ರಾಷ್ಟ್ರೀಯ ಭದ್ರತೆ ಪ್ರಕರಣಗಳಲ್ಲಿ 'ಕಾಪಿ- ಪೇಸ್ಟ್' ವಾದ: ಸರ್ಕಾರಕ್ಕೆ ಕಾಶ್ಮೀರ ಹೈಕೋರ್ಟ್ ನ್ಯಾಯಮೂರ್ತಿ ತರಾಟೆ

ನ್ಯಾಯಾಲಯವನ್ನು ಮಾನಸಿಕವಾಗಿ ಸಂಕಷ್ಟಕ್ಕೀಡುಮಾಡಲು ಸಾಮಾನ್ಯವಾಗಿ ಇಂತಹ ತಥಾಕಥಿತ ವಾದ ಮಂಡಿಸಲಾಗುತ್ತದೆ ಎಂದು‌ 2013ರ ಯುಎಪಿಎ ಪ್ರಕರಣದಲ್ಲಿ ಆರೋಪಿಯೊಬ್ಬನಿಗೆ ಜಾಮೀನು ನೀಡುವಾಗ ನ್ಯಾಯಾಧೀಶರು ಹರಿಹಾಯ್ದರು.
Justice Atul Sreedharan and Jammu and Kashmir High Court (Srinagar bench)
Justice Atul Sreedharan and Jammu and Kashmir High Court (Srinagar bench)

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಅಡಿಯ ಪ್ರಕರಣಗಳಲ್ಲಿ ಆರೋಪಿಗಳ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಲು ಸರ್ಕಾರ "ಕಾಪಿ-ಪೇಸ್ಟ್" ವಾದಗಳ ಮೊರೆ ಹೋಗುತ್ತಿರುವುದಕ್ಕೆ ಜಮ್ಮು ಕಾಶ್ಮೀರ ಹೈಕೋರ್ಟ್‌ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಅವರು ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನೇಕ ಯುಎಪಿಎ ಪ್ರಕರಣಗಳಲ್ಲಿ ಆರೋಪಿಯ ವಿರುದ್ಧ ಯಾವುದೇ ನಿರ್ದಿಷ್ಟ ವಿಷಯವನ್ನು ಪ್ರಸ್ತುತಪಡಿಸುವ ಬದಲು ರಾಷ್ಟ್ರೀಯ ಭದ್ರತೆ, ಇಸ್ಲಾಮ್ ಉಗ್ರವಾದ ಮತ್ತು ಪಾಕಿಸ್ತಾನಕ್ಕೆ ನಿಷ್ಠೆಯಂತಹ ವಾದಗಳನ್ನು ಒಟ್ಟಾರೆಯಾಗಿ ಆಶ್ರಯಿಸಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

2013ರ ಯುಎಪಿಎ ಪ್ರಕರಣದಲ್ಲಿ ಆರೋಪಿಯೊಬ್ಬನಿಗೆ ಜಾಮೀನು ನೀಡುವಾಗ ನ್ಯಾಯಮೂರ್ತಿಗಳು, ನ್ಯಾಯಾಲಯವನ್ನು ಮಾನಸಿಕವಾಗಿ ಅತಿಕ್ರಮಿಸಲು ಸಾಮಾನ್ಯವಾಗಿ ಈ ರೀತಿಯ ಸಾಮಾನ್ಯ ವಾದಗಳನ್ನು ಮಾಡಲಾಗುತ್ತದೆ ಎಂದರು.

"ಯುಎಪಿಎ ಅಡಿಯ ಪ್ರಕರಣಗಳಲ್ಲಿ ಮಾಡುವ ಸಾಮಾನ್ಯ ರೀತಿಯ ವಾದಗಳು ಇಲ್ಲಿಯೂ ಪುನರಾವರ್ತನೆಯಾಗಿವೆ. ಅಪರಾಧವು ಘೋರವಾಗಿದೆ, ಮೇಲ್ಮನವಿದಾರರನ್ನು ಜಾಮೀನಿನ ಮೇಲೆ ಬಿಡುವುದು ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿದೆ, ಮೇಲ್ಮನವಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ತನಿಖೆಗೆ ಅಡ್ಡಿಯಾಗುತ್ತಾರೆ. ನ್ಯಾಯಾಂಗ ಪ್ರಕ್ರಿಯೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು, ಅಪರಾಧಗಳನ್ನು ಪುನರಾವರ್ತಿಸಬಹುದು ಮತ್ತು ಅವರ ಬಿಡುಗಡೆಯು ಭಾರತದ ಏಕತೆ ಮತ್ತು ಸಮಗ್ರತೆಗೆ ಪ್ರತಿಕೂಲವಾಗಿದೆ ಎನ್ನುವಂತಹ ವಾದಗಳು ಪ್ರತಿ ಪ್ರಕರಣದಲ್ಲೂ "ಕಾಪಿ-ಪೇಸ್ಟ್" ಆಗಿವೆ" ಎಂದು ನ್ಯಾಯಮೂರ್ತಿ ಶ್ರೀಧರನ್ ಅವರು ಏಪ್ರಿಲ್ 19ರ ಆದೇಶದಲ್ಲಿ ಬರೆದಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿಯೂ, ಸರ್ಕಾರದ ವಾದಗಳು ಮುಖ್ಯ ಗಮನವು " ರಾಷ್ಟ್ರೀಯ ಭದ್ರತೆ, ರಾಷ್ಟ್ರೀಯತೆ, ಪಾಕಿಸ್ತಾನಕ್ಕೆ ನಿಷ್ಠೆ (ಆರೋಪಿಗಳಿಂದ), ತೀವ್ರಗಾಮಿ ಇಸ್ಲಾಮಿಸಂ (ಆರೋಪಿಗಳ ಮೇಲಿನ ಪ್ರಭಾವ), ಜಮ್ಮುವಿನ ಪ್ರತ್ಯೇಕತೆಯ ಅಂಶಗಳನ್ನು ಒಳಗೊಂಡಿದೆ ಎಂದು ನ್ಯಾಯಮೂರ್ತಿ ಶ್ರೀಧರನ್ ಗಮನಿಸಿದರು.

