ಲಸಿಕಾ ವಿರೋಧಿಗಳ ಮುಕ್ತ ಸಂಚಾರ ಮತ್ತು ವಾಕ್‌ ಸ್ವಾತಂತ್ರ್ಯಸಮಾಜಕ್ಕೆ ಅಪಾಯಕಾರಿ: ಜಮ್ಮ ಮತ್ತು ಕಾಶ್ಮೀರ ನ್ಯಾಯಾಲಯ

ಲಸಿಕಾ ಅಭಿಯಾನಕ್ಕೆ ಅಡ್ಡಿಪಡಿಸುವವರು ಹಾಗೂ ಗಾಳಿ ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎನ್ನುವ ಸಂದೇಶವು ಸಮಾಜಕ್ಕೆ ತಲುಪಬೇಕು ಎಂದು ನ್ಯಾಯಾಲಯ ಹೇಳಿತು.
Covid-19 vaccine
Covid-19 vaccine

ಕೋವಿಡ್‌ ವಿರುದ್ಧದ ಲಸಿಕಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಹಾಗೂ ತಪ್ಪು ಮಾಹಿತಿಯ ಪಸರಿಸಿದ ಅರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ಜಮ್ಮು ಮತ್ತು ಕಾಶ್ಮೀರ ನ್ಯಾಯಾಲಯವು ನಿರಾಕರಿಸಿದೆ. ಅಶ್ಮುಜಿ ಸ್ಥಳದಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ಕೋವಿಡ್‌ ಲಸಿಕಾ ಕಾರ್ಯಕ್ರಮಕ್ಕೆ ಆರೋಪಿಯಿಂದ ಅಡ್ಡಿಯಾಗಿತ್ತು.

ಪ್ರಕರಣದ ವಿಚಾರಣೆ ವೇಳೆ ಪ್ರಧಾನ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ತಾಹಿರ್‌ ಖುರ್ಷಿದ್ ರೈನಾ ಅವರು, ಸರ್ಕಾರವು ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸಿ ಮಾರಣಾಂತಿಕ ವೈರಸ್‌ ವಿರುದ್ಧ ಜನತೆಗೆ ರಕ್ಷಣೆ ನೀಡಲು ಲಸಿಕಾ ಅಭಿಯಾನ ಕೈಗೊಂಡಿದ್ದರೆ ಅರ್ಜಿದಾರರ ತರಹದ ಗಾಳಿ ಸುದ್ದಿ ಹಬ್ಬಿಸುವವರು ಸರ್ಕಾರದ ಪ್ರಯತ್ನಗಳಿಗೆ ತೊಡರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

“ಲಸಿಕಾ ಕಾರ್ಯಕ್ರಮದ ವೇಳೆ ಆರೋಗ್ಯ ಕಾರ್ಯಕರ್ತರು ಅನೇಕ ಸ್ಥಳಗಳಲ್ಲಿ ಜನತೆಯಿಂದ ಕಠಿಣ ಪ್ರತಿರೋಧ ಎದುರಿಸುತ್ತಿದ್ದಾರೆ, ಕೆಲವೆಡೆ ಅವರ ಮೇಲೆ ಹಲ್ಲೆ ಕೂಡ ಮಾಡಲಾಗಿರುವುದು ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿದೆ. ಇದೆಲ್ಲವೂ ಅರ್ಜಿದಾರರ ತರಹದವರು ಮಿಥ್ಯೆ, ಗುಲ್ಲು, ಗಾಳಿ ಸುದ್ದಿಗಳನ್ನು ಹಬ್ಬಿಸುವುದರಿಂದ ಉಂಟಾಗಿದೆ,” ಎಂದು ನ್ಯಾಯಾಲಯ ಹೇಳಿತು.

ಮುಂದುವರೆದು ನ್ಯಾಯಾಲಯವು, “ಲಸಿಕಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಗಾಳಿಸುದ್ದಿಕೋರರ ಕಾನೂನುಬಾಹಿರ ಪ್ರಯತ್ನಗಳನ್ನು ಸಹಿಸುವುದಿಲ್ಲ ಎನ್ನುವ ಸಂದೇಶವು ಸಮಾಜದ ಉದ್ದಗಲಕ್ಕೂ ತಲುಪಬೇಕಿದೆ. ಅಂತಹವರ ವಿರುದ್ಧ ಕಠಿಣ ಕಾನೂನುಕ್ರಮ ಜರುಗಿಸಲಾಗುವುದು,” ಎಂದಿತು. ಆ ಮೂಲಕ ಅರ್ಜಿದಾರರಿಗೆ ಈ ಹಿಂದೆ ನೀಡಲಾಗಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ವಿಸ್ತರಿಸಲು ನಿರಾಕರಿಸಿತು.

