ಜಾರ್ಖಂಡ್ ಸರ್ಕಾರವು ವಕೀಲರಿಗೆ ವಿಮೆ, ಸ್ಟೈಫಂಡ್ ಮತ್ತು ಪಿಂಚಣಿ ಒದಗಿಸುವ ಮಹತ್ವದ ನಿರ್ಣಯವನ್ನು ಶುಕ್ರವಾರ ಕೈಗೊಂಡಿದೆ.
ಮುಖ್ಯಮಂತ್ರಿ ಹೇಮಂತ್ ಸೊರೇನ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು:
- ರಾಜ್ಯದಲ್ಲಿ ವೃತ್ತಿನಿರತರಾಗಿರುವ ಎಲ್ಲಾ 30,000 ವಕೀಲರಿಗೆ ₹5 ಲಕ್ಷ ವೈದ್ಯಕೀಯ ವಿಮಾ ರಕ್ಷಣೆ;
- 65 ವಯೋಮಾನ ಮೀರಿದ ವಕೀಲರಿಗೆ ತಿಂಗಳಿಗೆ ₹14,000 ಪಿಂಚಣಿ;
- ವಕೀಲ ವೃತ್ತಿಯ ಆರಂಭದ ಹಂತದಲ್ಲಿ ಮೊದಲ ಐದು ವರ್ಷಗಳ ಎಲ್ಲಾ ನೂತನ ವಕೀಲರಿಗೆ ₹ 5000 ಸ್ಟೈಫಂಡ್.
ಜಾರ್ಖಂಡ್ ಅಡ್ವೊಕೇಟ್ ಜನರಲ್ ರಾಜೀವ್ ರಾಜನ್ ಅವರು ರಾಜ್ಯ ಸರ್ಕಾರದ ಈ ಮಹತ್ವದ ಹೆಜ್ಜೆಯ ಹಿಂದಿನ ಶಕ್ತಿಯಾಗಿದ್ದಾರೆ.
ದೇಶಾದ್ಯಂತ ವಿವಿಧ ರಾಜ್ಯ ಸರ್ಕಾರಗಳು ವಕೀಲರ ಕ್ಷೇಮಾಭಿವೃದ್ಧಿಯ ಹಿನ್ನೆಲೆಯಲ್ಲಿ ಹಲವು ಮಹತ್ವದ ಕ್ರಮಗಳನ್ನು ಇತ್ತೀಚಿನ ವರ್ಷಗಳಲ್ಲಿ ಕೈಗೊಂಡಿರುವುದನ್ನು ಇಲ್ಲಿ ನೆನೆಯಬಹುದು.
ಕೇರಳ ಸರ್ಕಾರವು 2023ರಲ್ಲಿ ಕೇರಳದ ಯುವ ವಕೀಲರಿಗೆ ತಿಂಗಳಿಗೆ ₹ 3,000 ಸ್ಟೈಫಂಡ್ ಯೋಜನೆಯನ್ನು ಪ್ರಾರಂಭಿಸಿತ್ತು.
30 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಕೀಲರು, 3 ವರ್ಷಕ್ಕಿಂತ ಕಡಿಮೆ ವೃತ್ತಿ ಅನುಭವವಿರುವವರಿಗೆ ಮತ್ತು ವಾರ್ಷಿಕ ಆದಾಯ ₹ 1 ಲಕ್ಷಕ್ಕಿಂತ ಕಡಿಮೆ ಇರುವವರು ತಿಂಗಳಿಗೆ ₹ 3,000 ಪಡೆಯಲು ಅರ್ಹರಾಗಿರುತ್ತಾರೆ ಎಂದು ಅದು ತಿಳಿಸಿತ್ತು.
ಈ ವರ್ಷದ ಆರಂಭದಲ್ಲಿ, ತಮಿಳುನಾಡು ಮತ್ತು ಪುದುಚೇರಿಯ ಬಾರ್ ಕೌನ್ಸಿಲ್ ರಾಜ್ಯಾದ್ಯಂತ ಎಲ್ಲಾ ವಕೀಲರ ಸಂಘಗಳು ಕಿರಿಯ ವಕೀಲರಿಗೆ ಕನಿಷ್ಠ ಸ್ಟೈಫಂಡ್ ಅನ್ನು ಜಾರಿಗೆ ತರಲು ಒತ್ತಾಯಿಸಿ ಸುತ್ತೋಲೆ ಹೊರಡಿಸಿತ್ತು.
ಸುತ್ತೋಲೆಯ ಅನ್ವಯ, ಚೆನ್ನೈ, ಮಧುರೈ ಮತ್ತು ಕೊಯಮತ್ತೂರು ಮುಂತಾದ ಪ್ರಮುಖ ನಗರಗಳಲ್ಲಿ ಜೂನಿಯರ್ ವಕೀಲರ ಸೇವೆಯನ್ನು ಬಳಸಿಕೊಳ್ಳುವ ಎಲ್ಲಾ ವಕೀಲರು ಮತ್ತು ಹಿರಿಯ ವಕೀಲರು ಅವರಿಗೆ ₹ 20,000 ಮಾಸಿಕ ಸ್ಟೈಫಂಡ್ ಪಾವತಿಸಲು ಸೂಚಿಸಲಾಗಿತ್ತು.
ಇತ್ತೀಚೆಗೆ,ದೆಹಲಿ ಹೈಕೋರ್ಟ್ ವಕೀಲರು ಮತ್ತು ಹಿರಿಯ ವಕೀಲರಿಂದ ನೇಮಕಗೊಂಡ ಎಲ್ಲಾ ಕಿರಿಯ ವಕೀಲರಿಗೆ ಕನಿಷ್ಠ ಸ್ಟೈಫಂಡ್ ಪಾವತಿಗೆ ಕೋರಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಆರು ವಾರಗಳಲ್ಲಿ ತನ್ನ ನಿರ್ಧಾರ ತಿಳಿಸಲು ಭಾರತೀಯ ಬಾರ್ ಕೌನ್ಸಿಲ್‌ಗೆ (ಬಿಸಿಐ) ನಿರ್ದೇಶನ ನೀಡಿದ್ದನ್ನು ಇಲ್ಲಿ ನೆನೆಯಬಹುದು.