ಜಾಮಿಯಾ ಹಿಂಸಾಚಾರ: ಶರ್ಜೀಲ್ ಖುಲಾಸೆ ಮಾಡಿದ್ದ ನ್ಯಾಯಾಧೀಶರು ಅದೇ ಘಟನೆಯ ಮತ್ತೊಂದು ಪ್ರಕರಣದ ವಿಚಾರಣೆಯಿಂದ ಹಿಂದಕ್ಕೆ

ಜಾಮಿಯಾ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇಮಾಮ್ ಮತ್ತಿತರರನ್ನು ಖುಲಾಸೆ ಮಾಡಿದ್ದ ನ್ಯಾ. ಎಎಸ್‌ಜೆ ಅರುಲ್ ವರ್ಮಾ ಅವರು ವೈಯಕ್ತಿಕ ಕಾರಣ ನೀಡಿ ಅದೇ ಘಟನೆಯ ಕುರಿತಾದ ಮತ್ತೊಂದು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
Jamia Milia Islamia
Jamia Milia Islamia

ಜಾಮಿಯಾ ಹಿಂಸಾಚಾರ ಪ್ರಕರಣದಲ್ಲಿ ಕಳೆದ ವಾರವಷ್ಟೇ ಶರ್ಜೀಲ್ ಇಮಾಮ್ ಮತ್ತಿತರ ವಿದ್ಯಾರ್ಥಿ ನಾಯಕರನ್ನು ಬಿಡುಗಡೆ ಮಾಡಿದ್ದ ನ್ಯಾಯಾಧೀಶರು ವೈಯಕ್ತಿಕ ಕಾರಣ ನೀಡಿ ಅದೇ ಘಟನೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.

ಸಾಕೇತ್ ನ್ಯಾಯಾಲಯಗಳ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಎಎಸ್‌ಜೆ) ಅರುಲ್‌ ವರ್ಮಾ ಅವರು ಶುಕ್ರವಾರ ಹೊರಡಿಸಿದ ಆದೇಶದಲ್ಲಿ, ʼದಾವೆಯನ್ನು ವರ್ಗಾಯಿಸುವುದಕ್ಕಾಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದೆದುರು ಪ್ರಕರಣವನ್ನು ಇರಿಸುವಂತೆ ಆದೇಶಿಸಿದರು.

ನವದೆಹಲಿಯ ಕೇಂದ್ರೀಯ ವಿಶ್ವವಿದ್ಯಾಲಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಡಿಸೆಂಬರ್ 2019ರಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಮುಖಂಡರಾದ ಶರ್ಜೀಲ್ ಇಮಾಮ್, ಸಫೂರ ಜರ್ಗರ್, ಆಸಿಫ್ ಇಕ್ಬಾಲ್ ತನ್ಹಾ ಸೇರಿದಂತೆ ಎಂಟು ಮಂದಿಯನ್ನು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಅರುಲ್‌ ಅವರು ಫೆಬ್ರವರಿ 4 ರಂದು ಬಿಡುಗಡೆ ಮಾಡಿದ್ದರು.

Also Read
[ಜಾಮಿಯಾ ಹಿಂಸಾಚಾರ] ಶರ್ಜೀಲ್ ಇಮಾಮ್, ಇತರರು ಹರಕೆಯ ಕುರಿಗಳು ಎಂದ ದೆಹಲಿ ನ್ಯಾಯಾಲಯ; ಪ್ರಕರಣದಿಂದ ಖುಲಾಸೆ

ಈ ಆದೇಶವನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಉಲ್ಲೇಖಿಸಲಾಗಿದ್ದು, ಬರುವ ಸೋಮವಾರ ಪ್ರಕರಣವನ್ನು ಪಟ್ಟಿ ಮಾಡುವ ಸಾಧ್ಯತೆ ಇದೆ.

ಇಮಾಮ್‌ ಮತ್ತಿತರರನ್ನು ಬಿಡುಗಡೆ ಮಾಡಿದ ಆದೇಶದಲ್ಲಿ ದೆಹಲಿ ಪೊಲೀಸರು ʼಅಸಂಬದ್ಧ ಆರೋಪಪಟ್ಟಿʼ ಸಲ್ಲಿಸಿದ್ದಾರೆ ಎಂದು ಎಎಸ್‌ಜಿ ಅರುಲ್‌ ವರ್ಮಾ ಅವರು ತರಾಟೆಗೆ ತೆಗೆದುಕೊಂಡಿದ್ದರು.

"ಆರೋಪಪಟ್ಟಿ ಮತ್ತು ಮೂರು ಪೂರಕ ಆರೋಪಪಟ್ಟಿಗಳ ಪರಿಶೀಲನೆಯಿಂದ ಲಭ್ಯವಾದ ವಾಸ್ತವವಾಂಶಗಳನ್ನು ಪರಿಶೀಲಿಸಿದಾಗ ಕೃತ್ಯದ ಹಿಂದಿನ ನಿಜವಾದ ಅಪರಾಧಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ, ಆದರೆ ಖಂಡಿತವಾಗಿಯೂ ಅವರು ಕೆಲ ವ್ಯಕ್ತಿಗಳನ್ನು ಹರಕೆಯ ಕುರಿಗಳನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಗುಂಪಿನಲ್ಲಿದ್ದ ಕೆಲವರನ್ನು ಆರೋಪಿಗಳನ್ನಾಗಿ ಮಾಡಲು, ಅಂತೆಯೇ ಇತರರನ್ನು ಪೊಲೀಸ್‌ ಸಾಕ್ಷಿಗಳನ್ನಾಗಿಸಲು ಪೊಲೀಸರು ಮನಸೋ ಇಚ್ಛೆ ನಡೆದುಕೊಂಡಿದ್ದು, ಇದರಿಂದಾಗಿ ನ್ಯಾಯಸಮ್ಮತತೆಗೆ ಧಕ್ಕೆಯಾಗಿದೆ ಎಂದು ಅವರು ಕಿಡಿಕಾರಿದ್ದರು.

Related Stories

No stories found.
Kannada Bar & Bench
kannada.barandbench.com