ಪ್ರಕರಣದ ಹಿನ್ನೆಲೆ:

ಅಶ್ಮುಜಿ ಪ್ರದೇಶದಲ್ಲಿ ಕೋವಿಡ್‌ ಲಸಿಕಾ ಕಾರ್ಯಕ್ರಮವನ್ನು ಸಹಾಯಕ ಕಂದಾಯ ಆಯುಕ್ತರು ವೈದ್ಯಕೀಯ ತಂಡದೊಂದಿಗೆ ನಡೆಸಿದ್ದರು. ಲಸಿಕಾ ಸ್ಥಳವೊಂದಕ್ಕೆ ಇವರ ತಂಡ ಲಸಿಕೆ ನೀಡಲು ಆಗಮಿಸಿದಾಗ ಆರೋಪಿಯು ಲಸಿಕಾ ಅಭಿಯಾನದ ವಿರುದ್ಧ ಗಂಭೀರ ಆಪಾದನೆಗಳನ್ನು ಮಾಡಿದ್ದರು. ಅಲ್ಲದೆ, ದೊಡ್ಡಮಟ್ಟದಲ್ಲಿ ಜನರನ್ನು ಸೇರಿಸುವ ಮೂಲಕ ಲಸಿಕಾ ಅಭಿಯಾನವನ್ನು ಉದ್ದೇಶಿತ ಕಾರ್ಯದಿಂದ ಅನಪೇಕ್ಷಿತ ವಿಷಯಗಳೆಡೆಗೆ ವಿಮುಖವಾಗಿಸಿದ್ದರು. ಆ ಮೂಲಕ ಸಾಮಾನ್ಯ ನಾಗರಿಕರನ್ನು ಲಸಿಕೆ ಪಡೆಯದಂತೆ ನಿರ್ಬಂಧಿಸುವ ಉದ್ದೇಶ ಅವರದಾಗಿತ್ತು.

ಈ ಹಿನ್ನೆಲೆಯಲ್ಲಿ ಕುಲ್ಗಾಮ್‌ನ ತಹಸೀಲ್ದಾರ್ ಅವರು ದೂರು ಸಲ್ಲಿಸಿದ್ದರಿಂದ ಆರೋಪಿಯ ವಿರುದ್ಧ ಕುಲ್ಗಾಮ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಇದರಿಂದ ಅರೋಪಿಯು ನ್ಯಾಯಾಲಯದ ಮೊರೆ ಹೋಗಿ ಒಮ್ಮೆ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಳ್ಳಲು ಯಶಸ್ವಿಯಾಗಿದ್ದರು.

ಮುಂದೆ ಪ್ರಕರಣ ಮತ್ತೆ ವಿಚಾರಣೆಗೆ ಬಂದ ಸಂದರ್ಭದಲ್ಲಿ ನ್ಯಾಯಾಲಯವು ಆರೋಪಿಯು ತನ್ನದೇ ಮನಸ್ಥಿತಿಯ ವ್ಯಕ್ತಿಗಳೊಂದಿಗೆ ಕೂಡಿ ಲಸಿಕಾ ಅಭಿಯಾನದ ವಿರುದ್ಧ ಸುಳ್ಳು ಮಾಹಿತಿ, ಗಾಳಿಸುದ್ದಿಗಳನ್ನು ಹಬ್ಬಿಸುವ ಮೂಲಕ ಸಾಮಾನ್ಯ ಜನರ ಮನದಲ್ಲಿ ಭೀತಿ, ಗೊಂದಲವನ್ನು ಉಂಟು ಮಾಡಿರುವುದನ್ನು ಗಮನಿಸಿತು.

ಅರ್ಜಿದಾರರ ಇಂತಹ ದುಷ್ಕೃತ್ಯವು ಸಂಪೂರ್ಣ ಕಾನುನುಬಾಹಿರ ಮಾತ್ರವೇ ಅಲ್ಲದೆ, ಜನರ ಜೀವದೊಂದಿಗೆ ಆಡುವ ಚೆಲ್ಲಾಟವಾಗಿದೆ. ಒಂದೊಮ್ಮೆ ಜನರು ಇದರಿಂದಾಗಿ ಪ್ರಾಮಾಣಿಕವಾಗಿ ಲಸಿಕೆ ತೆಗೆದುಕೊಳ್ಳದೆ ಹೋದರೆ ಮಾರಣಾಂತಿಕ ವೈರಸ್‌ಗೆ ಬಲಿಯಾಗುವ ಸಾಧ್ಯತೆಯೂ ಇರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಅಂತಿಮವಾಗಿ ನ್ಯಾಯಾಲಯವು ಇಂತಹ ದ್ವೇಷಿಗಳು ನಿರೀಕ್ಷಣಾ ಜಾಮೀನಿನಂತಹ ಯಾವುದೇ ವಿನಾಯತಿಗೆ ಅರ್ಹರಲ್ಲ. ಅಷ್ಟೇ ಅಲ್ಲ, ಇಂತಹವರ ಮುಕ್ತ ಸಂಚಾರ ಹಾಗೂ ವಾಕ್‌ ಸ್ವಾತಂತ್ರ್ಯವು ಸಮಾಜಕ್ಕೆ ಅಪಾಯಕಾರಿಯಾಗಿದೆ. ಸಮಾಜದ ಒಳಿತಿಗಾಗಿ ಕಾನೂನು ರೀತ್ಯಾ ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಅಭಿಪ್ರಾಯಪಟ್ಟಿತು. ಆರೋಪಿಯ ನಿರೀಕ್ಷಣಾ ಜಾಮೀನು ವಿಸ್ತರಣೆ ಕೋರಿಕೆಯನ್ನು ತಿರಸ್ಕರಿಸಿತು.

Related Stories

No stories found.
Kannada Bar & Bench
kannada.barandbench.com