ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವಲ್ಲಿ ಲೋಕಾಯುಕ್ತ ಪೊಲೀಸರಿಂದ ಆಗುತ್ತಿರುವ ವಿಳಂಬದ ಬಗ್ಗೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದೆ. ನಿರ್ದಿಷ್ಟ ಕಾಲಮಿತಿಯಲ್ಲಿ ತನಿಖೆ ಪೂರ್ಣಗೊಳಿಸದೆ ಹೋದರೆ ಪ್ರಾಸಿಕ್ಯೂಷನ್ ತೂಗುಗತ್ತಿ ಸರ್ಕಾರಿ ಸೇವಕರ ನೆತ್ತಿಯ ಮೇಲೆ ತೂಗುವುದರಿಂದ ಅವರ ಹಕ್ಕುಗಳಿಗೆ ಸೋಲಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ತೀಕ್ಷ್ಣವಾಗಿ ನುಡಿದಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಕಲ್ಲಪ್ಪ ತಮ್ಮ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
“ಬ್ಯಾಂಕ್ ಖಾತೆಗಳ ವಿವರ ಸಲ್ಲಿಸುವಲ್ಲಿ ಅರ್ಜಿದಾರರಿಂದಲೇ ವಿಳಂಬವಾಗಿದೆ. ಇದರಿಂದ ಲೋಕಾಯುಕ್ತ ತನಿಖೆಯೂ ವಿಳಂಬವಾಗಿರುವ ಕಾರಣ ಅರ್ಜಿದಾರರ ಮನವಿ ಪರಿಗಣಿಸಲು ಸಾಧ್ಯವಿಲ್ಲ. ಹಾಗೆಯೇ, ಅರ್ಜಿದಾರರ ವಿರುದ್ಧದ ತನಿಖೆಯ ಅಂತಿಮ ವರದಿಯನ್ನು ಎರಡು ತಿಂಗಳಲ್ಲಿ ಸಲ್ಲಿಸಬೇಕು. ಈ ಅವಧಿಯಲ್ಲಿ ವರದಿ ಸಲ್ಲಿಸದೆ ಹೋದರೆ ಸಂಬಂಧಪಟ್ಟ ನ್ಯಾಯಾಲಯವು ಲೋಕಾಯುಕ್ತರ ವಿರುದ್ಧ ಪ್ರತಿಕೂಲ ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರವಾಗಿದೆ” ಎಂದು ನಿರ್ದೇಶಿಸಿದೆ.
“ಹಲವು ಪ್ರಕರಣಗಳಲ್ಲಿ ಲೋಕಾಯುಕ್ತ ಪೊಲೀಸರ ತನಿಖೆ ದಶಕಗಳ ಕಾಲ ನಡೆದಿದೆ. ಇನ್ನೂ ಅಂತಿಮ ವರದಿಗಳನ್ನು ಸಲ್ಲಿಸಿಲ್ಲ. ಈ ವಿಚಾರವನ್ನು ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯ ಗಮನಿಸಿದೆ. ಲೋಕಾಯುಕ್ತ ಪೊಲೀಸರು/ಪ್ರಾಸಿಕ್ಯೂಷನ್ ವೈಫಲ್ಯಗಳ ಬಗ್ಗೆ ಮಾತನಾಡಿದರೆ ಅದು ಸಂಪುಟಗಟ್ಟಲೆ ಆಗುತ್ತದೆ” ಎಂದೂ ನ್ಯಾಯಾಲಯ ಖಾರವಾಗಿ ನುಡಿದಿದೆ.
“ಅರ್ಜಿದಾರರು ತಮ್ಮ ವಿರುದ್ಧದ ಎಲ್ಲಾ ಬ್ಯಾಂಕ್ ಖಾತೆ ವಿವರಗಳನ್ನು ಬಹಿರಂಗಗೊಳಿಸದಿರುವುದು ಅವರ ವಿರುದ್ಧ ತನಿಖೆ ಪೂರ್ಣಗೊಳಿಸಲು ವಿಳಂಬವಾಗಿರುವುದಕ್ಕೆ ಒಂದು ಕಾರಣ. ತನಿಖೆ ವೇಳೆ ಕಂಡು ಬಂದಿದ್ದ ಒಟ್ಟು 58 ಬ್ಯಾಂಕ್ ಖಾತೆಗಳ ಪೈಕಿ 20 ಖಾತೆಗಳ ವಿವರಗಳನ್ನು ಮಾತ್ರ ಬಹಿರಂಗಪಡಿಸಲಾಗಿದೆ. ಲೋಕಾಯುಕ್ತ ಪೊಲಿಸರು ಮೊದಲು ತಮ್ಮ ವ್ಯವಸ್ಥೆಯನ್ನು೮ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು” ಎಂದು ನುಡಿದಿದೆ.
