ಜೆರೋಸಾ ಶಾಲೆ ಪ್ರಕರಣ: ಬಿಜೆಪಿ ಶಾಸಕರಾದ ವೇದವ್ಯಾಸ್‌ ಕಾಮತ್‌, ಭರತ್‌ ಶೆಟ್ಟಿ ಸೇರಿ ಐವರಿಗೆ ಮಧ್ಯಂತರ ಜಾಮೀನು

ಪ್ರಮುಖ ಜಾಮೀನು ಅರ್ಜಿಯ ಆದೇಶವನ್ನು ನಾಳೆಗೆ (ಫೆಬ್ರವರಿ 21) ವಿಶೇಷ ನ್ಯಾಯಾಲಯ ಕಾಯ್ದಿರಿಸಿದ್ದು, ಜಾಮೀನು ಅರ್ಜಿ ಇತ್ಯರ್ಥವಾಗುವವರೆಗೆ ಮಧ್ಯಂತರ ಜಾಮೀನು ಚಾಲ್ತಿಯಲ್ಲಿರಲಿದೆ ಎಂದು ಸ್ಪಷ್ಟಪಡಿಸಿದೆ.
Bengaluru City Civil Court and MLAs Vedavyas Kamath and Dr. Y Bharath Shetty
Bengaluru City Civil Court and MLAs Vedavyas Kamath and Dr. Y Bharath Shetty

ಮಂಗಳೂರಿನ ಸೇಂಟ್‌ ಜೆರೋಸಾ ಪ್ರೌಢಶಾಲೆಯಲ್ಲಿ ಪಾಠ ಮಾಡುವಾಗ ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರಾದ ವೇದವ್ಯಾಸ್‌ ಕಾಮತ್‌ ಮತ್ತು ಡಾ. ವೈ ಭರತ್‌ ಶೆಟ್ಟಿ ಸೇರಿ ಐವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈಚೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ನಡುವೆ, ಪ್ರಮುಖ ಜಾಮೀನು ಅರ್ಜಿಯ ಆದೇಶವನ್ನು ನಾಳೆಗೆ (ಫೆಬ್ರವರಿ 21) ಕಾಯ್ದಿರಿಸಿದೆ.

ಆರೋಪಿಗಳಾಗಿರುವ ಶಾಸಕರಾದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಕಾಮತ್‌, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್‌ ಶೆಟ್ಟಿ ಹಾಗೂ ಸ್ಥಳೀಯ ಸಂಸ್ಥೆ ಸದಸ್ಯರಾದ ಶರಣ್‌ ಕುಮಾರ್‌ ಅಲಿಯಾಸ್‌ ಶರಣ್‌ ಪಂಪ್‌ವೆಲ್‌, ಸಂದೀಪ್‌ ಮತ್ತು ಭರತ್‌ ಕುಮಾರ್‌ ಅವರಿಗೆ ವಿಶೇಷ ಜನಪ್ರತಿನಿಧಿಗಳ (ಸತ್ರ) ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್‌ ಗಜಾನನ್‌ ಭಟ್‌ ಅವರು ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ.

ಮಂಗಳೂರಿನ ದಕ್ಷಿಣ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದರೆ ಒಂದು ಲಕ್ಷ ಮೌಲ್ಯದ ಬಾಂಡ್‌ ಭದ್ರತೆ ಪಡೆದು ಮಧ್ಯಂತರವಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಜಾಮೀನು ಅರ್ಜಿ ಇತ್ಯರ್ಥವಾಗುವವರೆಗೆ ಮಧ್ಯಂತರ ಜಾಮೀನು ಚಾಲ್ತಿಯಲ್ಲಿರಲಿದೆ. ಅರ್ಜಿದಾರರು ಸಾಕ್ಷ್ಯ ತಿರುಚುವುದು ಅಥವಾ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂಥದ್ದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2024ರ ಫೆಬ್ರವರಿ 12ರಂದು ಸೇಂಟ್‌ ಜೆರೋಸಾ ಪ್ರೌಢಶಾಲೆಯ ಸಿಸ್ಟರ್‌ ಪ್ರಭಾ ಎಂಬ ಶಿಕ್ಷಕಿ ಅವರು ರವೀಂದ್ರನಾಥ್‌ ಟ್ಯಾಗೋರ್‌ ಅವರು ರಚಿಸಿರುವ 'ವರ್ಕ್‌ ಈಸ್‌ ವರ್ಷಿಪ್‌' (ಕಾಯಕವೇ ಕೈಲಾಸ) ವಿಷಯ ಬೋಧಿಸುವಾಗ ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆಡಿಯೊ ಸಂದೇಶ ವೈರಲ್‌ ಆಗಿದ್ದು, ಅದಕ್ಕೆ ಆಕ್ಷೇಪಿಸಿ ಪ್ರತಿಭಟನೆ ನಡೆಸಲಾಗಿತ್ತು.

ಶಾಸಕರಾದ ವೇದವ್ಯಾಸ್‌ ಕಾಮತ್‌ ಮತ್ತು ಭರತ್‌ ಶೆಟ್ಟಿ ಸ್ಥಳೀಯ ಸಂಸ್ಥೆ ಸದಸ್ಯರಾದ ಶರಣ್‌ ಪಂಪ್‌ವೆಲ್‌, ಸಂದೀಪ್‌ ಮತ್ತು ಭರತ್‌ ಕುಮಾರ್‌ ಅವರು ಜನರನ್ನು ಉದ್ರೇಕಿಸಿ ಶಾಲೆಯ ಮುಂದೆ ಬಿಗುವಿನ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ತಮ್ಮ ಸ್ಥಾನ ಘನತೆ ಮರೆತು ಆರೋಪಿಗಳು ನಡೆದುಕೊಂಡಿದ್ದಾರೆ. ಈ ಮೂಲಕ ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಿಸಿರುವುದರಿಂದ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅನಿಲ್‌ ಜೆರಾಲ್ಡ್‌ ಲೋಬೊ ಅವರು ಫೆಬ್ರವರಿ 14ರಂದು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 143, 149, 153A, 295A, 505(2) and 506 ಅಡಿ ಪ್ರಕರಣ ದಾಖಲಿಸಲಾಗಿದೆ.

Attachment
PDF
Vedavyas Kamath and others Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com