ಜಯಲಲಿತಾ ಸಾವು: ತನಿಖಾ ವರದಿ ಆಧರಿಸಿ ಕೈಗೊಂಡ ಕ್ರಮಗಳನ್ನು ವಾರದೊಳಗೆ ಬಹಿರಂಗಪಡಿಸುವಂತೆ ಮದ್ರಾಸ್ ಹೈಕೋರ್ಟ್ ಗಡುವು

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದ ಸನ್ನಿವೇಶಗಳ ಬಗ್ಗೆ ಸಿಬಿಐ ತನಿಖೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಜಯಲಲಿತಾ ಸಾವು: ತನಿಖಾ ವರದಿ ಆಧರಿಸಿ ಕೈಗೊಂಡ ಕ್ರಮಗಳನ್ನು ವಾರದೊಳಗೆ ಬಹಿರಂಗಪಡಿಸುವಂತೆ ಮದ್ರಾಸ್ ಹೈಕೋರ್ಟ್ ಗಡುವು
A1
Published on

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾದ ಮತ್ತು ಅವರ ಸಾವಿಗೆ ಕಾರಣವಾದ ಸಂದರ್ಭಗಳ ತನಿಖೆ ನಡೆಸಿದ್ದ ಅರ್ಮುಘಸ್ವಾಮಿ ತನಿಖಾ ಆಯೋಗದ ವರದಿ ಆಧರಿಸಿ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ಒಂದು ವಾರದೊಳಗೆ ಬಹಿರಂಗಪಡಿಸುವಂತೆ ಮದ್ರಾಸ್‌ ಹೈಕೋರ್ಟ್‌ ಗಡುವು ನೀಡಿದೆ [ಆರ್‌ ಆರ್‌ ಗೋಪಾಲ್‌ಜೀ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಜಯಲಲಿತಾ ಅವರ ಸಹವರ್ತಿಗಳಾದ ಶಶಿಕಲಾ ಮತ್ತು ರಾಜ್ಯದ ಮಾಜಿ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಸೇರಿದಂತೆ ಹಲವರನ್ನು ತನಿಖೆಗೊಳಪಡಿಸುವಂತೆ 2022ರಲ್ಲಿ, ಆಯೋಗ ಶಿಫಾರಸು ಮಾಡಿತ್ತು.

ಜಯಲಲಿತಾ ಅವರ ಸಾವಿಗೆ ಕಾರಣವಾದ ಸಂದರ್ಭಗಳ ಕುರಿತು ಸಿಬಿಐ ತನಿಖೆ ಕೋರಿ ಆರ್‌ ಆರ್ ಗೋಪಾಲ್‌ಜೀ ಎಂಬುವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ ರಾಜಾ ಮತ್ತು ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ಅವರಿದ್ದ ಪೀಠ ವಿಚಾರಣೆ ನಡೆಸಿತು. ಆಯೋಗದ ವರದಿಯ ಆಧಾರದ ಮೇಲೆ ಸರ್ಕಾರ ಇನ್ನೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಗೋಪಾಲ್‌ಜೀ ಅವರು ಪಿಐಎಲ್‌ನಲ್ಲಿ ದೂರಿದ್ದಾರೆ.

ಜಯಲಲಿತಾರಿಗೆ ನೀಡಲಾದ ಚಿಕಿತ್ಸೆ ಬಗ್ಗೆ ವ್ಯಾಪಕ ವೈದ್ಯಕೀಯ ಪರಿಭಾಷೆ ಮತ್ತು ವಿವರಗಳನ್ನು ಒಳಗೊಂಡಿರುವ ಕಾರಣ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆಗೆ ರವಾನಿಸಲಾಗಿದೆ ಎಂದು ತಿಳಿಸಿದ ತಮಿಳುನಾಡು ಅಡ್ವೊಕೇಟ್ ಜನರಲ್ ಆರ್ ಷಣ್ಮುಘಸುಂದರಂ ಅವರು ಸರ್ಕಾರದಿಂದ ಸೂಚನೆಗಳನ್ನು ಪಡೆಯುವುದಕ್ಕಾಗಿ ಸಮಯಾವಕಾಶ ಕೋರಿದರು. ಬಳಿಕ ವಿವರಗಳನ್ನು ಒದಗಿಸಲು ಸರ್ಕಾರಕ್ಕೆ ಸಮಯಾವಕಾಶ ನೀಡಿದ ನ್ಯಾಯಾಲಯ ವಿಚಾರಣೆಯನ್ನು ಮಾರ್ಚ್ 27ಕ್ಕೆ ಮುಂದೂಡಿತು.

Kannada Bar & Bench
kannada.barandbench.com