ಜಹಾಂಗೀರ್‌ಪುರಿ ತೆರವು ಕಾರ್ಯಾಚರಣೆಗೆ ಅರ್ಜಿದಾರರು ಅನಗತ್ಯ ಕೋಮು ಬಣ್ಣ ನೀಡಿದ್ದಾರೆ ಎಂದು ಉತ್ತರ ದೆಹಲಿ ಮಹಾನಗರ ಪಾಲಿಕೆ (ಎನ್‌ಡಿಎಂಸಿ) ಸೋಮವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ [ಜಮಿಯತ್ ಉಲೇಮಾ-ಇ-ಹಿಂದ್ ಮತ್ತು ಎನ್‌ಡಿಎಂಸಿ ನಡುವಣ ಪ್ರಕರಣ].
ಏಪ್ರಿಲ್ 20 ರಂದು ಅಥವಾ ಹಿಂದೆ ನಡೆದ ಯಾವುದೇ ಕಾರ್ಯಾಚರಣೆಯಲ್ಲಿ ಮನೆ ಇಲ್ಲವೇ ಅಂಗಡಿಗಳನ್ನು ಕೆಡವಿಲ್ಲ. ಯಾವುದೇ ಸಮುದಾಯವನ್ನೂ ಗುರಿ ಮಾಡಿಕೊಂಡಿಲ್ಲ. ಸಾರ್ವಜನಿಕ ಭೂಮಿಯನ್ನು ಒತ್ತುವರಿ ಮಾಡಿಕೊಂಡ ಕಟ್ಟಡಗಳನ್ನಷ್ಟೇ ತೆರವುಗೊಳಿಸಲಾಗಿದೆ. ಇದಕ್ಕಾಗಿ ಬುಲ್ಡೋಜರ್ ಬಳಸಬೇಕಾಗುತ್ತದೆ. ಆದರೆ ಕಟ್ಟಡ ಸಾಲುಗಳು ಅಖಂಡವಾಗಿ ಉಳಿದಿವೆ ಎಂದು ಪಾಲಿಕೆ ತಿಳಿಸಿದೆ.
ಅರ್ಜಿದಾರರು ಪ್ರಕರಣವನ್ನು ಉದ್ದೇಶಪೂರ್ವಕಾಗಿ ರೋಚಕಗೊಳಿಸುವ ಸಲುವಾಗಿ ಮಾಹಿತಿಯನ್ನು ಹತ್ತಿಕ್ಕಿದ್ದಾರೆ ಎಂದು ಕೂಡ ದೂರಲಾಗಿದೆ.
ಅದೇ ರೀತಿ ಜಹಾಂಗೀರ್‌ಪುರಿ ತೆರವು ಕಾರ್ಯಾಚರಣೆ ಪ್ರಶ್ನಿಸಿ ಜ್ಯೂಸ್ ಅಂಗಡಿ ಮಾಲೀಕ ಗಣೇಶ್ ಗುಪ್ತ ಸಲ್ಲಿಸಿರುವ ಅರ್ಜಿಯನ್ನು ಕೂಡ ಪುರಸ್ಕರಿಸಬಾರದು. ಏಕೆಂದರೆ ತಾನು ನೀಡಿದ್ದ ಶೋಕಾಸ್ ನೋಟಿಸ್‌ಗೆ ಆತ ಉತ್ತರ ನೀಡಿಲ್ಲ ಎಂದು ಎನ್‌ಡಿಎಂಸಿ ತಿಳಿಸಿದೆ.
ಸೂಕ್ತ ಅನುಮತಿ ಪಡೆಯದೇ ಇದ್ದುದರಿಂದ ಜ್ಯೂಸ್ ಅಂಗಡಿಯ ಮೊದಲ ಮಹಡಿಯನ್ನು ಉಪಯೋಗಿಸದಂತೆ ಪಾಲಿಕೆ ಆದೇಶ ಮಾಡಿದೆ ಎಂದು ಅಫಿಡವಿಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಅಲ್ಲದೆ, ಸಾರ್ವಜನಿಕ ರಸ್ತೆಯನ್ನು ಎಂಟರಿಂದ ಹತ್ತು ಅಡಿಗಳಷ್ಟು ಒತ್ತುವರಿ ಮಾಡಿಕೊಂಡು ಅಕ್ರಮ ನಿರ್ಮಾಣಗಳನ್ನು ಮಾಡಲಾಗಿತ್ತು, ಕೆಲವೆಡೆ ತ್ಯಾಜ್ಯ ಸುರಿಯಲಾಗಿತ್ತು. ಇಂತಹ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲು ಯಾವುದೇ ನೋಟಿಸ್ ನೀಡುವ ಅಗತ್ಯವಿರುವುದಿಲ್ಲ ಎಂದೂ ಸಹ ಪಾಲಿಕೆ ತಿಳಿಸಿದೆ.