
ನಿಯಮಾವಳಿ ಪಾಲಿಸದ ಹಿನ್ನೆಲೆಯಲ್ಲಿ 2018-19ನೇ ತೆರಿಗೆ ನಿರ್ಧರಣಾ ಸಾಲಿಗೆ ಸಂಬಂಧಿಸಿದಂತೆ ₹199.15 ಕೋಟಿ ತೆರಿಗೆ ನೀಡಬೇಕು ಎಂಬ ಆದೇಶದ ವಿರುದ್ಧ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಸೋಮವಾರ ವಜಾಗೊಳಿಸಿದೆ.
ತಡವಾಗಿ ರಿಟರ್ನ್ ಸಲ್ಲಿಸಿದ ಮತ್ತು ನಗದು ದೇಣಿಗೆ ಮಿತಿ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸೆಕ್ಷನ್ 13ಎ ಅಡಿ ತೆರಿಗೆ ವಿನಾಯಿತಿ ನೀಡಬೇಕು ಎಂಬ ಪಕ್ಷದ ವಾದವನ್ನು ಮಂಡಳಿ ತಿರಸ್ಕರಿಸಿತು. ಸವಲತ್ತು ಬಯಸುವ ಪಕ್ಷಗಳು ತೆರಿಗೆ ಪಾವತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅದು ಹೇಳಿತು.
ಕಾಂಗ್ರೆಸ್ 02.02.2019ರಂದು ರಿಟರ್ನ್ ಸಲ್ಲಿಸಿದ್ದು, ಆಕ್ಷೇಪಾರ್ಹ ವಿನಾಯಿತಿಗೆ ಅರ್ಹವಾಗಲು 'ಗಡುವು' ದಿನದೊಳಗೆ ಅದನ್ನು ಸಲ್ಲಿಸಿಲ್ಲ ಎಂದು ನ್ಯಾಯಾಂಗ ಸದಸ್ಯ ಸತ್ಬೀರ್ ಸಿಂಗ್ ಗೋದಾರ ಮತ್ತು ಲೆಕ್ಕಪತ್ರ ಸದಸ್ಯ ಎಂ ಬಾಲಗಣೇಶ್ ಅವರಿದ್ದ ಸಮಿತಿ ತೀರ್ಪು ನೀಡಿದೆ.
ಕಾಂಗ್ರೆಸ್ ಪಕ್ಷ ಫೆಬ್ರವರಿ 2, 2019ರಂದು ತನ್ನ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿತ್ತು. ಸೆಕ್ಷನ್ 13 ಎ ಅಡಿಯಲ್ಲಿ ₹199.15 ಕೋಟಿ ವಿನಾಯಿತಿಯನ್ನು ಪಡೆದ ನಂತರ ತನಗೆ ಯಾವುದೇ ಆದಾಯ ಬರುತ್ತಿಲ್ಲ ಎಂದು ಘೋಷಿಸಿತ್ತು. ಆದರೆ, ಇದನ್ನು 2018-19ರ ತೆರಿಗೆ ನಿರ್ಧರಣಾ ವರ್ಷಕ್ಕೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 139ರ ಅಡಿಯಲ್ಲಿ ನಿಗದಿಪಡಿಸಿದ ಡಿಸೆಂಬರ್ 31, 2018ರ ವಿಸ್ತೃತ ಗಡುವು ದಿನದ ನಂತರ ಸಲ್ಲಿಸಲಾಗಿತ್ತು.
ಸೆಪ್ಟೆಂಬರ್ 2019ರಲ್ಲಿ ಪ್ರಾರಂಭವಾದ ತೆರಿಗೆ ನಿರ್ಧರಣಾ ಪ್ರಕ್ರಿಯೆ ವೇಳೆ, ಪಕ್ಷ ವಿವಿಧ ವ್ಯಕ್ತಿಗಳಿಂದ ₹2,000ಕ್ಕಿಂತ ಹೆಚ್ಚಿನ ಮೊತ್ತದ ₹14.49 ಲಕ್ಷ ನಗದು ದೇಣಿಗೆ ಪಡೆದಿರುವುದನ್ನು ಮೌಲ್ಯಮಾಪನ ಅಧಿಕಾರಿ ಪತ್ತೆ ಹಚ್ಚಿದ್ದರು. ಹಣಕಾಸು ಕಾಯಿದೆ 2017ರಲ್ಲಿ ಸೇರಿಸಲಾದ ಸೆಕ್ಷನ್ 13A(ಡಿ) ಪ್ರಕಾರ ರಾಜಕೀಯ ಪಕ್ಷಗಳು ₹2,000 ಕ್ಕಿಂತ ಹೆಚ್ಚಿನ ದೇಣಿಗೆಗಳನ್ನು ಖಾತೆದಾರರ ಚೆಕ್‌ಗಳು ಅಥವಾ ಎಲೆಕ್ಟ್ರಾನಿಕ್ ವರ್ಗಾವಣೆಗಳಂತಹ ಬ್ಯಾಂಕಿಂಗ್ ವಿಧಾನದ ಮೂಲಕ ಮಾತ್ರವೇ ಪಡೆಯಬೇಕಿದೆ.
