ಹಾರ್ವರ್ಡ್, ಆಕ್ಸ್‌ಫರ್ಡ್ ಮುಂತಾದ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಕಲಿತ ಭಾರತದ ಉತ್ತಮ ವಕೀಲರು ಮತ್ತು ನ್ಯಾಯಮೂರ್ತಿಗಳು ಇಂಗ್ಲಿಷ್‌ನಲ್ಲಿಯೇ ಆಲೋಚಿಸುತ್ತಾರೆ, ಮಾತನಾಡುತ್ತಾರೆ. ಆದರೆ, ಅವರು ವಿನೀತರಾಗಿ ಉಳಿಯುವ ಮೂಲಕ ತಮ್ಮ ಆಲೋಚನೆಯಲ್ಲಿ ಭಾರತೀಯತೆ ಉಳಿಸಿಕೊಳ್ಳಬೇಕು ಎಂದು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಹೇಳಿದ್ದಾರೆ.
ಮಹಾರಾಷ್ಟ್ರದ 384 ವಕೀಲರ ಸಂಸ್ಥೆಗಳಿಗೆ ಇ-ಫೈಲಿಂಗ್ ಘಟಕ ಮತ್ತು ಸೌಕರ್ಯಗಳ ವಿತರಣೆಗಾಗಿ ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಸಂಘ ಜಂಟಿಯಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಘಟಕಗಳು ಕಂಪ್ಯೂಟರ್, ಸ್ಕ್ಯಾನರ್, ಪ್ರಿಂಟರ್‌ಗಳನ್ನು ಹೊಂದಿರುತ್ತವೆ.
“ಹಲವು ವಕೀಲರು ಇಂಗ್ಲಿಷ್‌ನಲ್ಲಿ ಆಲೋಚಿಸಿ, ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ. ಆದರೆ, ವಿದೇಶಿ ಭಾಷೆಗಳ ಮೂಲಕ ವಿದೇಶಿ ಯೋಚನೆ ಹೊಂದುವುದು ಸರಿಯಲ್ಲ. ಹಾರ್ವರ್ಡ್, ಆಕ್ಸ್‌ಫರ್ಡ್‌ನಂಥ ಯಾವುದೇ ವಿಶ್ವವಿದ್ಯಾಲಯದಲ್ಲಿ ನೀವು ಕಲಿತಿರಬಹುದು. ನೀವು ಉತ್ತಮ ವಕೀಲರಾಗಿ, ನೀವು ಉತ್ತಮ ನ್ಯಾಯಾಧೀಶರಾದರೂ ನಿಮ್ಮ ಚಿಂತನೆಯು ಭಾರತೀಯವಾಗಿರಬೇಕು, ಹಾಗಿದ್ದಾಗ ನೀವು ವಿನೀತರಾಗಿರುತ್ತೀರಿ ” ಎಂದು ರಿಜಿಜು ಹೇಳಿದರು.
“ಸುಪ್ರೀಂ ಕೋರ್ಟ್‌ನಲ್ಲಿ ಕೆಲವು ವಕೀಲರಿದ್ದು, ಅವರ ಕಾನೂನು ಜ್ಞಾನದ ಹೊರತಾಗಿಯೂ ಇಂಗ್ಲಿಷ್ ಚೆನ್ನಾಗಿ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಹೆಚ್ಚು ಶುಲ್ಕ ನೀಡಲಾಗುತ್ತದೆ. ಉತ್ತಮ ಮರಾಠಿ, ಹಿಂದಿ ಮಾತನಾಡುವ ವಕೀಲರಿಗೆ ಕಡಿಮೆ ಶುಲ್ಕ ನೀಡಲಾಗುತ್ತದೆ. ಏಕೆಂದರೆ ಅವರು ಚೆನ್ನಾಗಿ ಇಂಗ್ಲಿಷ್ ಮಾತನಾಡುವವರಲ್ಲ” ಎಂದರು.
“ಭಾರತದ ನ್ಯಾಯಾಲಯಗಳಲ್ಲಿ ನಾವೇಕೆ ನಮ್ಮ ಭಾಷೆಗಳನ್ನು ಬಳಕೆ ಮಾಡಲಾಗುತ್ತಿಲ್ಲ? ಮಹಾರಾಷ್ಟ್ರದಲ್ಲಿ ನಾವೇಕೆ ಮರಾಠಿ ಬಳಕೆ ಮಾಡಬಾರದು? ಈ ನಿಟ್ಟಿನಲ್ಲಿ ಯೋಚಿಸುವಂತೆ ನಾವು ಸುಪ್ರೀಂ ಕೋರ್ಟ್‌ಗೆ ಕೋರಿದ್ದೇವೆ; ಎಲ್ಲಾ ಹೈಕೋರ್ಟ್‌ಗಳಲ್ಲೂ ಸಹ… ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ” ಎಂದು ರಿಜಿಜು ಹೇಳಿದರು.
ಕಾರ್ಯಕ್ರಮದಲ್ಲಿ ಸಭಿಕರೊಬ್ಬರ ಕಾರ್ಯಾಂಗವು ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ “ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾದಾಗಿನಿಂದ ನ್ಯಾಯಾಂಗದ ಸ್ವಾತಂತ್ರ್ಯ ಕಸಿಯುವ ಅಥವಾ ಅದನ್ನು ಕುಸಿಯುವಂತೆ ಮಾಡುವ ಯಾವುದೇ ಚಟುವಟಿಕೆಯನ್ನು ಸರ್ಕಾರ ಕೈಗೆತ್ತಿಕೊಂಡಿಲ್ಲ” ಎಂದು ಉತ್ತರಿಸಿದರು. ಮುಂದುವರಿದು, ಕಾರ್ಯಾಂಗದ ಕೆಲಸದಲ್ಲಿ ನ್ಯಾಯಾಂಗದ ಹಸ್ತಕ್ಷೇಪವನ್ನು ಪರಿಗಣಿಸುವಂತೆ ಸಂಬಂಧಿತ ವಕೀಲರಿಗೆ ತಿಳಿಸಿದರು.
“ನ್ಯಾಯಾಂಗದ ಸ್ವಾತಂತ್ರ್ಯವನ್ನು ಪ್ರತ್ಯೇಕಿಸಿ ನೋಡಲಾಗದು. ಇಲ್ಲಿ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದ ಸ್ವಾತಂತ್ರ್ಯವಿದೆ. ಸಂವಿಧಾನವು ಮೂರು ಅಂಗಗಳಿಗೆ ತನ್ನದೇ ಆದ ಅಧಿಕಾರ ಕಲ್ಪಿಸಿದ್ದು, ತಮ್ಮ ಲಕ್ಷ್ಮಣ ರೇಖೆಯ ಒಳಗೆ ಉಳಿಯುವುದು ಎಲ್ಲರಿಗೂ ಮುಖ್ಯವಾಗಿದೆ” ಎಂದು ವಿವರಿಸಿದರು.