ಕೇಂದ್ರ ಸರ್ಕಾರದ ಮಾಜಿ ಸಚಿವ ದಿಲೀಪ್ ರೇ 1999ರ ಜಾರ್ಖಂಡ್ ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿದ್ದಕ್ಕೆ ವಿಧಿಸಲಾಗಿದ್ದ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ಅಮಾನತಿನಲ್ಲಿರಿಸಿದೆ (ದಿಲೀಪ್ ರೇ ವರ್ಸಸ್ ಸಿಬಿಐ).
ತಮ್ಮ ವಿರುದ್ಧದ ದೋಷ ನಿರ್ಣಯ ಪ್ರಶ್ನಿಸಿ ರೇ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರೇಶ್ ಕೈಟ್ ನೇತೃತ್ವದ ಏಕಸದಸ್ಯ ಪೀಠವು ಅವರಿಗೆ ವಿಧಿಸಿದ್ದ ಶಿಕ್ಷೆಯನ್ನು ಅಮಾನತಿನಲ್ಲಿರಿಸಿದೆ. ಮನವಿಯ ವಿಚಾರಣೆಗೆ ಒಪ್ಪಿರುವ ನ್ಯಾಯಾಲಯವು ನವೆಂಬರ್ 23ಕ್ಕೆ ವಿಚಾರಣೆ ನಿಗದಿಗೊಳಿಸಿದೆ.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ರೇ ಅವರು ಕಲ್ಲಿದ್ದಲು ಖಾತೆ ರಾಜ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಜಾರ್ಖಂಡ್ ಕಲ್ಲಿದ್ದಲು ಬ್ಲಾಕ್ ಹಂಚಿಕೆಗಳನ್ನು ಮಾಡಿದ್ದ ವೇಳೆ ನಡೆದಿದ್ದ ಅಕ್ರಮಗಳ ಕುರಿತಾದ ಪ್ರಕರಣ ಇದಾಗಿದೆ. ರೇ ಮತ್ತಿತರರನ್ನು ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಸಿಬಿಐ ನ್ಯಾಯಾಲಯವು ತಪ್ಪಿತಸ್ಥರು ಎಂದು ಘೋಷಿಸಿತ್ತು.
ರೇ ಅವರಿಗೆ ಸೋಮವಾರ ಮೂರು ವರ್ಷಗಳ ಶಿಕ್ಷೆ ನಿಗದಿಗೊಳಿಸುವುದರ ಜೊತೆಗೆ 10 ಲಕ್ಷ ರೂಪಾಯಿ ದಂಡವನ್ನೂ ನ್ಯಾಯಾಲಯ ವಿಧಿಸಿತ್ತು. ಕಲ್ಲಿದ್ದಲು ಸಚಿವಾಲಯದ ಇಬ್ಬರು ಮಾಜಿ ಹಿರಿಯ ಅಧಿಕಾರಿಗಳಾದ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ ಗೌತಮ್ ಮತ್ತು ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್‌ನ ನಿರ್ದೇಶಕ ಮಹೇಂದ್ರ ಕುಮಾರ್ ಅಗರ್‌ವಾಲ್ ಅವರನ್ನೂ ನ್ಯಾಯಾಲಯ ಶಿಕ್ಷೆಗೆ ಗುರಿಮಾಡಿದೆ.