“ಲೋಕಾಯುಕ್ತ ಪೊಲೀಸರ ತನಿಖೆ ಪೂರ್ಣಗೊಳ್ಳುವುದು ವಿಳಂಬವಾದರೆ, ಸರ್ಕಾರಿ ಸೇವಕರ ನೆತ್ತಿಯ ಮೇಲೆ ಪ್ರಾಸಿಕ್ಯೂಷನ್ ತೂಗುಗತ್ತಿ ತೂಗುತ್ತಿರುತ್ತದೆ. ಇದರಿಂದ ಸರ್ಕಾರಿ ಸೇವಕರ ಹಕ್ಕುಗಳು ಏನಾದರೂ ಇದ್ದರೆ, ಅವುಗಳನ್ನು ಪಡೆಯುವಲ್ಲಿ ಅವರಿಗೆ ಸೋಲಾಗುತ್ತದೆ. ಲೋಕಾಯುಕ್ತ ಪೊಲೀಸರಿಗೆ ಇಚ್ಛಾಶಕ್ತಿ ಇಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ತನಿಖೆಯನ್ನು ತ್ವರಿತವಾಗಿ ಏಕೆ ಪೂರ್ಣಗೊಳಿಸಬೇಕು ಎಂಬುದಕ್ಕೆ ಈ ಪ್ರಕರಣ ಕಣ್ತೆರೆಸಲಿದೆ. ಹೀಗಾಗಿ, ಪ್ರಕರಣದ ಮೇಲೆ ಲೋಕಾಯುಕ್ತ ಇನ್ನೂ ನಿದ್ದೆ ಮಾಡುವುದು ಸೂಕ್ತವಲ್ಲ. ಎರಡು ತಿಂಗಳ ಕಾಲಮಿತಿಯಲ್ಲಿ ತನಿಖಾ ವರದಿ ಸಲ್ಲಿಸಬೇಕು” ಎಂದು ಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಕಾಳಪ್ಪ ಪರ ವಕಾಲತ್ತು ಹಾಕಿದ್ದ ವಕೀಲ ಎ ಎಸ್ ಪಾಟೀಲ್ ಪರವಾಗಿ ವಾದಿಸಿದ ಹಿರಿಯ ವಕೀಲ ಗುರುದಾಸ್ ಕಣ್ಣೂರ ಅವರು “ಲೋಕಾಯುಕ್ತ ಪೊಲೀಸರು ಅರ್ಜಿದಾರರ ವಿರುದ್ಧ 2019ರಲ್ಲಿ ದೂರು ಮದಾಖಲಿಸಿದ್ದಾರೆ. ನಾಲ್ಕು ವರ್ಷ ಕಳೆದರೂ ಈವರೆಗೂ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಿಲ್ಲ. 2023ರ ಆಗಸ್ಟ್ 30ರಂದು ಅರ್ಜಿದಾರರು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಲೋಕಾಯುಕ್ತ ತನಿಖೆ ಬಾಕಿಯಿರುವ ಕಾರಣ ಅವರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಎಲ್ಲ ಅರ್ಹತೆ ಇದ್ದರೂ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಅವರ ಮೇಲೆ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದುಪಡಿಸಬೇಕು” ಎಂದು ಕೋರಿದ್ದರು.
ಲೋಕಾಯುಕ್ತ ಪೊಲೀಸರ ಪರವಾಗಿ ವಾದಿಸಿದ ವಕೀಲ ಅನಿಲ್ ಕಾಳೆ ಅವರು “ಅರ್ಜಿದಾರರು ಸುಮಾರು 56 ಬ್ಯಾಂಕ್ ಖಾತೆ ಹೊಂದಿದ್ದಾರೆ. ಅವುಗಳ ವಿವರ ಸಲ್ಲಿಸುವಂತೆ ಹಲವು ಬಾರಿ ನೋಟಿಸ್ ನೀಡಿದ್ದರೂ 2022ರ ಫೆಬ್ರವರಿಯಲ್ಲಿ ವಿವರ ಸಲ್ಲಿಸಿದ್ದಾರೆ. ಅದೂ 20 ಖಾತೆಗಳ ವಿವರವನ್ನಷ್ಟೇ ಸಲ್ಲಿಸಲಾಗಿದೆ. ಹೀಗಾಗಿ, ಖಾತೆಯ ವಿವರ ಸಲ್ಲಿಸುವಲ್ಲಿ ಅರ್ಜಿದಾರರು ವಿಳಂಬ ಮಾಡಿರುವುದರಿಂದಲೇ ತನಿಖೆ ವಿಳಂಬವಾಗಿದೆ. ಅರ್ಜಿದಾರರು ನೀಡಿದ ವಿವರ ಆಧರಿಸಿ ತನಿಖೆ ನಡೆಸಲಾಗಿದೆ. ಸದ್ಯ ಅಂತಿಮ ವರದಿ ಸಿದ್ಧವಿದ್ದು, ಸಂಬಂಧಿತ ನ್ಯಾಯಾಲಯಕ್ಕೆ ಶೀಘ್ರ ಸಲ್ಲಿಸಲಾಗುವುದು” ಎಂದು ತಿಳಿಸಿದ್ದರು.