ದೆಹಲಿಯ ಜಹಾಂಗೀರ್‌ಪುರಿ ಗಲಭೆ ಕುರಿತು ಸಿಜೆಐಗೆ ಪತ್ರ ಮನವಿ ಸಲ್ಲಿಸಲಾಗಿದ್ದ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ದಂಗೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ತನ್ನ ಎಪಿಸ್ಟೊಲರಿ ಅಧಿಕಾರ ವ್ಯಾಪ್ತಿ (ಸಂತ್ರಸ್ತರ ಪರವಾಗಿ ಬರೆಯಲಾದ ಮನವಿ ಪತ್ರವನ್ನು ಆಧರಿಸಿ ನ್ಯಾಯಿಕ ಕ್ರಮಕ್ಕೆ ಮುಂದಾಗಲು ನ್ಯಾಯಾಲಯಕ್ಕೆ ಇರುವ ಅಧಿಕಾರ) ಚಲಾಯಿಸಿ ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ವಕೀಲ ಅಮೃತ್‌ಪಾಲ್ ಸಿಂಗ್ ಖಾಸ್ಲಾ ಅವರ ಪತ್ರ ಮನವಿ ತಿಳಿಸಿದೆ.
ಇದುವೆರಗೆ ದೆಹಲಿ ಪೊಲೀಸರು ನಡೆಸಿರುವ ತನಿಖೆ ಪಕ್ಷಪಾತದಿಂದ, ಮತೀಯತೆಯಿಂದ ಕೂಡಿದ್ದು, ಗಲಭೆ ಹುಟ್ಟುಹಾಕಿದವರನ್ನು ನೇರವಾಗಿ ರಕ್ಷಿಸುತ್ತದೆ.
2020ರ ಗಲಭೆಯಲ್ಲಿ ವಹಿಸಿದ ಪಾತ್ರದಿಂದಾಗಿ ದೆಹಲಿ ಪೊಲೀಸರ ಬಗೆಗಿನ ಅಭಿಪ್ರಾಯ ಕುಂದಿದ್ದು, ಅವರ ಮೇಲೆ ಜನರು ಇಟ್ಟ ನಂಬಿಕೆ ದುರ್ಬಲಗೊಂಡಿದೆ. 2020ರಲ್ಲಿ ಗಲಭೆಗಳನ್ನು ತಡೆಯಲು ವಿಫಲವಾದ ದೆಹಲಿ ಪೊಲೀಸರಿಗೆ ಇದೇ ನ್ಯಾಯಾಲಯ ಎಚ್ಚರಿಕೆ ನೀಡಿತ್ತು.
ರಾಜಧಾನಿಯಲ್ಲಿ ಎರಡನೇ ಬಾರಿಗೆ ಗಲಭೆಗಳು ಭುಗಿಲೆದ್ದಿದ್ದು ಎರಡೂ ಸಂದರ್ಭಗಳಲ್ಲಿ ಕೇವಲ "ಅಲ್ಪಸಂಖ್ಯಾತ" ಸಮುದಾಯದ ಸದಸ್ಯರನ್ನು ಮಾತ್ರ ದೂಷಿಸಲಾಗುತ್ತಿದೆ.
ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹನುಮ ಜಯಂತಿ ಶೋಭಾ ಯಾತ್ರೆಯ ಭಾಗವಾಗಿದ್ದ ಕೆಲವು ಶಸ್ತ್ರಸಜ್ಜಿತ ಸದಸ್ಯರು ಮಸೀದಿಗೆ ನುಗ್ಗಿ ಕೇಸರಿ ಧ್ವಜ ನೆಟ್ಟರು. ನಂತರ ಎರಡೂ ಸಮುದಾಯಗಳು ಕಲ್ಲು ತೂರಾಟ ನಡೆಸಿದವು,.
ಇಡೀ ಘಟನೆಯಲ್ಲಿ 7 ರಿಂದ 8 ದೆಹಲಿ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರು ತೀವ್ರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ತಿಗೆ ಹಾನಿಯಾಗಿದೆ. ಈ ಗಲಭೆಗಳು ಈಗಾಗಲೇ ಕೋಮು ವ್ರಣವಾಗಿದ್ದು ಇದನ್ನು ಮತ್ತಷ್ಟು ಆಳವಾಗಿಸಲು ದೆಹಲಿ ಪೊಲೀಸರು ಕೇವಲ ಮುಸ್ಲಿಂ ಸಮುದಾಯಕ್ಕೆ ಸೇರುವ 7 ಯುವಕರನ್ನು ಬಂಧಿಸಿದ್ದಾರೆ.