ಮೇವು ಹಗರಣದ ಪ್ರಕರಣಗಳಲ್ಲಿ ಒಂದಾಗಿರುವ ದುಮ್ಕಾ ಖಜಾನೆ ಪ್ರಕರಣದಲ್ಲಿ ದೋಷಿ ಎಂದು ಘೋಷಿತವಾಗಿರುವ ಆರ್‌ಜೆಡಿ ಮುಖಂಡ, ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಶನಿವಾರ ಜಾಮೀನು ನೀಡಿದೆ. ಇದರೊಂದಿಗೆ ಮೇವು ಹಗರಣದ ನಾಲ್ಕು ಪ್ರಕರಣಗಳಲ್ಲೂ ಲಾಲು ಪ್ರಸಾದ್ ಯಾದವ್ ಅವರಿಗೆ ಜಾಮೀನು ದೊರೆತಂತಾಗಿದ್ದು, ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
2018ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಮಾಜಿ ಕೇಂದ್ರ ಸಚಿವರಾದ ಲಾಲು ಪ್ರಸಾದ್ ಯಾದವ್ ಅವರಿಗೆ ಹದಿನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಮೇವು ಹಗರಣದ ನಾಲ್ಕು ಪ್ರಕರಣಗಳ ಪೈಕಿ ಜಾಮೀನು ದೊರೆತಿರುವ ಪ್ರಕರಣಗಳಲ್ಲಿ ಹಾಲಿ ಪ್ರಕರಣ ಒಂದಾಗಿದೆ. ಇತರೆ ಮೂರು ಪ್ರಕರಣಗಳಲ್ಲಿ ಲಾಲು ಪ್ರಸಾದ್ ಅವರಿಗೆ ಈಗಾಗಲೇ ಜಾಮೀನು ದೊರೆತಿದೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಚೈಬಾಸಾ ಖಜಾನೆ ಹಗರಣದಲ್ಲಿ ಜಾಮೀನು ಸಿಕ್ಕಿದ್ದು, ಅದಕ್ಕೂ ಮುನ್ನ ಕಳೆದ ಫೆಬ್ರವರಿಯಲ್ಲಿ ದಿಯೋಘರ್ ಖಜಾನೆ ಪ್ರಕರಣದಲ್ಲಿ ಜಾಮೀನು ಮಂಜೂರಾಗಿತ್ತು. ದೊರಂಡಾ ಖಜಾನೆ ಪ್ರಕರಣದಲ್ಲಿ ವಿಚಾರಣೆ ಇನ್ನೂ ನಡೆಯುತ್ತಿದೆ. ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ವಕೀಲ ಅದಿತ್ ಎಸ್ ಪೂಜಾರಿ ಅವರು ಲಾಲು ಪ್ರಸಾದ್ ಅವರನ್ನು ಪ್ರತಿನಿಧಿಸಿದ್ದರು.