ಮೇವು ಹಗರಣ: ಡೊರಂಡಾ ಖಜಾನೆ ಪ್ರಕರಣದಲ್ಲಿ ಲಾಲೂ ಪ್ರಸಾದ್ ಯಾದವ್‌ಗೆ ಜಾಮೀನು ನೀಡಿದ ಜಾರ್ಖಂಡ್‌ ಹೈಕೋರ್ಟ್‌

ಲಾಲೂ ಅವರಿಗೆ ಜಾಮೀನು ನೀಡಿದ ಜಾರ್ಖಂಡ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಅಪರೇಶ್‌ ಕುಮಾರ್‌ ಸಿಂಗ್‌ ಅವರು ಇದೇ ಪ್ರಕರಣದಲ್ಲಿ ಅವರಿಗೆ ವಿಧಿಸಲಾಗಿದ್ದ ಐದು ವರ್ಷ ಸೆರೆವಾಸವನ್ನೂ ಅಮಾನತ್ತಿನಲ್ಲಿರಿಸಿದರು.
ಮೇವು ಹಗರಣ: ಡೊರಂಡಾ ಖಜಾನೆ ಪ್ರಕರಣದಲ್ಲಿ ಲಾಲೂ ಪ್ರಸಾದ್ ಯಾದವ್‌ಗೆ ಜಾಮೀನು ನೀಡಿದ ಜಾರ್ಖಂಡ್‌ ಹೈಕೋರ್ಟ್‌
Lalu Prasad Yadav

ಮೇವು ಹಗರಣಕ್ಕೆ ಸಂಬಂಧಿಸಿದ ರೂ. 139 ಕೋಟಿ ಮೊತ್ತದ ಡೊರಂಡಾ ಖಜಾನೆ ಪ್ರಕರಣದಲ್ಲಿ ಜಾರ್ಖಂಡ್‌ ಹೈಕೋರ್ಟ್‌ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದಲ್ಲಿ ಲಾಲೂ ಅವರನ್ನು ದೋಷಿ ಎಂದು ತೀರ್ಮಾನಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯವು ಐದು ವರ್ಷಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಿತ್ತು.

ಲಾಲೂ ಅವರಿಗೆ ಜಾಮೀನು ನೀಡಿದ ಜಾರ್ಖಂಡ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಅಪರೇಶ್‌ ಕುಮಾರ್‌ ಸಿಂಗ್‌ ಅವರು ಲಾಲೂ ಅವರಿಗೆ ವಿಧಿಸಲಾಗಿದ್ದ ಸೆರೆವಾಸವನ್ನೂ ಅಮಾನತ್ತಿನಲ್ಲಿರಿಸಿದರು.

ಪ್ರಕರಣದ ವಿಚಾರಣೆ ನಡೆಸಿದ್ದ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯವು ಫೆಬ್ರವರಿಯಲ್ಲಿ ಲಾಲೂ ಅವರಿಗೆ ಡೊರಂಡಾ ಖಜಾನೆಗೆ ಸಂಬಂಧಿಸಿದ ಹಣ ದುರುಪಯೋಗದ ಪ್ರಕರಣದಲ್ಲಿ ಐದು ವರ್ಷದ ಸೆರೆವಾಸ ಹಾಗೂ ರೂ. 60 ಲಕ್ಷ ದಂಡ ವಿಧಿಸಿತ್ತು.

ಲಾಲೂ ಯಾದವ್‌ ಅವರು ಬಿಹಾರದ ಮುಖ್ಯಮಂತ್ರಿಯಾಗಿದ್ದ 1991 ರಿಂದ 1996ರ ಅವಧಿಯಲ್ಲಿ ಸುಮಾರೂ ರೂ. 950 ಕೋಟಿ ಮೊತ್ತದ ಮೇವು ಹಗರಣ ನಡೆದಿರುವುದು ಕೇಳಿ ಬಂದಿತ್ತು. ಈ ಹಗರಣಕ್ಕೆ ಸಂಬಂಧಿಸಿದ ಇತರ ನಾಲ್ಕು ಪ್ರಕರಣಗಳಲ್ಲಿ ಅಕ್ರಮವಾಗಿ ವಿವಿಧ ಖಜಾನೆಗಳಿಂದ ಹಣವನ್ನು ಹಿಂಪಡೆದ ಆರೋಪದಲ್ಲಿ ಲಾಲೂ ಅವರಿಗೆ ಶಿಕ್ಷೆಯಾಗಿದೆ.

ಚಯ್‌ಬಾಸಾ ಖಜಾನೆ ಪ್ರಕರಣವು ರೂ. 37.3 ಕೋಟಿ ಮತ್ತು ರೂ.33.23 ಕೋಟಿ ಹಣವನ್ನು ಒಳಗೊಂಡರೆ, ದಿಯೋಘರ್ ಖಜಾನೆ ಪ್ರಕರಣವು ರೂ. 89.27 ಕೋಟಿ ಹಾಗೂ ದುಮ್ಕಾ ಪ್ರಕರಣವು ರೂ. 3.76 ಕೋಟಿ ಹಣವನ್ನು ಒಳಗೊಂಡಿದೆ. ಈ ಪ್ರಕರಣಗಳಲ್ಲಿ ದೋಷಿಯಾಗಿ, ಶಿಕ್ಷೆ ವಿಧಿಸಲ್ಪಟ್ಟಿದ್ದ ಲಾಲೂ ಅವರಿಗೆ ಇದಾಗಲೇ ಜಾಮೀನು ದೊರೆತಿದೆ. ಮೇವು ಹಗರಣಕ್ಕೆ ಸಂಬಂಧಿಸಿದಂತೆ ಈವರೆಗೆ ಲಾಲೂ ಐದು ಪ್ರಕರಣಗಳಲ್ಲಿ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Related Stories

No stories found.