲ್ಲಿ ಖುಲಾಸೆಗೊಂಡಿದ್ದ ಆರೋಪಿಗಳ ವಿರುದ್ಧ ಸಲ್ಲಿಸಲಾದ ಮೇಲ್ಮನವಿ 381 ದಿನಗಳ ವಿಳಂಬ ಹೊಂದಿದೆ ಎಂಬ ಕಾರಣಕ್ಕೆ ರಾಜ್ಯ ಅಭಿಯೋಜನಾ ಇಲಾಖೆ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಏಕಸದಸ್ಯ ಪೀಠವು ಕೆಲವು ಪ್ರಕರಣಗಳಲ್ಲಿ ನಿರ್ಲಕ್ಷ್ಯಕ್ಕಿಂತ ಹೆಚ್ಚಾಗಿ, ನಿಜವಾದ ಕಾರಣಕ್ಕೂ ವಿಳಂಬವಾಗಬಹುದು. ಆದರೆ, ಇಂತಹ ಸೂಕ್ಷ್ಮವನ್ನು ಶಾಸಕಾಂಗದ ತಿದ್ದುಪಡಿ ಮೂಲಕವೇ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಸ್ಪಷ್ಟಪಡಿಸಿದೆ.
ಪ್ರಾಸಿಕ್ಯೂಷನ್ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಅವರು “ಮೇಲ್ಮನವಿ ಸಲ್ಲಿಸಲು ಉದ್ದೇಶಪೂರ್ವಕ ವಿಳಂಬ ಮಾಡಿಲ್ಲ. ಸರ್ಕಾರ ಸಕಾಲದಲ್ಲಿ ಅನುಮತಿ ನೀಡಿತ್ತು. ಆದರೆ, ನ್ಯಾಯಾಲಯದಿಂದ ದಾಖಲೆಗಳನ್ನು ಪಡೆದುಕೊಳ್ಳುವುದೂ ಸೇರಿದಂತೆ ಕೆಲವು ವಾಸ್ತವಿಕ ಅಡಚಣೆಗಳಿಂದಾಗಿ ತಡವಾಗಿದೆ. ಹೀಗಾಗಿ, ತಾಂತ್ರಿಕ ಅಂಶಗಳಿಂದ ವಿಳಂಬವಾಗಿರುವ ಇಂತಹ ಪ್ರಕರಣಗಳಲ್ಲಿ ನ್ಯಾಯದಾನಕ್ಕೆ ತೊಂದರೆ ಆಗಬಾರದು. ಆದ್ದರಿಂದ, ವಿಳಂಬವನ್ನು ಮನ್ನಿಸಿ ಮೇಲ್ಮನವಿಯನ್ನು ವಿಚಾರಣೆಗೆ ಪುರಸ್ಕರಿಸಬೇಕು” ಎಂದು ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪೀಠವು “ಎಸ್‌ಸಿ–ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಸೆಕ್ಷನ್ 14ಎ(3)ರಡಿ ಸತ್ರ ನ್ಯಾಯಾಲಯವು (ವಿಶೇಷ ನ್ಯಾಯಾಲಯ) ಆರೋಪಿಯನ್ನು ಖುಲಾಸೆಗೊಳಿಸಿದ್ದರೆ ಅಂತಹ ಆದೇಶಗಳನ್ನು ಪ್ರಶ್ನಿಸಲು ಒಟ್ಟು 180 ದಿನಗಳ ಸಮಯಾವಕಾಶ ನೀಡಲಾಗಿದೆ. ವಿಳಂಬವಾದರೆ ಅಂತಹ ಮೇಲ್ಮನವಿಗಳನ್ನು ಪುರಸ್ಕರಿಸಲು ಕಾನೂನಿನಲ್ಲಿ ನಿಖರವಾದ ತಡೆ ಇದೆ. ಆದಾಗ್ಯೂ, ಇದಕ್ಕೆ ಪರಿಹಾರ ಶಾಸಕಾಂಗದ ಬಳಿ ಇದೆ. ಹೀಗಾಗಿ, ಈ ವಿಚಾರವನ್ನು ಸಂಬಂಧಿಸಿದವರ ಗಮನಕ್ಕೆ ತಂದು ಸೂಕ್ತ ತಿದ್ದುಪಡಿಗೆ ಸಲಹೆ ಮಾಡಬಹುದು” ಎಂದು ಸೂಚಿಸಿ ಮೇಲ್ಮನವಿ ವಜಾಗೊಳಿಸಿದೆ. ಪ್ರತಿವಾದಿಗಳ ಪರ ಹೈಕೋರ್ಟ್ ವಕೀಲ ಸಿ ಎಂ ಚೈತನ್ಯ ಕುಮಾರ್ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: ಯಾದಗಿರಿ ಜಿಲ್ಲೆ ವ್ಯಾಪ್ತಿಯಲ್ಲಿ ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 2014ರಲ್ಲಿ ಶಹಾಪುರರದಲ್ಲಿ ಗುಂಪು ಗಲಭೆ ನಡೆದಿತ್ತು. ಈ ಪ್ರಕರಣದಲ್ಲಿ ಬಸಲಿಂಗಪ್ಪ ಎಂಬುವರು ಸೇರಿದಂತೆ ಐವರ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಎಸ್‌ಸಿ–ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಸತ್ರ ನ್ಯಾಯಾಲಯವು ಸೂಕ್ತ ಸಾಕ್ಷ್ಯಧಾರ ಇಲ್ಲ ಎಂದು ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ 2023ರ ಸೆಪ್ಟೆಂಬರ್ 7ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಶಹಾಪುರ ಪೊಲೀಸರು 2024ರ ಅಕ್ಟೋಬರ್‌ನಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.