ದಾಲ್‌ ಲೇಕ್‌ನ ತೇಲುವ ಮಾರುಕಟ್ಟೆಯಲ್ಲಿ ಟೀ ಮಾರಾಟಗಾರರಿಗೆ ಕಿರುಕುಳ ನೀಡದಂತೆ ಎಲ್‌ಸಿಎಂಎಗೆ ಹೈಕೋರ್ಟ್‌ ಆದೇಶ

ಪರವಾನಗಿ ಅಥವಾ ದಾಖಲೆ ಇಲ್ಲದೇ ಉದ್ಯಮ ನಡೆಸುತ್ತಿದ್ದರೆ ಅಧಿಕಾರಿಗಳು ಕಾನೂನಿನ ಪ್ರಕಾರ ಸೂಕ್ತ ಕ್ರಮಕೈಗೊಳ್ಳಲು ಸ್ವತಂತ್ರರಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ಹೇಳಿದೆ.
Dal Lake
Dal Lake
Published on

ಶ್ರೀನಗರದ ಸುಪ್ರಸಿದ್ಧ ದಾಲ್‌ ಲೇಕ್‌ನ ತೇಲುವ ಮಾರುಕಟ್ಟೆಯಲ್ಲಿ ಟೀ ಮಾರಾಟಗಾರರಿಗೆ ಅನಗತ್ಯವಾಗಿ ಕಿರುಕುಳ ನೀಡದಂತೆ ಜಮ್ಮು ಮತ್ತು ಕಾಶ್ಮೀರ ಭೂ ಸಂರಕ್ಷಣಾ ಮತ್ತು ನಿರ್ವಹಣಾ ಪ್ರಾಧಿಕಾರಕ್ಕೆ (ಎಲ್‌ಸಿಎಂಎ) ಜಮ್ಮು - ಕಾಶ್ಮೀರ ಮತ್ತು ಲಡಾಖ್‌ನ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ತೇಲುವ ಮಾರುಕಟ್ಟೆಯಲ್ಲಿ ಟೀ ಮಾರಾಟ ಮಾಡುವ ಜಬರ್ವಾನ್‌ ಟೀ ಸ್ಟಾಲ್‌ ಪರವಾಗಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ಕೋಟೀಶ್ವರ್ ಸಿಂಗ್‌ ಮತ್ತು ನ್ಯಾಯಮೂರ್ತಿ ವಾಸೀಂ ಸಾದಿಕ್‌ ನರ್ಗಾಲ್‌ ವಿಚಾರಣೆ ನಡೆಸಿದರು.

ಎಲ್‌ಸಿಎಂಎ ಅಧಿಕಾರಿಗಳು ಪದೇಪದೇ ಭೇಟಿ ನೀಡುವ ಮೂಲಕ ಟೀ ಮಾರಾಟಗಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಆ ಮೂಲಕ ಸರಾಗವಾಗಿ ಉದ್ಯಮ ನಡೆಸಲು ಕಿರುಕುಳ ನೀಡುತ್ತಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ. ಅಲ್ಲದೇ, ಉದ್ಯಮ ನಡೆಸಲು ತಮ್ಮ ಬಳಿ ಸೂಕ್ತ ಪರವಾನಗಿ ಇದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಮೇ 29ರ ಆದೇಶದಲ್ಲಿ ನ್ಯಾಯಾಲಯವು ಸೂಕ್ತ ಪರವಾನಗಿ ಹೊಂದಿರುವವರಿಗೆ ಎಲ್‌ಸಿಎಂಎ ಅನಗತ್ಯ ಕಿರುಕುಳ ನೀಡಬಾರದು ಎಂದು ಆದೇಶಿಸಿದೆ.

ದಾಲ್‌ ಲೇಕ್‌ನಲ್ಲಿ ವಹಿವಾಟು ನಡೆಸುವವರು ಸೂಕ್ತ ಪರವಾನಗಿ ಹೊಂದಿದ್ದಾರೆಯೇ ಎಂದು ತಿಳಿಯಲು ದಾಖಲೆಗಳ ಅಸಲಿಯತ್ತನ್ನು ಪರಿಶೀಲಿಸಬಹುದು. ಪರವಾನಗಿ ಇಲ್ಲದೇ ಉದ್ಯಮ ನಡೆಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.

Kannada Bar & Bench
kannada.barandbench.com