ಆರಾಧನಾ ಸ್ಥಳಗಳ ಕಾಯಿದೆ ಪ್ರಶ್ನಿಸಿ ಅರ್ಜಿ: ಪಕ್ಷಕಾರರನ್ನಾಗಿ ಸೇರಿಸಿಕೊಳ್ಳಲು ಸುಪ್ರೀಂಗೆ ಜಾಮಿಯತ್‌ ಉಲಾಮಾ ಮನವಿ

ಮುಸ್ಲಿಂ ಆರಾಧನಾ ಸ್ಥಳಗಳನ್ನ ಪರೋಕ್ಷವಾಗಿ ಗುರಿಯಾಗಿಸಿಕೊಂಡು ಅಶ್ವಿನಿ ಕುಮಾರ್‌ ಅವರ ಪಿಐಎಲ್‌ ಸಲ್ಲಿಕೆಯಾಗಿದ್ದು, ಮುಸ್ಲಿಂ ಸಮುದಾಯದ ದೃಷ್ಟಿಕೋನವನ್ನು ಮುಂದಿಡಬಯಸಲು ಅವಕಾಶ ಕೋರಿದ ಮನವಿದಾರರು.
Supreme Court
Supreme Court

ಆರಾಧನಾ ಸ್ಥಳಗಳ (ವಿಶೇಷ ಅವಕಾಶ) ಕಾಯಿದೆ, 1991ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಬಿಜೆಪಿ ಮುಖಂಡ, ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ಧಮೆಯಲ್ಲಿ ತಮ್ಮನ್ನು ಪಕ್ಷಕಾರರನ್ನಾಗಿ ಸೇರಿಸಿಕೊಳ್ಳಲು ಮನವಿ ಮಾಡಿ ಜಾಮಿಯತ್‌ ಉಲಾಮಾ ಇ ಹಿಂದ್‌ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಅರ್ಜಿ ಸಲ್ಲಿಸಿರುವ ಜಾಮಿಯತ್‌ ಉಲಾಮಾ ಇ ಹಿಂದ್‌ ತನ್ನನ್ನು ತಾನು ಇಸ್ಲಾಂ ಧರ್ಮ, ಸಂಸ್ಕೃತಿ, ಪರಂಪರೆಯನ್ನು ರಕ್ಷಿಸಲು ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಎಂದು ಗುರುತಿಸಿಕೊಂಡಿದೆ.

ಅಶ್ವಿನಿ ಕುಮಾರ್‌ ಉಪಾಧ್ಯಾಯ್ ಸಲ್ಲಿಸಿರುವ ಅರ್ಜಿಯು ಪರೋಕ್ಷವಾಗಿ ಇಸ್ಲಾಂ ಗುಣಧರ್ಮವಿರುವ ಆರಾಧನಾ ಸ್ಥಳಗಳನ್ನು ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಹಾಗಾಗಿ ಮುಸ್ಲಿಂ ಸಮುದಾಯದ ದೃಷ್ಟಿಕೋನವನ್ನು ಮುಂದಿಡಲು ತಮ್ಮನ್ನು ಪಕ್ಷಕಾರರನ್ನಾಗಿ ಸೇರಿಸಿಕೊಳ್ಳಬೇಕೆಂದು ಜಾಮಿಯತ್‌ ತನ್ನ ಮನವಿಯಲ್ಲಿ ಕೋರಿದೆ.

ಸುಪ್ರೀಂ ಕೋರ್ಟ್‌ನ ಅಯೋಧ್ಯೆಯ ರಾಮಮಂದಿರ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಮನವಿದಾರರು ಅವಲಂಬಿಸಿದ್ದು, ಸಂವಿಧಾನದ ಮೂಲ ಆಶಯಗಳನ್ನು, ಮೌಲ್ಯಗಳನ್ನು ಆರಾಧನಾ ಸ್ಥಳಗಳ ಕಾಯಿದೆಯು ರಕ್ಷಿಸುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮುಂದುವರೆದು, "ಕಾಯಿದೆಯು ಭಾರತದ ಜಾತ್ಯತೀತ ರಾಜ್ಯಾಡಳಿತ ವ್ಯವಸ್ಥೆಯನ್ನು ರಕ್ಷಿಸಲು ರೂಪಿಸಿರುವ ಶಾಸನಾತ್ಮಕ ಸಾಧನವಾಗಿದೆ. ಜಾತ್ಯತೀತತೆಯು ಭಾರತದ ಸಂವಿಧಾನದ ಮೂಲ ಗುಣಲಕ್ಷಣಗಳಲ್ಲೊಂದಾಗಿದೆ," ಎಂದು ಮನವಿಯಲ್ಲಿ ಪ್ರಮುಖವಾಗಿ ಹೇಳಲಾಗಿದೆ.

ಅಲ್ಲದೆ, ಜನತೆ ಕಾನೂನನ್ನು ಕೈಗೆತ್ತಿಕೊಳ್ಳುವ ಮೂಲಕ ಇತಿಹಾಸದಲ್ಲಿ ಘಟಿಸಿದ ತಪ್ಪುಗಳನ್ನು ಪರಿಹರಿಸಲಾಗದು. ಇತಿಹಾಸದಲ್ಲಿ ಸಂಭವಿಸಿದ ತಪ್ಪುಗಳನ್ನು ಶೋಷಣೆ ಮಾಡುವ ಸಾಧನಗಳನ್ನಾಗಿ ಬಳಸಕೂಡದು ಎಂದು ಸಂಸತ್ತು ಸಹ ಸ್ಪಷ್ಟವಾಗಿ ಹೇಳಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com