ಬುಲ್ಡೋಜರ್‌ ಬಳಸಿ ಅಂಗಡಿ ಧ್ವಂಸ: ₹5 ಲಕ್ಷ ಪರಿಹಾರ ಪಾವತಿಸಲು ಸರ್ಕಾರಕ್ಕೆ ಜಾರ್ಖಂಡ್‌ ಹೈಕೋರ್ಟ್‌ ಆದೇಶ

ಅರ್ಜಿದಾರರ ಕಟ್ಟಡ ಕೆಡವಿರುವ ಸರ್ಕಾರದ ನಿರ್ಧಾರವು ಅಕ್ರಮ, ಸ್ವೇಚ್ಛೆಯಿಂದ ಕೂಡಿದ್ದು ಮತ್ತು ಹುಚ್ಚಾಟದ ನಡೆಯಾಗಿದೆ ಎಂದ ನ್ಯಾಯಾಲಯ.
Bulldozer
Bulldozer

ಐದು ಅಂಗಡಿ ಮಳಿಗೆಗಳನ್ನು ಒಳಗೊಂಡಿದ್ದ ಖಾಸಗಿ ಕಟ್ಟಡವನ್ನು ಬುಲ್ಡೋಜರ್‌ನಿಂದ ಅಕ್ರಮವಾಗಿ ನೆಲಸಮ ಮಾಡಿದ ಕಾರಣಕ್ಕೆ ಸಂತ್ರಸ್ತ ಕಟ್ಟಡದ ಮಾಲೀಕರಿಗೆ ₹5 ಲಕ್ಷ ಪರಿಹಾರ ಪಾವತಿಸುವಂತೆ ಗುರುವಾರ ರಾಜ್ಯ ಸರ್ಕಾರಕ್ಕೆ ಜಾರ್ಖಂಡ್‌ ಹೈಕೋರ್ಟ್‌ ಆದೇಶಿಸಿದೆ.

ರಾಜ್ಯ ಸರ್ಕಾರದ ದುರ್ನಡೆಯಿಂದಾಗಿ ಮಾನಸಿಕ ವೇದನೆ ಮತ್ತು ನೋವು ಅನುಭವಿಸಿರುವ ಅಂಗಡಿಯ ಮಾಲೀಕರಿಗೆ ಹೆಚ್ಚುವರಿಯಾಗಿ ₹25,000 ಪಾವತಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ರಾಜ್ಯ ಸರ್ಕಾರದ ನಡೆಯನ್ನು ನ್ಯಾಯಮೂರ್ತಿ ಸಂಜಯ್‌ ಕುಮಾರ್‌ ದ್ವಿವೇದಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರದ ಕ್ರಮವು ಕಾನೂನುಬಾಹಿರವಾಗಿದ್ದು, ಸ್ವೇಚ್ಛೆಯಿಂದ ಕೂಡಿದ ಹುಚ್ಚಾಟದ ವರ್ತನೆಯಾಗಿದೆ ಎಂದು ನ್ಯಾಯಾಲಯ ಆಕ್ಷೇಪಿಸಿದೆ.

ರಾಜ್ಯ ಸರ್ಕಾರವು ತನ್ನೆಲ್ಲಾ ಕ್ರಮಗಳನ್ನು ಕಾನೂನು ಮತ್ತು ಸಂವಿಧಾನದ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕು. ರಾಜ್ಯ ಸರ್ಕಾರವು ಕಠಿಣ ಕ್ರಮಕೈಗೊಳ್ಳುವುದಕ್ಕೂ ಮುನ್ನ ಬಾದಿತರಾಗುವ ವ್ಯಕ್ತಿಯ ಅಹವಾಲನ್ನು ಮೊದಲಿಗೆ ಆಲಿಸಬೇಕು ಎಂದು ಇದೇ ವೇಳೆ ಪೀಠವು ಸರ್ಕಾರಕ್ಕೆ ತಿಳಿಹೇಳಿತು.

ಆಸ್ತಿಯ ಹಕ್ಕು ಮೂಲಭೂತ ಹಕ್ಕಲ್ಲ. ಆದರೆ, ಅದು ಸಾಂವಿಧಾನಿಕ ಹಕ್ಕಾಗಿದ್ದು, ಅದಕ್ಕೆ ರಕ್ಷಣೆ ಇದೆ ಎಂದು ನ್ಯಾಯಾಲಯ ಹೇಳಿದೆ.

"ಆಸ್ತಿಯ ಹಕ್ಕು ಪ್ರಸ್ತುತ ಮೂಲಭೂತ ಹಕ್ಕಾಗಿ ಉಳಿದಿಲ್ಲ. ಆದರೆ ಇದು ಇನ್ನೂ ಸಾಂವಿಧಾನಿಕ ಹಕ್ಕು ಹಾಗೂ ಮಾನವ ಹಕ್ಕಾಗಿದೆ. ಯಾವುದೇ ವ್ಯಕ್ತಿಯನ್ನು ಕಾನೂನು ರೀತ್ಯಾ ಅಲ್ಲದೆ ಮತ್ತಾವುದೇ ರೀತಿ ಆತನ ಆಸ್ತಿಯಿಂದ ವಂಚಿಸುವಂತಿಲ್ಲ. ಆಸ್ತಿಯ ಹಕ್ಕು ಮೂಲಭೂತ ಹಕ್ಕಲ್ಲ, ಹಾಗೆಯೇ ಅದು ಎಂದಿಗೂ ನೈಸರ್ಗಿಕ ಹಕ್ಕಾಗಿರಲಿಲ್ಲ. ಆದಾಗ್ಯೂ, ಆಸ್ತಿಯ ಹಕ್ಕು ಇಲ್ಲದೆ ಇತರೆ ಹಕ್ಕುಗಳು ಕೇವಲ ಭ್ರಮಾತ್ಮಕವಾಗುತ್ತವೆ ಎನ್ನುವುದನ್ನು ಒಪ್ಪಬೇಕಾಗುತ್ತದೆ,” ಎಂದು ನ್ಯಾಯಾಲಯವು ತನ್ನ ಜೂನ್ 27 ರ ತೀರ್ಪಿನಲ್ಲಿ ವಿವರಿಸಿದೆ.

Kannada Bar & Bench
kannada.barandbench.com