ಕೂಡಲಸಂಗಮದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ಬಂಧ

“ಸ್ವಾಮೀಜಿಯವರ ಘನತೆಗೆ ಮತ್ತಷ್ಟು ಹಾನಿಯಾಗುವುದನ್ನು ತಪ್ಪಿಸುವ ದೃಷ್ಟಿಯಿಂದ ಮುಂದಿನ ವಿಚಾರಣೆವರೆಗೆ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡುವುದು ಸೂಕ್ತ” ಎಂಬ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.
Basava Jayamrutyunjaya Swamiji
Basava Jayamrutyunjaya Swamiji
Published on

ಕೂಡಲಸಂಗಮ ಪಂಚಮಸಾಲಿ ಮಠದ ಪೀಠಾಧಿಪತಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಯಾವುದೇ ತೆರನಾದ ಮಾನಹಾನಿ ಸುದ್ದಿ ಪ್ರಕಟಿಸದಂತೆ ಬೆಂಗಳೂರಿನ ಸತ್ರ ನ್ಯಾಯಾಲಯವು ಈಚೆಗೆ ಮಾಧ್ಯಮಗಳ ವಿರುದ್ಧ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಿದೆ.

ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ತಮ್ಮ ವಿರುದ್ಧ ಯಾವುದೇ ತೆರನಾದ ಮಾನಹಾನಿ ಸುದ್ದಿ ಪ್ರಸಾರ, ಪ್ರಕಟಣೆ ಮತ್ತು ಹಂಚಿಕೆ ಮಾಡದಂತೆ ಶಾಶ್ವತ ಪ್ರತಿಬಂಧಕಾದೇಶ ಮಾಡಬೇಕು ಎಂದು ಅಸಲು ದಾವೆ ಸಲ್ಲಿಸಿದ್ದಾರೆ. ಇದರ ಭಾಗವಾಗಿ ಅವರು ಸಲ್ಲಿಸಿರುವ ಮಧ್ಯಂತರ ಅರ್ಜಿಯಲ್ಲಿ ತಾತ್ಕಾಲಿಕ ಪ್ರತಿಬಂಧಕಾದೇಶ ಹೊರಡಿಸುವಂತೆ ಕೋರಿರುವ ಮನವಿಯನ್ನು 30ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಎನ್‌ ಆರ್‌ ಮಧು ಅವರು ಪುರಸ್ಕರಿಸಿದ್ದಾರೆ.

Judge N R Madhu
Judge N R Madhu

“ಸ್ವಾಮೀಜಿಯ ಹೆಸರು ಉಲ್ಲೇಖಿಸದೇ ಸಂಯುಕ್ತ ಕರ್ನಾಟಕ ಪತ್ರಿಕೆಯು ವರದಿ ಪ್ರಕಟಿಸಿದೆ ಎಂಬುದು ದಾಖಲೆಗಳಿಂದ ತಿಳಿಯುತ್ತದೆ. ಆಕ್ಷೇಪಾರ್ಹ ಸುದ್ದಿಯಲ್ಲಿ ಸ್ವಾಮೀಜಿಯವರತ್ತ ಬೆರಳು ಮಾಡಲಾಗಿದೆ. ಈ ದೃಷ್ಟಿಯಿಂದ ಸ್ವಾಮೀಜಿಯವರು ತಾತ್ಕಾಲಿಕ ಪ್ರತಿಬಂಧಕಾದೇಶ ಪಡೆಯುವ ಆಧಾರವನ್ನು ಸಾಬೀತುಪಡಿಸಿದ್ದಾರೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ಸ್ವಾಮೀಜಿಯವರ ಘನತೆಗೆ ಮತ್ತಷ್ಟು ಹಾನಿಯಾಗುವುದನ್ನು ತಪ್ಪಿಸುವ ದೃಷ್ಟಿಯಿಂದ ಮುಂದಿನ ವಿಚಾರಣೆವರೆಗೆ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡುವುದು ಸೂಕ್ತ” ಎಂಬ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ. ಅಲ್ಲದೇ, ಏಕಪಕ್ಷೀಯ ತಡೆ ಆದೇಶ ಮಾಡದೇ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದರೆ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡುವ ಉದ್ದೇಶವೇ ನಿಷ್ಪಲವಾಗಲಿದೆ ಎಂದೂ ಹೇಳಿದೆ.

