aಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ ಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ರಚನೆಯ ಸಿಂಧುತ್ವ ಪ್ರಶ್ನಿಸಿ ಹಾಗೂ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಜಾರಕಿಹೊಳಿ ದಾಖಲಿಸಿರುವ ಬ್ಲ್ಯಾಕ್‌ಮೇಲ್ ಪ್ರಕರಣದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸಂತ್ರಸ್ತೆ ಹಾಗೂ ಮತ್ತಿಬ್ಬರು ಆರೋಪಿಗಳು ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ಸೆಪ್ಟೆಂಬರ್ 26ಕ್ಕೆ ಮುಂದೂಡಿದೆ.
ಸಂತ್ರಸ್ತ ಯುವತಿ ಮತ್ತಿಬ್ಬರು ಆರೋಪಿಗಳು ಎನ್ನಲಾದ ಎಸ್ ಶ್ರವಣ್ ಕುಮಾರ್ ಹಾಗೂ ಬಿ ಎಂ ನರೇಶ್ ಸಲ್ಲಿಸಿರುವ ಮೂರು ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಸಂತ್ರಸ್ತೆಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು “ಜುಲೈ 25ರಂದು ಅರ್ಜಿ ವಿಚಾರಣೆ ನಡೆಸಿದ್ದ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಭವಿಸುವ ಕಾನೂನು ವಿಚಾರಗಳ ಕುರಿತು ನ್ಯಾಯಾಲಯಕ್ಕೆ ಸಲಹೆ ಹಾಗೂ ನೆರವು ನೀಡಲು ಹಿರಿಯ ವಕೀಲ ಸಂದೇಶ್ ಚೌಟ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಕ ಮಾಡಿತ್ತು. ಅಲ್ಲದೆ, ಅರ್ಜಿದಾರರು ಹಾಗೂ ಪ್ರತಿವಾದಿಗಳ ಪರ ವಕೀಲರು ಪ್ರಕರಣದ ಬೆಳವಣಿಗೆಗಳ ಕುರಿತು ದಿನಾಂಕ ಸಹಿತ ಸಂಕ್ಷಿಪ್ತ ಸಾರಾಂಶ (ಸಿನಾಪ್ಸಿಸ್) ಹಾಗೂ ಮಂಡಿಸಲಿರುವ ಕಾನೂನಾತ್ಮಕ ಅಂಶಗಳ ಲಿಖಿತ ವಾದವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅದನ್ನು ಎರಡೂ ಪಕ್ಷದವರು ಪರಸ್ಪರ ಹಂಚಿಕೊಳ್ಳಬೇಕು ಎಂದು ನಿರ್ದೇಶಿಸಿತ್ತು” ಎಂದು ಪೀಠದ ಗಮನಕ್ಕೆ ತಂದರು.
ಮುಂದುವರಿದು, “ಪ್ರತಿವಾದಿಗಳು ಈವರೆಗೂ ಲಿಖಿತ ವಾದವನ್ನು ತಲುಪಿಸಿಲ್ಲ. ಅಲ್ಲದೇ, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಸಂತ್ರಸ್ತೆ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಎಸ್‌ಐಟಿಯು ಸಲ್ಲಿಸಿರುವ ಅಂತಿಮ ವರದಿಯು ಕನ್ನಡದಲ್ಲಿದ್ದು, ಅದನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ನೀಡಬೇಕು. ಇಲ್ಲವಾದಲ್ಲಿ ಅಧಿಕೃತತೆ ಇರುವುದಿಲ್ಲ. ಅಲ್ಲದೇ, ಅಮಿಕಸ್ ಕ್ಯೂರಿ ಸಂದೇಶ್ ಚೌಟ ಅವರು ಸಿದ್ಧಪಡಿಸಿರುವ ವರದಿ ಹಂಚಿಕೊಳ್ಳಬೇಕು” ಎಂದರು.
ರಮೇಶ್ ಜಾರಕಿಹೊಳಿ ಅವರನ್ನು ಪ್ರತಿನಿಧಿಸಿದ್ದ ವಕೀಲ ಸಂದೀಪ್ ಪಾಟೀಲ್ ಅವರು “ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ತಮ್ಮನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾತ್ರ ಲಿಖಿತ ವಾದ ಸಲ್ಲಿಸಲಾಗಿದೆ. ಎಸ್‌ಐಟಿ ಸಿಂಧುತ್ವ ಪ್ರತಿನಿಧಿಸಿರುವ ಪ್ರಕರಣದಲ್ಲಿ ಜಾರಕಿಹೊಳಿ ಅವರು ಪ್ರತಿವಾದಿಯಲ್ಲ. ಹೀಗಾಗಿ, ಆ ಪ್ರಕರಣದಲ್ಲಿ ಲಿಖಿತ ವಾದ ಸಲ್ಲಿಸಿಲ್ಲ” ಎಂದರು.
ಎಸ್‌ಐಟಿ ಪರವಾಗಿ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್ ಅವರು “ಲಿಖಿತ ವಾದ ಸಿದ್ದವಾಗಿದ್ದು, ಸಲ್ಲಿಸಲು ಕಾಲಾವಕಾಶ ನೀಡಬೇಕು. ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂತಿಮ ವರದಿಯನ್ನು ಅರ್ಜಿದಾರರು ಭಾಷಾಂತರಿಸಿಕೊಳ್ಳಬಹುದು” ಎಂದರು.
ನರೇಶ್ ಮತ್ತು ಶ್ರವಣ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎ ಎಸ್ ಪೊನ್ನಣ್ಣ ಅವರು "ಬ್ಲ್ಯಾಕ್‌ಮೇಲ್ ಪ್ರಕರಣ ರದ್ದು ಕೋರಿರುವುದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಿಲ್ಲ" ಎಂದು ಪೀಠದ ಗಮನಸೆಳೆದರು.
ಇದನ್ನು ಪರಿಗಣಿಸಿದ ಪೀಠವು ಅರ್ಜಿದಾರರು ಮತ್ತು ಪ್ರತಿವಾದಿಗಳು ಪ್ರಕರಣದ ಲಿಖಿತ ವಾದವನ್ನು ಪರಸ್ಪರ ಹಂಚಿಕೊಳ್ಳಬೇಕು. ಅಲ್ಲದೇ, ನ್ಯಾಯಾಲಯಕ್ಕೂ ಒಂದು ವರದಿ ಸಲ್ಲಿಸಬೇಕು. ಇದನ್ನು ಆಧರಿಸಿ ಅಮಿಕಸ್ ಕ್ಯೂರಿ ಸಂದೇಶ್ ಚೌಟ ಅವರು ಪ್ರತ್ಯೇಕವಾಗಿ ವರದಿ ಸಿದ್ಧಪಡಿಸಿ, ನ್ಯಾಯಾಲಯಕ್ಕೆ ಸಲಹೆ ಮಾಡಬೇಕು. ನರೇಶ್ ಮತ್ತು ಶ್ರವಣ್ ಪ್ರಕರಣದಲ್ಲಿ ಆಕ್ಷೇಪಣೆಗಳು ಇದ್ದರೆ ಸಲ್ಲಿಸಬಹುದು ಎಂದು ಪ್ರತಿವಾದಿಗಳಿಗೆ ನಿರ್ದೇಶಿಸಿತು. ಅಂತಿಮವಾಗಿ ವಿಚಾರಣೆಯನ್ನು ಸೆಪ್ಟೆಂಬರ್ 26ಕ್ಕೆ ಮುಂದೂಡಿತು.