ಸೈನಿ ಸಮುದಾಯವು ಸಾಮಾಜಿಕವಾಗಿ ದುರ್ಬಲ ಮತ್ತು ಸೌಲಭ್ಯ ವಂಚಿತ ವರ್ಗವೇ ಎನ್ನುವ ಕುರಿತು ಸರ್ಕಾರ ಅಂತಿಮವಾಗಿ ನಿರ್ಧರಿಸುವವರೆಗೆ ಜಾತಿ ಪ್ರಮಾಣಪತ್ರ ನೀಡುವುದನ್ನು ನಿಲ್ಲಿಸುವಂತೆ ಸರ್ಕಾರಿ ಅಧಿಕಾರಿಗಳಿಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಈಚೆಗೆ ನಿರ್ದೇಶನ ನೀಡಿದೆ.
ಈಗಾಗಲೇ ನೀಡಲಾದ ಪ್ರಮಾಣಪತ್ರಗಳನ್ನು ಸದ್ಯಕ್ಕೆ ಜಾರಿಗೆ ತರಬಾರದು ಎಂದು ನ್ಯಾ. ರಜನೇಶ್ ಓಸ್ವಾಲ್ ಅವರು ಆದೇಶಿಸಿದ್ದಾರೆ.
ಸೈನಿ ಸಮುದಾಯ ದುರ್ಬಲ ಮತ್ತು ಸೌಲಭ್ಯವಂಚಿತ (ಸಾಮಾಜಿಕ ಜಾತಿ) ಎಂದು ಅಕ್ಟೋಬರ್ 19, 2022ರಂದು ಘೋಷಿಸಿತ್ತು. ಈ ಸ್ಥಾನಮಾನ ಪ್ರಶ್ನಿಸಿ ಸೈನಿ ಸಮುದಾಯದ ಸದಸ್ಯರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ನಿರ್ದೇಶನ ನೀಡಿದೆ.
ಸರ್ಕಾರದ ಆದೇಶ ಜಮ್ಮು ಕಾಶ್ಮೀರ ಮೀಸಲಾತಿ ನಿಯಮಾವಳಿ- 2005ಕ್ಕೆ ತಿದ್ದುಪಡಿ ಮಾಡಿತ್ತು.
ಮೇಲ್ಜಾತಿ ಸಮುದಾಯವಾಗಿರುವ ಮತ್ತು ಮೀಸಲಾತಿಯ ಪ್ರಯೋಜನಗಳನ್ನು ಪಡೆಯಲು ಆಸಕ್ತಿ ಹೊಂದಿರದ ಸೈನಿ ಸಮುದಾಯದ ಇಚ್ಛೆಗೆ ವಿರುದ್ಧವಾಗಿ ಸರ್ಕಾರ ಈ ಆದೇಶ ಹೊರಡಿಸಿದೆ. ಮೀಸಲಾತಿ ಒದಗಿಸುವುದನ್ನು ವಿರೋಧಿಸಿ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದೆ. ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಸೈನಿ ಸಮುದಾಯವನ್ನು ದುರ್ಬಲ ವರ್ಗಕ್ಕೆ ಸೇರಿಸುವ ಆದೇಶವನ್ನು ತಡೆಹಿಡಿಯಲಾಗಿದ್ದು ಅದು ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪ್ರತಿವಾದಿಗಳ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಅದರಂತೆ ಅರ್ಜಿ ವಿಲೇವಾರಿ ಮಾಡಿದ ಹೈಕೋರ್ಟ್, ಸೈನಿ ಸಮುದಾಯದ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಪ್ರತಿಕೂಲ ನಿರ್ಧಾರ ತೆಗೆದುಕೊಂಡರೆ ಮತ್ತೆ ನ್ಯಾಯಾಲಯ ಸಂಪರ್ಕಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]