Jharkhand High Court, Hemant Sore
Jharkhand High Court, Hemant Sore

ಇ ಡಿ ಬಂಧನ ಆಕ್ಷೇಪಿಸಿ ಜಾರ್ಖಂಡ್‌ನ ಮಾಜಿ ಸಿಎಂ ಸೊರೇನ್‌ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏಪ್ರಿಲ್ 24 ರಂದು ಮತ್ತೆ ಸುಪ್ರೀಂ ಕೋರ್ಟ್‌ ಎಡತಾಕಿದ್ದ ಸೊರೇನ್ ಹೈಕೋರ್ಟ್‌ ತನ್ನ ತೀರ್ಪನ್ನು ಪ್ರಕಟಿಸಲು ವಿಳಂಬ ತೋರುತ್ತಿರುವುದಾಗಿ ಆಕ್ಷೇಪಿಸಿದ್ದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ (ಸಿಎಂ) ಹೇಮಂತ್ ಸೊರೇನ್‌ ಸಲ್ಲಿಸಿರುವ ಮನವಿಯನ್ನು ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ [ಹೇಮಂತ್ ಸೊರೇನ್‌ ವರ್ಸಸ್‌ ಜಾರಿ ನಿರ್ದೇಶನಾಲಯ].

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ನವನೀತ್ ಕುಮಾರ್ ಅವರ ಪೀಠ ಫೆಬ್ರವರಿ 28ರಂದು ಕಾಯ್ದಿರಿಸಿದ್ದ ಆದೇಶವನ್ನು ಎರಡು ತಿಂಗಳ ನಂತರ ಇಂದು ಪ್ರಕಟಿಸಿತು.

ಇ ಡಿ ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸೊರೇನ್‌ ಆರಂಭದಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು ಆದರೆ ನಂತರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಬಯಸಿ ಅದನ್ನು ಹಿಂಪಡೆದಿದ್ದರು. ಸುಪ್ರೀಂ ಕೋರ್ಟ್ ಸೊರೇನ್‌ ಅವರ ಮನವಿಯನ್ನು ಪರಿಗಣಿಸಲು ನಿರಾಕರಿಸಿತು. ಅಲ್ಲದೆ, ಮೊದಲು ಜಾರ್ಖಂಡ್ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಸೂಚಿಸಿತು.

ಇದರ ಅನ್ವಯ, ಸೊರೇನ್‌ ಹೈಕೋರ್ಟ್‌ ಎಡತಾಕಿದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ ಫೆಬ್ರವರಿ 28 ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏಪ್ರಿಲ್ 24 ರಂದು ಮತ್ತೆ ಸುಪ್ರೀಂ ಕೋರ್ಟ್‌ ಎಡತಾಕಿದ ಸೊರೇನ್ ಹೈಕೋರ್ಟ್‌ ತನ್ನ ತೀರ್ಪನ್ನು ಪ್ರಕಟಿಸಲು ವಿಳಂಬ ತೋರುತ್ತಿರುವುದಾಗಿ ಆಕ್ಷೇಪಿಸಿದ್ದರು.

ಸೊರೇನ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಆದೇಶವನ್ನು ಪ್ರಕಟಿಸಲು ವಿಳಂಬ ಮಾಡಿದರೆ, ಲೋಕಸಭೆ ಚುನಾವಣೆ ವೇಳೆ ಸೋರೆನ್ ಜೈಲಿನಲ್ಲಿಯೇ ಇರಬೇಕಾಗುತ್ತದೆ ಎಂದು ವಾದಿಸಿದ್ದರು. ತದನಂತರ, ಏಪ್ರಿಲ್ 29 ರಂದು, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ಅರ್ಜಿ ಸಂಬಂಧ ನೋಟಿಸ್ ಜಾರಿಗೊಳಿಸಿ ಪ್ರಕರಣವನ್ನು ಮುಂದಿನ ವಾರ ವಿಚಾರಣೆಗೆ ಪಟ್ಟಿಮಾಡಿತು.

ಆದರೆ, ಇದೇ ವೇಳೆ ಕಾಯ್ದಿರಿಸಿರುವ ತೀರ್ಪನ್ನು ಅಷ್ಟರೊಳಗೆ ನೀಡಲು ಹೈಕೋರ್ಟ್‌ಗೆ ಮುಕ್ತವಾಗಿದೆ ಎಂದು ಸಹ ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮುಂದಿನ ವಾರಕ್ಕೆ ಪಟ್ಟಿಯಾಗಿರುವ ಬೆನ್ನಿಗೇ ಹೈಕೋರ್ಟ್‌ ಇಂದು ತನ್ನ ತೀರ್ಪು ಪ್ರಕಟಿಸಿದೆ.

 ರಾಜ್ಯದಲ್ಲಿ "ಮಾಫಿಯಾವನ್ನು ಬಳಸಿ ಭೂಮಿಯ ಮಾಲೀಕತ್ವವನ್ನು ಅಕ್ರಮವಾಗಿ  ಬದಲಾವಣೆ ಮಾಡಿರುವ” ಹಗರಣಕ್ಕೆ ಸಂಬಂಧಿಸಿಂತೆದ ಹಣ ವರ್ಗಾವಣೆ ಪ್ರಕರಣದಲ್ಲಿ ಇ ಡಿ ಸೊರೇನ್‌ ಅವರನ್ನು ಬಂಧಿಸಿತ್ತು. ಜನವರಿ 31 ರಂದು ಸೋರೆನ್ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು.

Kannada Bar & Bench
kannada.barandbench.com