ಎರಡು ಮದರಸಾಗಳಿಗೆ ಬೀಗಮುದ್ರೆ ಹಾಕುವಂತೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್‌ನ ಹೆಚ್ಚುವರಿ ವಿಭಾಗೀಯ ಆಯುಕ್ತರು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿರುವ ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಸೂಕ್ತ ವಿಚಾರಣೆ ನಡೆಸದೆ ಅಥವಾ ಆರೋಪಗಳ ಬಗ್ಗೆ ಸಾಕ್ಷ್ಯಾಧಾರ ಇಲ್ಲದೆ ಆದೇಶ ನೀಡಿರುವುದಾಗಿ ತಿಳಿಸಿದೆ [ರಾಜ್ ಅಲಿ ಮತ್ತಿತರರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣ].
ಮದರಸಾದ ಆಡಳಿತ ವರ್ಗಕ್ಕೆ ತನ್ನ ನಿಲುವು ವಿವರಿಸಲು ಯಾವುದೇ ಅವಕಾಶ ನೀಡದೆ ಮತ್ತು ಸಹಜ ನ್ಯಾಯದ ತತ್ವ ಉಲ್ಲಂಘಿಸಿ ಮದರಸಾಗಳಿಗೆ ಬೀಗಮುದ್ರೆ ಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಮೂರ್ತಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಬಠಿಂಡಿಯ ಮೌಲಾನಾ ಅಲಿ ಮಿಯಾನ್ ಶಿಕ್ಷಣ ಟ್ರಸ್ಟ್ ನಡೆಸುತ್ತಿರುವ ಆಡಳಿತವು ರಾಷ್ಟ್ರ ವಿರೋಧಿ ಮತ್ತು ಸಮಾಜ ವಿರೋಧಿ ಎಂದು ಪರಿಗಣಿಸಲಾದ ಸಂಸ್ಥೆಗಳಿಗೆ ಬೀಗಮುದ್ರೆ ಹಾಕುತ್ತಿರುವುದಾಗಿ ವಿಭಾಗೀಯ ಆಯುಕ್ತರ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಬೀಗಮುದ್ರೆ ಹಾಕಲಾದ ಮದರಸಾಗಳಿಗೂ ಬೀಗಮುದ್ರೆ ಆದೇಶ ನೀಡಿದ ಮೌಲಾನಾ ಅಲಿ ಮಿಯಾನ್ ಶಿಕ್ಷಣ ಟ್ರಸ್ಟ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ನ್ಯಾಯಾಲಯಕ್ಕೆ ವಿವರಿಸಲಾಯಿತು.
ಮೌಲಾನಾ ಅಲಿ ಮಿಯಾನ್ ಶಿಕ್ಷಣ ಟ್ರಸ್ಟ್‌ಗೆ ಮದರಸಾ ಸೇರಿವೆಯೇ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ಪಡೆಯದೇ ಅವುಗಳನ್ನು ಮುಚ್ಚಲು ಅಥವಾ ಸ್ವಾಧೀನಪಡಿಸಿಕೊಳ್ಳಲು ವಿಭಾಗೀಯ ಆಯುಕ್ತರು ನೀಡಿರುವ ಆದೇಶ ಸೂಕ್ತವಾದುದಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಮದರಸಾಗಳಿಗೆ ಸಂಬಂಧಿಸಿದ ಬೀಗಮುದ್ರೆ ಆದೇಶವನ್ನು ಅದು ರದ್ದುಗೊಳಿಸಿತು.
ಆಯುಕ್ತರ ಆದೇಶ ಬಠಿಂಡಿಯ ಮೌಲಾನಾ ಅಲಿ ಮಿಯಾನ್ ಶಿಕ್ಷಣ ಟ್ರಸ್ಟ್‌ಗೆ ಮಾತ್ರ ಅನ್ವಯವಾಗಲಿದ್ದು ಜಮ್ಮು, ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಕಾನೂನುಬದ್ಧವಾಗಿ ನಡೆಯುತ್ತಿರುವ ಎಲ್ಲಾ ಮದರಸಾಗಳಿಗೆ ಸಾರ್ವತ್ರಿಕವಾಗಿ ಅನ್ವಯವಾಗುವುದಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.
ಇದೇ ವೇಳೆ ನ್ಯಾಯಾಲಯ ʼಮದರಸಾಗಳು ಕಾನೂನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವುದು ವಿಚಾರಣೆ ಅಥವಾ ತನಿಖೆಯ ವೇಳೆ ಗಮನಕ್ಕೆ ಬಂದರೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸ್ವತಂತ್ರರುʼ ಎಂದು ಸ್ಪಷ್ಟಪಡಿಸಿದೆ.
"ಆದರೆ ಅರ್ಜಿದಾರರ ಗಮನಕ್ಕೆ ತಾರದೆ ಮತ್ತು ವಿಚಾರಣೆಗೆ ಅವಕಾಶ ಒದಗಿಸದೆ ಅವರ ಹಿತಾಸಕ್ತಿಗೆ ಪ್ರತಿಕೂಲವಾದ ಯಾವುದೇ ಆದೇಶ ಹೊರಡಿಸುವಂತಿಲ್ಲ” ಎಂದು ನ್ಯಾಯಾಲಯ ಪುನರುಚ್ಚರಿಸಿದೆ.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]