ಆ ಸಾಲಿನಲ್ಲಿ ಪಕ್ಷದ ಒಟ್ಟು ಆದಾಯ ₹199.15 ಕೋಟಿ ಆಗಿದ್ದು, ವೆಚ್ಚ ₹197.43 ಕೋಟಿಯಾಗಿತ್ತು. ಆದರೆ ಕೇವಲ ₹1.71 ಕೋಟಿ ಹೆಚ್ಚುವರಿ ಮೊತ್ತವನ್ನಷ್ಟೇ ಅದು ದಾಖಲೆಯಲ್ಲಿ ತೋರಿಸಿದೆ. ಆದರೆ, ಜುಲೈ 6, 2021ರ ತೆರಿಗೆ ನಿರ್ಧರಣಾ ಆದೇಶ ಸಂಪೂರ್ಣ ವಿನಾಯಿತಿ ಹಕ್ಕನ್ನು ನಿರಾಕರಿಸಿ ಪೂರ್ಣ ಆದಾಯದ ಮೊತ್ತವನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಿತ್ತು.
ಆದಾಯ ತೆರಿಗೆ ಆಯುಕ್ತರು (ಮೇಲ್ಮನವಿ) ಮಾರ್ಚ್ 28, 2023ರಂದು ಈ ನಿರ್ಧಾರವನ್ನು ಎತ್ತಿಹಿಡಿದರು, ಇದರಿಂದಾಗಿ ಪಕ್ಷ ಮೇಲ್ಮನವಿ ನ್ಯಾಯಮಂಡಳಿಯನ್ನು ಸಂಪರ್ಕಿಸಿತ್ತು. 2024ರಲ್ಲಿ, ಐಟಿಎಟಿ ಕಾಂಗ್ರೆಸ್‌ನ ಮಧ್ಯಂತರ ಪರಿಹಾರ ಅರ್ಜಿಯನ್ನು ವಜಾಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಸ್ತುತ ಆದೇಶದಲ್ಲಿ ಐಟಿಎಟಿ, ತೆರಿಗೆ ಕಾನೂನಿನಲ್ಲಿ ವಿನಾಯಿತಿ ನಿಯಮಾವಳಿಗಳ ಕಟ್ಟುನಿಟ್ಟಿನ ವ್ಯಾಖ್ಯಾನವನ್ನು ವಿವರಿಸಿದೆ.
ನಗದು ದೇಣಿಗೆ ವಿಷಯದಲ್ಲಿ, ಶಾಸನಬದ್ಧ ಅವಶ್ಯಕತೆಗಳ ಸ್ಪಷ್ಟ ಉಲ್ಲಂಘನೆಯಾಗಿರುವುದನ್ನು ಅದು ಪತ್ತೆ ಹಚ್ಚಿದೆ. ₹2,000 ಮೀರಿದ ದೇಣಿಗೆ ಕುರಿತ ನಿಯಮ ಮೀರಿ ಒಟ್ಟು ₹14.49 ಲಕ್ಷ ನಗದು ಸಂಗ್ರಹಿಸಿರುವುದನ್ನು ಅದು ಬಹಿರಂಗಪಡಿಸಿದೆ.
ಒಟ್ಟು ಆದಾಯದಿಂದ ವೆಚ್ಚ ಕಡಿತಕ್ಕೆ ಅವಕಾಶ ನೀಡಬೇಕೆಂಬ ಪಕ್ಷದ ಪರ್ಯಾಯ ಅರ್ಜಿಯನ್ನು ಐಟಿಎಟಿ ತಿರಸ್ಕರಿಸಿದೆ. ಕಾಂಗ್ರೆಸ್ ಪಕ್ಷದ ಇಂಥದ್ದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2016ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ಅದು "ತೆರಿಗೆದಾರರು ನಿಗದಿತ ಗಡುವಿನೊಳಗೆ ತಮ್ಮ ರಿಟರ್ನ್ ಸಲ್ಲಿಸದೆ ಸೆಕ್ಷನ್ 13A 3ನ್ನು ಉಲ್ಲಂಘಿಸಿದ್ದಾರೆ ಎಂದು ನಾವು ತೀರ್ಮಾನಿಸಿದ್ದೇವೆ, ನಿವ್ವಳ ತೆರಿಗೆಗೆ ಸಂಬಂಧಿಸಿದಂತೆ ಪಕ್ಷದ ವಾದ ಕೂಡ ನಿರಾಕರಿಸಲು ಅರ್ಹವಾಗಿದೆ" ಎಂದು ನ್ಯಾಯಾಲಯ ಹೇಳಿದೆ.