ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ವಿನ್ಯಾಸ ಮತ್ತು ಯೋಜನೆ ರೂಪಿಸುವುದು ಅಧಿಕಾರಿಗಳ ಕರ್ತವ್ಯ. ಅವುಗಳ ಮಾರ್ಗ (ಅಲೈನ್‌ಮೆಂಟ್) ಹೇಗಿರಬೇಕೆಂಬ ಬಗ್ಗೆ ನ್ಯಾಯಾಲಯಗಳು ಯಾವುದೇ ರೀತಿಯ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಹೆದ್ದಾರಿಯನ್ನು ತಮ್ಮ ಜಮೀನಿನಲ್ಲಿ ಹಾದು ಹೋಗುವಂತೆ ನಿರ್ಮಿಸಲಾಗುತ್ತಿದೆ ಎಂದು ಆಕ್ಷೇಪಿಸಿ ಕೊಪ್ಪಳದ ಯಲಬುರ್ಗಾ ತಾಲ್ಲೂಕಿನ ಕೃಷಿಕ ಈರಣ್ಣ ಮತ್ತು ಸಿದ್ದರಾಮೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ.
ರಸ್ತೆಗಳ ಅಭಿವೃದ್ಧಿ, ಅವುಗಳ ಅಳ, ಅಗಲ, ಉದ್ದ ಮತ್ತು ಅದರ ವಿನ್ಯಾಸ ಮತ್ತಿತರ ಅಂಶಗಳನ್ನು ಅಧಿಕಾರಿ ವರ್ಗ ನಿರ್ಧರಿಸುತ್ತದೆ. ಮೂಲತಃ ಅದು ಆಯಾ ಕ್ಷೇತ್ರ ಪರಿಣತರ ಕೆಲಸ. ಹೀಗಾಗಿ, ಇಂತಹ ವಿಚಾರಗಳಲ್ಲಿ ನ್ಯಾಯಾಲಯ ಯಾವುದೇ ನಿರ್ದೇಶನ ನೀಡಲಾಗದು ಎಂದು ಪೀಠ ಹೇಳಿದೆ.
ಮನವಿ ಏನಿತ್ತು: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತಮ್ಮ ಕೃಷಿ ಭೂಮಿಯಲ್ಲಿ ಹಾದು ಹೋಗುವಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಮುಂದಾಗಿದೆ. ಈ ಮಾರ್ಗವನ್ನು ತಪ್ಪಾಗಿ ಯೋಜಿಸಲಾಗಿದೆ ಮತ್ತು ಇದು ಯೋಜನೆಯ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ, ರಸ್ತೆ ಅಭಿವೃದ್ಧಿ ಯೋಜನೆಯ ಮಾರ್ಗ ಬದಲಿಸುವಂತೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.