ಕಿರುನಾಟಕದಲ್ಲಿ ಅಂಬೇಡ್ಕರ್‌ಗೆ ಅವಮಾನ: ಜೈನ್‌ ಕಾಲೇಜಿನ ಏಳು ವಿದ್ಯಾರ್ಥಿಗಳ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ನಾಟಕವು ಸಭಾಂಗಣವೊಂದರಲ್ಲಿ ಪ್ರದರ್ಶನವಾಗಿದೆಯೇ ವಿನಾ ಸಾರ್ವಜನಿಕ ಪ್ರದೇಶದಲ್ಲಿ ಅಲ್ಲ. ಪ್ರಕರಣದಿಂದ ಅರ್ಜಿದಾರ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಹಾಕಲ್ಪಡುವ ಭೀತಿ ಎದುರಿಸುತ್ತಿದ್ದಾರೆ ಎಂದು ವಾದಿಸಿದ ಅರ್ಜಿದಾರರ ಪರ ವಕೀಲರು.
Justice M Nagaprasanna and Karnataka HC
Justice M Nagaprasanna and Karnataka HC

ಸಂವಿಧಾನಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಮತ್ತು ದಲಿತ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಕಿರು ವಿಡಂಬನಾ ನಾಟಕ ಪ್ರದರ್ಶಿಸಿದ ಆರೋಪದ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅಡಿ ಬೆಂಗಳೂರು ಜೈನ್ ಯೂನಿವರ್ಸಿಟಿ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಏಳು ವಿದ್ಯಾರ್ಥಿಗಳ ವಿರುದ್ಧದ ದಾಖಲಾಗಿದ್ದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ತಡೆಯಾಜ್ಞೆ ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್ ಹಾಗೂ ಅಧೀನ ನ್ಯಾಯಾಲಯದ ವಿಚಾರಣೆ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ನೈಮಾ ಅಕ್ತರ್ ನಜಾರಿಯಾ ಸೇರಿ ಏಳು ಮಂದಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಶ್ರೀರಂಗ ಅವರು “ವಿದ್ಯಾರ್ಥಿಗಳು ದುರುದ್ದೇಶವಿಲ್ಲದೆ ಕೇವಲ ವಿಡಂಬನಾತ್ಮಕವಾಗಿ ಕಿರು ನಾಟಕ ಪ್ರದರ್ಶಿಸಿದ್ದಾರೆ. ವಿಡಂಬನಾತ್ಮಕ ಸಾಹಿತ್ಯವು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಇದು ಕಲ್ಪನೆ, ಪರಿಕಲ್ಪನೆ, ನೀತಿ ಅಥವಾ ನಿರ್ದಿಷ್ಟ ವ್ಯಕ್ತಿಯನ್ನು ಹಾಸ್ಯದ ಮೂಲಕ ಟೀಕಿಸಲು ಉದ್ದೇಶಿಸಲಾಗಿದೆ. ಯಾವುದೇ ತೆರನಾದ ಅಭಿಪ್ರಾಯದ ವ್ಯಕ್ತಪಡಿಸುವುದನ್ನು ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ (ಅಭಿವ್ಯಕ್ತಿ ಸ್ವಾತಂತ್ರ್ಯ) ರಕ್ಷಿಸಲ್ಪಟ್ಟಿದೆ” ಎಂದು ವಾದಿಸಿದ್ದರು.

