ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮಾವಳಿಗೆ ಇತ್ತೀಚೆಗೆ ಮಾಡಿದ ತಿದ್ದುಪಡಿ ಪ್ರಶ್ನಿಸಿ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಸಲ್ಲಿಸಿದ್ದ ಅರ್ಜಿಗೆ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಚುನಾಯಿತ ಪ್ರಜಾಪ್ರಭುತ್ವದ ಮೇಲೆ ಸುಳ್ಳು ಮತ್ತು ತಪ್ಪು ಮಾಹಿತಿ ಪ್ರತಿಕೂಲ ಪರಿಣಾಮ ಬೀರಬಹುದು ಎಂಬುದಾಗಿ ಬಾಂಬೆ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.
ಸುಳ್ಳು ಮಾಹಿತಿಯು ಚುನಾಯಿತ ಸರ್ಕಾರದ ಗುರಿಗಳ ಮೇಲೆ ಅನುಮಾನ ಸೃಷ್ಟಿಸುವ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸುವ ಪರಿಣಾಮ ಹೊಂದಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಮೂಲಕ ಸಲ್ಲಿಸಲಾದ ಅಫಿಡವಿಟ್ ಹೇಳಿದೆ.
ಕೇಂದ್ರ ಸರ್ಕಾರದ ಯಾವುದೇ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತನಗೆ ಸುಳ್ಳು ಅಥವಾ ನಕಲಿ ಆನ್‌ಲೈನ್ ಸುದ್ದಿ ಎನಿಸುವುದನ್ನು ಪತ್ತೆ ಹಚ್ಚಿ ಟ್ಯಾಗ್ ಮಾಡುವ ಅಧಿಕಾರ ಉಳ್ಳ ಸತ್ಯ ಪರಿಶೀಲನಾ ಸಮಿತಿಯ ರಚನೆಗೆ ಸಚಿವಾಲಯ ಸೂಚಿಸಬಹುದು ಎಂದು ನಿಯಮಾವಳಿ 3ಕ್ಕೆ ಮಾಡಲಾದ ತಿದ್ದುಪಡಿಗಳನ್ನು ಕಮ್ರಾ ವಿಶೇಷವಾಗಿ ಪ್ರಶ್ನಿಸಿದ್ದರು.
ಕೇಂದ್ರದ ವಾದ
ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯು ಚುನಾಯಿತ ಪ್ರಜಾಪ್ರಭುತ್ವ, ಆರ್ಥಿಕತೆ ಮತ್ತು ಸಾಮಾಜಿಕ ವ್ಯವಸ್ಥೆ ಮೇಲೆ ತೀವ್ರ ಮತ್ತು ಶಾಶ್ವತ ಹಾನಿ ಉಂಟು ಮಾಡುವಂತಹ ಪ್ರತಿಕೂಲ ಪರಿಣಾಮ ಬೀರಬಹುದು.
ಪ್ರತ್ಯೇಕತಾವಾದಿಗಳಿಗೆ ಕುಮ್ಮಕ್ಕು ನೀಡುತ್ತದೆ. ಸಾಮಾಜಿಕ ಮತ್ತು ರಾಜಕೀಯ ಸಂಘರ್ಷ ತೀವ್ರಗೊಳಿಸುವ ಸಾಮರ್ಥ್ಯ ದಾರಿತಪ್ಪಿಸುವ ಮಾಹಿತಿಗೆ ಇದೆ.
ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಸಾರ್ವಜನಿಕರು ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ತರುತ್ತದೆ.
ಸಾರ್ವಜನಿಕ ಹಿತಾಸಕ್ತಿ ವಿಷಯಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿನ ತಪ್ಪು ದಾರಿಗೆಳೆಯುವಂತಹ ವಸ್ತುವಿಷಯವು ವಾಸ್ತವದ ಬಗೆಗಿನ ಜನರ ಗ್ರಹಿಕೆಗಳ ಮೇಲೆ ಪ್ರಭಾವ ಬೀರುತ್ತದೆ.
ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರದ ಕ್ರಮಗಳು ಮತ್ತು ಉದ್ದೇಶಗಳ ಬಗ್ಗೆ ಶಂಕೆ ಉಂಟು ಮಾಡುತ್ತದೆ.
ಸಾಕ್ಷ್ಯ ಆಧಾರಿತ ಸತ್ಯಾನ್ವೇಷಣೆ ವ್ಯವಸ್ಥೆಯನ್ನು ಒದಗಿಸುವ ದೊಡ್ಡಮಟ್ಟದ ಸಾರ್ವಜನಿಕ ಹಿತಾಸಕ್ತಿಯೊಂದಿಗೆ ತಿದ್ದುಪಡಿ ಮಾಡಲಾಗಿದೆ.
ಸಾಮಾನ್ಯ ಜನರಿಗೆ ಲಭ್ಯವಿಲ್ಲದಂತಹ ನಕಲಿ ಸುದ್ದಿ ಪರಿಶೀಲನಾ ಸಂಪನ್ಮೂಲಗಳೊಂದಿಗೆ ಕೇಂದ್ರ ಸರ್ಕಾರ ಸಜ್ಜುಗೊಂಡಿದ್ದು ಅಧಿಕೃತ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಸಾರ ಮಾಡುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಸಂಗತಿಯಾಗಿದೆ.
ಸುದ್ದಿ ಪರಿಶೀಲನೆಯಿಂದ ತೊಂದರೆಗೊಳಗಾದವರು ಮೇಲ್ಮನವಿ ಸಮಿತಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.
ವಾಸ್ತವಾಂಶ ಪರಿಶೀಲನಾ ಘಟಕದ ಪಾತ್ರವನ್ನು ನಕಲಿ ಅಥವಾ ತಪ್ಪು ಮಾಹಿತಿಯನ್ನು ಗುರುತಿಸಲು ಮಾತ್ರ ಸೀಮಿತಗೊಳಿಸಲಾಗಿದೆ.