ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ಜಾಮೀನು ರದ್ದತಿಗೆ ಸುಪ್ರೀಂ ನಕಾರ; ಪ್ರತಿವಾದಿಗಳಿಗೆ ನೋಟಿಸ್‌ ಜಾರಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿನ ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಇದ್ದರೂ ಬೇರೆ ಆರೋಪಿಗಳಿಗೆ ಹೈಕೋರ್ಟ್‌ನ ಆಕ್ಷೇಪಾರ್ಹ ಆದೇಶ (ಡಿಸೆಂಬರ್‌ 13ರ ಆದೇಶ) ಆಧರಿಸಿ ಜಾಮೀನು ಮಂಜೂರು ಮಾಡದಂತೆ ಆದೇಶಿಸಬೇಕು ಎಂದು ಕೋರಿದ ಪ್ರಾಸಿಕ್ಯೂಷನ್‌!
Darshan, Pavitra Gowda & Supreme Court
Darshan, Pavitra Gowda & Supreme Court
Published on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ನಟ ದರ್ಶನ್‌, ಪವಿತ್ರಾಗೌಡ ಸೇರಿ ಏಳು ಆರೋಪಿಗಳ ಜಾಮೀನು ರದ್ದತಿ ಸೂಕ್ತವಲ್ಲ ಎಂದಿರುವ ಸುಪ್ರೀಂ ಕೋರ್ಟ್‌ ಶುಕ್ರವಾರ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದೆ.

ನಟ ದರ್ಶನ್‌, ಪವಿತ್ರಾ ಗೌಡ ಸೇರಿ ಏಳು ಮಂದಿಗೆ ಕರ್ನಾಟಕ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್‌ ಮಹದೇವನ್‌ ಅವರ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಅವರು “ರೇಣುಕಾಸ್ವಾಮಿ ಕೊಲೆಯು ಆಘಾತಕಾರಿ ಪ್ರಕರಣವಾಗಿದ್ದು, ಹೈಕೋರ್ಟ್‌ ಇಡೀ ಪ್ರಕರಣವನ್ನು ಮರೆಮಾಚಲು ಪ್ರಯತ್ನಿಸಿದೆ. ರೇಣುಕಾಸ್ವಾಮಿಯನ್ನು ಅಪಹರಿಸಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗಿದೆ. ದರ್ಶನ್‌ಗೆ ಪವಿತ್ರಾಗೌಡ ಗೆಳತಿ ಎಂಬ ಕಾರಣಕ್ಕಾಗಿ..” ಎಂದರು.

ಆಗ ನ್ಯಾ. ಪರ್ದಿವಾಲಾ ಅವರು “ಜಾಮೀನು ರದ್ದುಪಡಿಸಬೇಕು ಎಂದು ಕೇಳುತ್ತಿದ್ದೀರಾ?” ಎಂದಿತು.

ಇದಕ್ಕೆ ಲೂಥ್ರಾ ಅವರು “ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ. ಹೈಕೋರ್ಟ್‌ ಯಾವುದನ್ನೂ ಪರಿಗಣಿಸಿಲ್ಲ. ಪ್ರಕರಣದಲ್ಲಿನ ಸಹ ಆರೋಪಿಗಳು ಹೈಕೋರ್ಟ್‌ನ ಈ ತೀರ್ಮಾನಗಳನ್ನು ಆಧಾರವಾಗಿಸಿಕೊಂಡು ಜಾಮೀನು ಪಡೆಯಲು ಅನುಮತಿಸಬಾರದು. ಹೈಕೋರ್ಟ್‌ನ ತೀರ್ಮಾನಗಳು ಸಮಸ್ಯಾತ್ಮಕವಾಗಿದೆ” ಎಂದರು.

ಆಗ ಪೀಠವು “ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ರಾಜ್ಯ ಸರ್ಕಾರವು ಜಾಮೀನು ರದ್ದತಿ ಕೋರಿದ್ದು, ಹೈಕೋರ್ಟ್‌ ಕೆಲವು ಆರೋಪಿಗಳಿಗೆ ಜಾಮೀನು ನೀಡುವಾಗ ಸುದೀರ್ಘವಾದ ತೀರ್ಪು ಪ್ರಕಟಿಸಿದೆ. ಹೈಕೋರ್ಟ್‌ ಆದೇಶದಲ್ಲಿ ದಾಖಲಿಸಿರುವ ತೀರ್ಮಾನಗಳನ್ನು ಬಳಕೆ ಮಾಡಿಕೊಂಡು ಇತರೆ ಆರೋಪಿಗಳು ಜಾಮೀನು ಪಡೆಯಲು ಅನುಮತಿಸಬಾರದು ಎಂದು ರಾಜ್ಯ ಸರ್ಕಾರ ಕೋರಿದೆ. ರಾಜ್ಯ ಸರ್ಕಾರವು ಜಾಮೀನು ರದ್ದತಿ ಕೋರುತ್ತಿರುವುದರಿಂದ ಆಕ್ಷೇಪಾರ್ಹವಾದ ಆದೇಶಕ್ಕೆ ತಡೆ ನೀಡುವುದು ಸೂಕ್ತವಲ್ಲ. ಪ್ರಾಸಿಕ್ಯೂಷನ್‌ ಹಿತಾಸಕ್ತಿ ರಕ್ಷಿಸುವ ನಿಟ್ಟಿನಲ್ಲಿ ಪ್ರಕರಣದಲ್ಲಿ ಬೇರೆ ಯಾವುದೇ ಆರೋಪಿ ಜಾಮೀನು ಕೋರಿದರೆ ಸಕ್ಷಮ ನ್ಯಾಯಾಲಯವು ಹೈಕೋರ್ಟ್‌ನ ಆಕ್ಷೇಪಾರ್ಹ ಆದೇಶವನ್ನು ಆಧರಿಸಬಾರದು. ಪ್ರಕರಣದಲ್ಲಿನ ಬೇರೆ ಯಾವುದೇ ಆರೋಪಿಯು ಭವಿಷ್ಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದರೆ ಅದನ್ನು ಮೆರಿಟ್‌ ಮೇಲೆ ನಿರ್ಧರಿಸಬೇಕು” ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.