ಹೀಗಾಗಿ, ಪ್ರತಿವಾದಿಗಳು, ಅವರ ಬೆಂಬಲಿಗರು, ಏಜೆಂಟ್‌ಗಳು, ಸೇವಕರು, ನೇಮಕ ಮಾಡಿಕೊಂಡಿರುವವರು, ಅಟಾರ್ನಿಗಳು ಮತ್ತು ಅವರ ಸೂಚನೆಯಂತೆ ನಡೆದುಕೊಳ್ಳುವ ಎಲ್ಲರೂ ಸ್ವಾಮೀಜಿ ವಿರುದ್ಧ ಯಾವುದೇ ತೆರನಾದ ಮಾನಹಾನಿ ಸುದ್ದಿ ಪ್ರಕಟ, ಪ್ರಸಾರ, ಹಂಚಿಕೆ ಮಾಡಬಾರದು ಎಂದು ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಲಾಗಿದೆ ಎಂದು ಆದೇಶದಲ್ಲಿ ಹೇಳಿದೆ. ಅಲ್ಲದೇ, ಎಲ್ಲಾ ಪ್ರತಿವಾದಿಗಳಿಗೆ ಸಮನ್ಸ್‌ ಜಾರಿ ಮಾಡಿದ್ದು, ವಿಚಾರಣೆಯನ್ನು ಏಪ್ರಿಲ್‌ 27ಕ್ಕೆ ನ್ಯಾಯಾಲಯ ಮುಂದೂಡಿದೆ.

ಸಂಯುಕ್ತ ಕರ್ನಾಟಕ ಪತ್ರಿಕೆಯು ಸ್ವಾಮೀಜಿ ಅನೈತಿಕ ಮತ್ತು ಅಕ್ರಮವಾಗಿ ನಡೆದುಕೊಂಡಿದ್ದಾರೆ ಎಂಬ ಸುದ್ದಿ ಪ್ರಕಟಿಸಿದೆ ಎಂದು ಅಫಿಡವಿಟ್‌ ಜೊತೆ ಸಲ್ಲಿಸಿರುವ ದಾಖಲೆಯಲ್ಲಿ ವಿವರಿಸಲಾಗಿದೆ. ಇದಕ್ಕೂ ಮುನ್ನ. ಪತ್ರಿಕೆಯು ಸುದ್ದಿಯ ನಿಖರತೆಯನ್ನು ಖಾತರಿಪಡಿಸಿಲ್ಲ. ಹೀಗಾಗಿ, ಮಧ್ಯಂತರ ಅರ್ಜಿ ಪುರಸ್ಕರಿಸಬೇಕು ಎಂದು ಸ್ವಾಮೀಜಿ ಕೋರಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ದಾವೆಯಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಗ್ಯಾರಂಟಿ ಸುದ್ದಿ ವಾಹಿನಿ, ಸೌಖ್ಯಾ ಗೋಯಂಕರ್‌, ವಿಜಯವಾಹಿನಿ ನ್ಯೂಸ್‌, ಮೆಟಾ ಮತ್ತು ಯೂಟ್ಯೂಬ್‌ಗಳನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.

ಮಹಿಳೆಯೊಬ್ಬರ ಜೊತೆಗಿನ ಸಲುಗೆಯನ್ನು ದುರ್ಬಳಕೆ ಮಾಡಿಕೊಂಡು ಆಕೆಯ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತೆಯು ಮುಖ್ಯಮಂತ್ರಿ ಸಿದ್ದರಾಮ್ಯ ಅವರಿಗೆ ನ್ಯಾಯ ಕೊಡಿಸುವಂತೆ ಕೋರಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ಸ್ವಾಮೀಜಿ ಅವರು ವಿಜಯಪುರ ಸಮೀಪದ ಕಗ್ಗೋಡ ಗ್ರಾಮದ ಬಳಿ ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾಳೆ ಮತ್ತು ಮೂರು ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾಳೆ ಎಂದು ಮಹಿಳೆ ಮತ್ತು ಇತರೆ ಮೂವರ ವಿರುದ್ಧ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

Attachment
PDF
Jagadguru Basava Jayamrutyunjaya Swamiji Vs Samyukta Karnataka
Preview
Kannada Bar & Bench
kannada.barandbench.com