ಟ್ಯಾಕ್ಸಿ ನಿರ್ವಾಹಕರಿಂದ ಪ್ರವಾಸಿಗರ ಸುಲಿಗೆ: ಸರ್ಕಾರದ ನಿಷ್ಕ್ರಿಯತೆಗೆ ಕಾಶ್ಮೀರ ಹೈಕೋರ್ಟ್‌ ಛೀಮಾರಿ

ಸಕ್ಷಮ ಪ್ರಾಧಿಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ವಿಧಿಸಿರುವ ಟ್ಯಾಕ್ಸಿ ನಿರ್ವಾಹಕರ ನೋಂದಣಿಯನ್ನು ಅಧಿಕಾರಿಗಳು ರದ್ದುಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಟ್ಯಾಕ್ಸಿ ನಿರ್ವಾಹಕರಿಂದ ಪ್ರವಾಸಿಗರ ಸುಲಿಗೆ: ಸರ್ಕಾರದ ನಿಷ್ಕ್ರಿಯತೆಗೆ ಕಾಶ್ಮೀರ ಹೈಕೋರ್ಟ್‌ ಛೀಮಾರಿ
Published on

ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ದುಬಾರಿ ದರ ವಿಧಿಸುವುದನ್ನು ತಡೆಯಲು ಅಲ್ಲಿನ ಕೇಂದ್ರಾಡಳಿತ ಪ್ರದೇಶ ಸರ್ಕಾರ ವಿಫಲವಾಗಿದೆ ಎಂದು ಜಮ್ಮು, ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ ಈಚೆಗೆ  ಅಸಮಾಧಾನ ವ್ಯಕ್ತಪಡಿಸಿದೆ [ಟೂರಿಸ್ಟ್‌ ಟ್ಯಾಕ್ಸಿ ಸ್ಟಾಂಡ್‌ ನಂ  1 ಪಹಲ್‌ಗಾಮ್‌ ಇನ್ನಿತರರು ಹಾಗೂ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರ ಮತ್ತಿತರರ ನಡುವಣ ಪ್ರಕರಣ].

 ಕಾಶ್ಮೀರ ಕಣಿವೆಯಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ಟ್ಯಾಕ್ಸಿ ನಿರ್ವಾಹಕರು  ಡಿಜಿಟಲ್‌ ಯುಗದ ಈ ಕಾಲದಲ್ಲಿಯೂ ಹೆಚ್ಚಿನ ದರ ವಿಧಿಸುತ್ತಾರೆ, ವಂಚನೆಯಲ್ಲಿ ತೊಡಗುತ್ತಾರೆ ಎನ್ನುವುದು ಯೋಚಿಸಲು ಅಸಾಧ್ಯವಾದ ಸಂಗತಿ ಎಂದು ನ್ಯಾಯಮೂರ್ತಿ ಸಂಜೀವ್ ಕುಮಾರ್ ಹೇಳಿದರು.

ಪ್ರವಾಸೋದ್ಯಮ ಇಲಾಖೆ  ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ವಿಧಿಸಲು ಪ್ರವಾಸ ನಿರ್ವಾಹಕರು ಧೈರ್ಯ ಮಾಡದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡು ಪ್ರಿಪೇಯ್ಡ್ ಟ್ಯಾಕ್ಸಿಗಳಿಗೆ ನಿಯಮಾವಳಿ ರೂಪಿಸಬೇಕು ಎಂದು ನ್ಯಾಯಾಲಯ ನುಡಿದಿದೆ.  

ಸಕ್ಷಮ ಪ್ರಾಧಿಕಾರ ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚಿನ ದರ ವಿಧಿಸಿರುವ ಟ್ಯಾಕ್ಸಿ ನಿರ್ವಾಹಕರ ನೋಂದಣಿಯನ್ನು ಅಧಿಕಾರಿಗಳು ರದ್ದುಗೊಳಿಸಬೇಕು ಎಂದು ಅದು ಹೇಳಿದೆ.