2024ರ ಡಿಸೆಂಬರ್‌ 13ರಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠವು ಆರೋಪಿಗಳಾಗಿರುವ ಪವಿತ್ರಾ ಗೌಡ (ಎ 1), ದರ್ಶನ್‌ (ಎ 2) ಜಗದೀಶ್‌ ಜಗ್ಗ ಅಲಿಯಾಸ್‌ ಜಗ್ಗ (ಎ 6), ಅನುಕುಮಾರ್‌ ಅಲಿಯಾಸ್‌ ಅನು (ಎ 7), ಆರ್‌ ನಾಗರಾಜು (ಎ 11), ಎಂ ಲಕ್ಷ್ಮಣ್‌ (ಎ 12), ಪ್ರದೋಶ್‌ ಎಸ್‌. ರಾವ್‌ (ಎ 14) ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಇದನ್ನು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 17 ಆರೋಪಿಗಳಿದ್ದು, ಅಕ್ಟೋಬರ್‌ 14ರಂದು ಎಂಟನೇ ಆರೋಪಿ ರವಿಶಂಕರ್‌ ಅಲಿಯಾಸ್‌ ರವಿ, 13ನೇ ಆರೋಪಿ ದೀಪಕ್‌ ಕುಮಾರ್‌ ಅಲಿಯಾಸ್‌ ದೀಪಕ್‌ಗೆ ಬೆಂಗಳೂರಿನ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಅದಕ್ಕೂ ಮುನ್ನ, ಕಾರ್ತಿಕ್‌ ಅಲಿಯಾಸ್‌ ಕಪ್ಪೆ ಮತ್ತು ನಿಖಿಲ್‌ ನಾಯಕ್‌ಗೆ ವಿಚಾರಣಾಧೀನ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಈ ಮಧ್ಯೆ, ಕೇಶವಮೂರ್ತಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಡಿಸೆಂಬರ್‌ 13ರಂದು ದರ್ಶನ್‌ ಸೇರಿ ಏಳು ಮಂದಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಡಿಸೆಂಬರ್‌ 24ರಂದು ಬೆಂಗಳೂರಿನ ಸತ್ರ ನ್ಯಾಯಾಲಯವು 3ನೇ ಆರೋಪಿ ಪುಟ್ಟಸ್ವಾಮಿ ಅಲಿಯಾಸ್‌ ಪವನ್‌, 4ನೇ ಆರೋಪಿ ರಾಘವೇಂದ್ರ, 5ನೇ ಆರೋಪಿ ನಂದೀಶ್‌, 9ನೇ ಆರೋಪಿ ಮತ್ತು 10ನೇ ಆರೋಪಿ ವಿ ವಿನಯ್‌ಗೆ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾದಂತಾಗಿದೆ.

ಹೀಗಿರುವಾಗ, ಭವಿಷ್ಯದಲ್ಲಿ ಪ್ರಕರಣದಲ್ಲಿನ ಬೇರೆ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರೆ ಹೈಕೋರ್ಟ್‌ನ ಆಕ್ಷೇಪಾರ್ಹ ಆದೇಶವನ್ನು ಆಧರಿಸದಂತೆ ಆದೇಶ ಮಾಡಬೇಕು ಎಂದು ಪ್ರಾಸಿಕ್ಯೂಷನ್‌ ಇಂದು ಸುಪ್ರೀಂ ಕೋರ್ಟ್‌ಗೆ ಕೋರಿತು. ಇದನ್ನು ಸುಪ್ರೀಂ ಕೋರ್ಟ್‌ ಪುರಸ್ಕರಿಸಿದೆ. ಪ್ರಕರಣದ ಎಲ್ಲಾ ಆರೋಪಿಗಳೂ ಜಾಮೀನಿನ ಮೇಲೆ ಹೊರಗಿರುವ ವಿಚಾರ ಪ್ರಾಸಿಕ್ಯೂಷನ್‌ಗೆ ಗೊತ್ತಿಲ್ಲವೇ ಎಂಬ ವಿಚಾರ ಚರ್ಚೆಗೆ ನಾಂದಿ ಹಾಡಿದೆ.

Kannada Bar & Bench
kannada.barandbench.com