ಯುಎಪಿಎ ಪ್ರಕರಣಗಳಲ್ಲಿ ವ್ಯವಹರಿಸುವಾಗ ಇವುಗಳು ಸಂಬಂಧಿತ ಅಂಶಗಳಾಗಿವೆ ಎಂದು ನ್ಯಾಯಮೂರ್ತಿಗಳು ಒಪ್ಪಿಕೊಂಡರು. ಆದಾಗ್ಯೂ, ಅಂತಹ ಸಾಮಾನ್ಯ ಆರೋಪಗಳು ಯಾವುದೇ ನಿರ್ದಿಷ್ಟ ಸಾಕ್ಷ್ಯಾಧಾರಗಳಿಲ್ಲದ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಲು ಏಕೈಕ ಆಧಾರವಾಗುವುದಿಲ್ಲ ಎಂದು ಅವರು ಹೇಳಿದರು.

"ಆಂತರಿಕ ಭದ್ರತೆಯ ಬಗ್ಗೆ ನಿಯಮಿತವಾಗಿ ಗಂಭೀರವಾದ ವಾದ ಮಂಡನೆ ಮಾಡುವುದರಿಂದ ಪ್ರಭಾವಿತರಾಗುವುದು ಮತ್ತು ಮೇಲುನೋಟಕ್ಕೆ ಆರೋಪಿಯ ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎನ್ನುವುದಕ್ಕೆ ಪೂರಕವಾದ ಯಾವುದೇ ವಿಷಯವನ್ನು ಬಹಿರಂಗಪಡಿಸಲು ಪ್ರಭುತ್ವವು ಸಂಪೂರ್ಣವಾಗಿ ವಿಫಲವಾದಾಗಲೂ ಸಹ ಜಾಮೀನು ಅರ್ಜಿಯನ್ನು ತಿರಸ್ಕರಿಸುವುದು ನ್ಯಾಯದಾನದ ಗರ್ಭಪಾತಕ್ಕೆ ಖಚಿತವಾಗಿ ಕಾರಣವಾಗುವ ಅಂಶವಾಗಿದೆ, ”ಎಂದು ನ್ಯಾಯಮೂರ್ತಿ ಶ್ರೀಧರನ್ ಹೇಳಿದರು.

ಹೀಗಾಗಿ, ಯಾವುದೇ ಪುರಾವೆಗಳಿಲ್ಲದೆ ಆಂತರಿಕ ಭದ್ರತೆಯ ಅಪಾಯಗಳ ಬಗ್ಗೆ ರಾಜ್ಯದ ಆತಂಕಗಳ ಮೇಲೆ ನ್ಯಾಯಾಲಯವು ಅವಲಂಬಿತವಾಗಿದ್ದರೆ ಅದು ಕಠಿಣವಾದ ಕಾನೂನಿನ ಅಜಾಗರೂಕ ಹೇರಿಕೆಗೆ ಕಾರಣವಾಗುತ್ತದೆ ಎಂದು ನ್ಯಾಯಮೂರ್ತಿ ಹೇಳಿದರು.

ಈ ಮೇಲಿನ ಅವಲೋಕನಗಳು ಯುಎಪಿಎ ಆರೋಪಿಗಳಿಗೆ ಜಾಮೀನು ನೀಡುವ ತೀರ್ಪಿನಲ್ಲಿ ನ್ಯಾಯಮೂರ್ತಿ ಶ್ರೀಧರನ್ ಅವರು ಬರೆದ ಎರಡು ಪ್ಯಾರಾಗಳ (ಪ್ಯಾರಾಗಳು 7 ಮತ್ತು 8) ಭಾಗವಾಗಿವೆ.

ಮೇಲಿನ ಪ್ರಕರಣದಲ್ಲಿ ಸಹಮತದ ತೀರ್ಪನ್ನು ನೀಡಿದ ಪೀಠದ ಭಾಗವಾದ ನ್ಯಾಯಮೂರ್ತಿ ಮೊಹಮ್ಮದ್ ಯೂಸುಫ್ ವಾನಿ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎನ್ನುವ ಆದೇಶಕ್ಕೆ ಸಮ್ಮತಿಯನ್ನು ವ್ಯಕ್ತಪಡಿಸಿದರು. ಆದಾಗ್ಯೂ, ತೀರ್ಪಿನ 7 ಮತ್ತು 8 ನೇ ಪ್ಯಾರಾಗಳಲ್ಲಿ ನ್ಯಾಯಮೂರ್ತಿ ಶ್ರೀಧರನ್ ಅವರ ಹೇಳಿಕೆಗಳನ್ನು ತಾನು ಒಪ್ಪುವುದಿಲ್ಲ ಎಂದು ಪ್ರತ್ಯೇಕವಾಗಿ ಉಲ್ಲೇಖಿಸಿದರು.

Kannada Bar & Bench
kannada.barandbench.com