ದಕ್ಷಿಣ ಕಾಶ್ಮೀರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಪಹಲ್‌ಗಾಮ್‌ ಪ್ರದೇಶದಲ್ಲಿ  ಉಳಿದ ಮಾನ್ಯತೆ ಪಡೆದ ನಿಲ್ದಾಣಗಳಲ್ಲಿ ಹೆಚ್ಚುವರಿ ಟ್ಯಾಕ್ಸಿ ಕಾರ್ಯನಿರ್ವಹಿಸಲು ಅವಕಾಶ ನೀಡುವ ಕಾಶ್ಮೀರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಪಹಲ್‌ಗಾಮ್‌ ಪ್ರವಾಸಿ ಟ್ಯಾಕ್ಸಿ ನಿಲ್ದಾಣ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ಪ್ರತಿ ನಿಲ್ದಾಣದಲ್ಲಿ 600 ಪ್ರವಾಸಿ ಟ್ಯಾಕ್ಸಿಗಳ ನೋಂದಣಿಗಷ್ಟೇ ಅಧಿಕಾರಿಗಳು ಅವಕಾಶ ನೀಡಿದ್ದು ಇತರ ಮಾನ್ಯತೆ ಪಡೆದ ನಿಲ್ದಾಣಗಳಿಂದ ಟ್ಯಾಕ್ಸಿಗಳನ್ನು ಓಡಿಸಲು ಅನುಮತಿ ನೀಡುವುದರಿಂದ ಪಹಲಗಾಮ್‌ ಅದರ ಪಕ್ಕದ ಪ್ರದೇಶಗಳಾದ ಅರು ಕಣಿವೆ, ಬೇತಾಬ್ ಕಣಿವೆ ಮತ್ತು ಚಂದನ್ವಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗುತ್ತದೆ ಎಂದು ದೂರಲಾಗಿತ್ತು.

ಪಹಲ್‌ಗಾಮ್‌ನ ಎರಡು ನಿಲ್ದಾಣಗಳಲ್ಲಿ ಹೆಚ್ಚಿನ ದರವನ್ನು ವಿಧಿಸಲಾಗುತ್ತಿದೆ ಎಂಬ ಪ್ರವಾಸಿಗರ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಉಳಿದ ನಿಲ್ದಾಣಗಳ ಟ್ಯಾಕ್ಸಿಗಳಿಗೆ ಅನುಮತಿ ನೀಡಿದ್ದರು ಎಂದು ನ್ಯಾಯಾಲಯಕ್ಕೆ ತಿಳಿದುಬಂದಿತ್ತು.

ಟ್ಯಾಕ್ಸಿಗಳು ಅವರು ಪರವಾನಗಿ ಹೊಂದಿರುವ ಪ್ರದೇಶಗಳಲ್ಲಿ ಮಾತ್ರ ಕಾರ್ಯನಿರ್ವಹಿಸಬಹುದು ಎಂಬುದನ್ನು ಅಧಿಕಾರಿಗಳು ಮರೆತಂತೆ ತೋರುತ್ತಿದೆ ಎಂದು ನ್ಯಾಯಾಲಯ ಗರಂ ಆಯಿತು.

ಇದೇ ವೇಳೆ, ಪಹಲ್‌ಗಾಮ್‌ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಅವಲಂಬಿಸಿರುವ ಟ್ಯಾಕ್ಸಿ ನಿರ್ವಾಹಕರು ತಮ್ಮ ಜೀವನೋಪಾಯದಿಂದ ವಂಚಿತರಾಗದಂತೆ ನೋಡಿಕೊಳ್ಳುವುದಕ್ಕಾಗಿ ಅಧಿಕಾರಿಗಳು ಸಮಗ್ರ ನೀತಿ ರೂಪಿಸಲು ಸ್ವತಂತ್ರರು ಎಂದು ಪೀಠ ಹೇಳಿದೆ.

ಅಲ್ಲದೆ ಅಧಿಕಾರಿಗಳು, ಪಹಲ್‌ಗಾಮ್‌ ನಗರ ಮತ್ತು ಅದರ ಸುತ್ತಲಿನ ಉಳಿದ ಪ್ರವಾಸಿ ತಾಣಗಳಲ್ಲಿ ಯಾವುದೇ ಟ್ರಾಫಿಕ್ ಅವ್ಯವಸ್ಥೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ.

Kannada Bar & Bench
kannada.barandbench.com