ಹಿರಿಯ ವಕೀಲ ಎನ್ ಎ ರೋಂಗಾ ಅವರನ್ನು ಬಂಧಿಸಿದ ಕಾಶ್ಮೀರ ಪೊಲೀಸರು

ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿ ರೋಂಗಾ ಅವರನ್ನು ಬಂಧಿಸಲಾಗಿದೆ ಎಂದು ಅವರ ಕುಟುಂಬ ಹೇಳಿದೆ.
Senior Advocate N A Ronga
Senior Advocate N A Ronga
Published on

ಹಿರಿಯ ವಕೀಲ ನಜೀರ್ ಅಹ್ಮದ್ ರೋಂಗಾ ಅವರನ್ನು ಶ್ರೀನಗರದ ಅವರ ಮನೆಯಲ್ಲಿ ಗುರುವಾರ ಮಧ್ಯರಾತ್ರಿ ವೇಳೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

ತಂದೆಯವರನ್ನು ಬಂಧಿಸಲು ಪೊಲೀಸರ ತಂಡ ಗುರುವಾರ ರಾತ್ರಿ ಸುಮಾರು 1:10ಕ್ಕೆ ತಮ್ಮ ಮನಗೆ ಬಂದಿತು. ಬಂಧನಕ್ಕೆ ಕಾರಣ ಏನೆಂದು ಕೇಳಿದಾಗ ಉನ್ನತಾಧಿಕಾರಿಗಳಿಂದ ಆದೇಶ ಇದೆ ಎಂದು ಪೊಲೀಸರು ತಿಳಿಸಿದರು ಎಂಬುದಾಗಿ ರೋಂಗಾ ಅವರ ಪುತ್ರ ಉಮೈರ್‌ ರೋಂಗಾ ಅವರು ಬಾರ್‌ ಅಂಡ್‌ ಬೆಂಚ್‌ಗೆ ತಿಳಿಸಿದ್ದಾರೆ.  ಬಂಧನ ವಿಚಾರವನ್ನು ಉಮೈರ್‌ ಅವರು ತಮ್ಮ ಟ್ವಿಟರ್‌ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

ಪೊಲೀಸ್ ತಂಡದ ಆಗಮನ ಹಾಗೂ ರೋಂಗಾ ಅವರ ಬಂಧನ ಕಾರ್ಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

 ರೋಂಗಾ ಅವರನ್ನು ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿ ಬಂಧಿಸಲಾಗಿದೆ ಎಂದು ಕುಟುಂಬ ಹೇಳಿಕೊಂಡಿದೆ. ಆದರೆ ಪೊಲೀಸರು ಬಂಧನ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಕೆಲ ವಿಶ್ವಾಸಾರ್ಹ ಮೂಲಗಳ ಪ್ರಕಾರ, ರೊಂಗಾ ಅವರನ್ನು ಜಮ್ಮುವಿಗೆ ಕರೆದೊಯ್ದು ಅಲ್ಲಿನ ಕೋಟ್‌ ಭಲ್ವಾಲ್‌ ಜೈಲಿನಲ್ಲಿರಿಸಲಾಗಿದೆ.

ರೋಂಗಾ ಅವರು ಶ್ರೀನಗರದ ಹೈಕೋರ್ಟ್‌ ವಕೀಲರ ಸಂಘದ ಅಧ್ಯಕ್ಷರಾಗಿದ್ದಾರೆ. ಅವರು ಈ ಹಿಂದೆಯೂ ಹಲವು ಬಾರಿ ಸಂಘದ ಅಧ್ಯಕ್ಷರಾಗಿದ್ದರು. 2023ರಲ್ಲಿ, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಒಂದು ದಿನದ ಮೊದಲು ಪ್ರತಿಭಟನೆ ನಡೆಯಬಹುದು ಎಂಬ ಮುಂಜಾಗ್ರತಾ ಕ್ರಮವಾಗಿ ಜಮ್ಮು ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿಯಲ್ಲಿ ಬಂಧನಕ್ಕೊಳಗಾದ ಅನೇಕ ನಾಯಕರುಗಳಲ್ಲಿ ರೋಂಗಾ ಕೂಡ ಒಬ್ಬರು.

ವಕೀಲ ಬಾಬರ್ ಖಾದ್ರಿ ಹತ್ಯೆಗೆ ಸಂಬಂಧಿಸಿದಂತೆ ಸಂಘದ ಮಾಜಿ ಅಧ್ಯಕ್ಷ ಮತ್ತು ಹಿರಿಯ ವಕೀಲ ಮಿಯಾನ್‌ ಖಯೂಮ್‌ ಅವರನ್ನು ಕಳೆದು ತಿಂಗಳು ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Kannada Bar & Bench
kannada.barandbench.com