ಅಲ್ಲದೇ, “ಪ್ರಕರಣ ಸಂಬಂಧ ದೂರು ದಾಖಲಿಸಲು ಸಮಾಜ ಕಲ್ಯಾಣ ಇಲಾಖೆಗೆ ಸಹಾಯಕ ನಿರ್ದೇಶಕರಿಗೆ ಯಾವುದೇ ಅಧಿಕಾರ ಇಲ್ಲ. ದೂರಿನಲ್ಲಿ ಹೇಳಿರುವಂತೆ ಅರ್ಜಿದಾರರು ಎಸ್‌ಸಿ-ಎಸ್‌ಟಿ ಸಮುದಾಯದ ಯಾವೊಬ್ಬರಿಗೂ ಅವಮಾನ, ಅಪಮಾನ ಹಾಗೂ ನಿಂದನೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಆ ಸಮುದಾಯದ ಯಾರೊಬ್ಬರಿಗೂ ಅಗೌರವ ತೋರಿಲ್ಲ. ನಾಟಕವು ಸಭಾಂಗಣವೊಂದರಲ್ಲಿ ಪ್ರದರ್ಶನವಾಗಿದೆ ಹೊರತು ಸಾರ್ವಜನಿಕ ಪ್ರದೇಶದಲ್ಲಿ ಅಲ್ಲ. ಪ್ರಕರಣದಿಂದ ಅರ್ಜಿದಾರ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಹಾಕಲ್ಪಡುವ ಭೀತಿ ಎದುರಿಸುತ್ತಿದ್ದಾರೆ. ಆದ್ದರಿಂದ, ಪ್ರಕರಣವನ್ನು ರದ್ದುಪಡಿಸಬೇಕು” ಎಂದು ಕೋರಿದ್ದರು. ಈ ವಾದ ಆಲಿಸಿದ ಪೀಠವು ಪ್ರಕರಣಕ್ಕೆ ತಡೆ ನೀಡಿ, ಆದೇಶಿಸಿದೆ.

ಕಾಲೇಜು ವತಿಯಿಂದ ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ 2023ರ ಫೆಬ್ರವರಿ 8ರಂದು ಹಮ್ಮಿಕೊಂಡಿದ್ದ ಯುವ ಜನೋತ್ಸವದ ಅಂಗವಾಗಿ ಅರ್ಜಿದಾರ ವಿದ್ಯಾರ್ಥಿಗಳು ಸಮಾಜದಲ್ಲಿ ಚಾಲ್ತಿಯಲ್ಲಿರುವ ಮೀಸಲು ವ್ಯವಸ್ಥೆ ಕುರಿತು ವಿಡಂಬನಾತ್ಮಕ ಕಿರು ನಾಟಕ (ಮ್ಯಾಡ್- ಆ್ಯಡ್ ಸ್ಕಿಟ್) ಪ್ರದರ್ಶನ ನೀಡಿದ್ದರು. ಅದರಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಮತ್ತು ದಲಿತ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಸಂಭಾಷಣೆಗಳನ್ನು ವಿದ್ಯಾರ್ಥಿಗಳು ಹೇಳಿದ್ದರು ಎನ್ನಲಾಗಿತ್ತು. ಕಿರು ನಾಟಕದ ವಿಡಿಯೊ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿದ್ದು, ಅದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಘಟನೆ ಕುರಿತಂತೆ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು 2023ರ ಫೆಬ್ರವರಿ 10ರಂದು ಜಯನಗರ ಸಿದ್ಧಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಪೊಲೀಸರು, ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಅಡಿ ಎಫ್‌ಐಆರ್ ದಾಖಲಿಸಿ, ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದರು. ಪ್ರಕರಣವು ಬೆಂಗಳೂರಿನ 70ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಜೈನ್ ಯೂನಿವರ್ಸಿಟಿ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ನಿರ್ದೇಶಕ ದಿನೇಶ್ ನೀಲಕಂಠ್ ಬೋರ್ಕರ್‌ ಮತ್ತು ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಪಿ.ಪ್ರತೀಕ್ ತೋಡ್ಕರ್ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ 2023ರ ಜುಲೈ 5ರಂದು ಹೈಕೋರ್ಟ್ ಆದೇಶಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಅರ್ಜಿದಾರರ ಪರವಾಗಿ ವಕೀಲರಾದ ಸುಮನಾ ನಾಗಾನಂದ್‌ ಮತ್ತು ಅಶ್ವಿನಿ ಎನ್‌. ರವೀಂದ್ರ ವಕಾಲತ್ತು ಹಾಕಿದ್ದಾರೆ.

Kannada Bar & Bench
kannada.barandbench.com