ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಮಾಜಿ ಸಿಎಂ ಹೇಮಂತ್ ಸೊರೇನ್‌ಗೆ ಅನುಮತಿ ನಿರಾಕರಿಸಿದ ಜಾರ್ಖಂಡ್ ಹೈಕೋರ್ಟ್

ಇ ಡಿಯಿಂದ ಬಂಧಿತರಾಗಿರುವ ಸೊರೇನ್‌ ನ್ಯಾಯಾಲಯದ ಊರ್ಜಿತ ಆದೇಶದಂತೆ ಪ್ರಸ್ತುತ ಜೈಲಿನಲ್ಲಿರುವುದರಿಂದ ಅವರು ಶಾಸಕಾಂಗ ವ್ಯವಹಾರಗಳಲ್ಲಿ ಭಾಗವಹಿಸುವ ಹಕ್ಕನ್ನು ತ್ಯಜಿಸಬೇಕಾಗುತ್ತದೆ ಎಂದು ನ್ಯಾಯಾಲಯ ತರ್ಕಿಸಿತು.
ಜಾರ್ಖಂಡ್ ಹೈಕೋರ್ಟ್, ಹೇಮಂತ್ ಸೊರೆನ್
ಜಾರ್ಖಂಡ್ ಹೈಕೋರ್ಟ್, ಹೇಮಂತ್ ಸೊರೆನ್

ಭೂ ಹಗರಣದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರಸ್ತುತ ಸೆರೆವಾಸ ಅನುಭವಿಸುತ್ತಿರುವ ಜಾರ್ಖಂಡ್‌ ನಿಕಟಪೂರ್ವ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ರಾಜ್ಯ ಹೈಕೋರ್ಟ್ ಬುಧವಾರ ಅನುಮತಿ ನಿರಾಕರಿಸಿದೆ.

ನ್ಯಾಯಾಲಯದ ಊರ್ಜಿತ ಆದೇಶದ ಆಧಾರದ ಮೇಲೆ ಬಂಧನದಲ್ಲಿರುವ ವ್ಯಕ್ತಿ ಶಾಸಕಾಂಗ ವ್ಯವಹಾರದಲ್ಲಿ ಭಾಗವಹಿಸುವ ಹಕ್ಕನ್ನು ತ್ಯಜಿಸಬೇಕಾಗುತ್ತದೆ ಎಂದು ನ್ಯಾ. ಸುಜಿತ್ ನಾರಾಯಣ್ ಪ್ರಸಾದ್ ಹೇಳಿದ್ದಾರೆ.

ನ್ಯಾಯಮೂರ್ತಿ ಸುಜಿತ್ ನಾರಾಯಣ್ ಪ್ರಸಾದ್
ನ್ಯಾಯಮೂರ್ತಿ ಸುಜಿತ್ ನಾರಾಯಣ್ ಪ್ರಸಾದ್

ವಿಧಾನಸಭೆಯ ಸದಸ್ಯರಾಗಿರುವ ಸೊರೇನ್‌ ಅವರು ಅಧಿವೇಶನದಲ್ಲಿ ಭಾಗವಹಿಸದಂತೆ ತಡೆ ನೀಡಿದರೆ ರಾಜ್ಯದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಸರ್ಕಾರ ಕುಸಿಯುತ್ತದೆ ಎಂಬ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.

ಆಡಳಿತ ಮತ್ತು ವಿರೋಧ ಪಕ್ಷದ ಬಲಾಬಲ ಸಮಸ್ಪರ್ಧಿಯಾಗಿದ್ದಾಗ ಮಾತ್ರ ಹಾಗೆ ಸರಿಪಡಿಸಲಾಗದ ನಷ್ಟ ಉಂಟಾಗುತ್ತದೆ ಎಂದು ನ್ಯಾಯಾಲಯ ನುಡಿಯಿತು.

ಪ್ರಸ್ತುತ ಪ್ರಕರಣದಲ್ಲಿ ಸದಸ್ಯರ ಸಂಖ್ಯಾಬಲದಲ್ಲಿ ಬಹಳಷ್ಟು ವ್ಯತ್ಯಾಸ ಇದೆ. ಜಾರ್ಖಂಡ್‌ ಆಡಳಿತ ಪಕ್ಷದ ಶಾಸಕಾಂಗ ಸದಸ್ಯರ ಸಂಖ್ಯೆ 47 ಮತ್ತು ವಿರೋಧ ಪಕ್ಷದ ಸದಸ್ಯರ ಸಂಖ್ಯೆ 29 ಎಂಬ ಅಂಶವನ್ನು ಇದೇ ವೇಳೆ ನ್ಯಾಯಾಲಯದ ಗಮನಕ್ಕೆ ತರಲಾಯಿತು.

ಭೂ ಹಗರಣ ಹಣ ಅಕ್ರಮ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹೇಮಂತ್‌ ಅವರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಅವರು ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಫೆಬ್ರವರಿ 23ರಿಂದ ಮಾರ್ಚ್ 2ರವರೆಗೆ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ವಿಚಾರಣಾ ನ್ಯಾಯಾಲಯ ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಸೊರೆನ್ ಮತ್ತು ಇ ಡಿ ವಾದಗಳನ್ನು ಆಲಿಸಿದ ನ್ಯಾಯಾಲಯ, ಸಂವಿಧಾನದ 19(1)(ಎ) ಮತ್ತು 194ನೇ ವಿಧಿಗಳ ಅಡಿ ಬಜೆಟ್ ಅಧಿವೇಶನದಲ್ಲಿ ಭಾಗವಹಿಸುವುದು ಮೂಲಭೂತ ಹಕ್ಕು ಎಂದು ಹೇಳಬಹುದೇ ಎಂಬ ಪ್ರಶ್ನೆಯನ್ನು ನ್ಯಾಯಾಲಯ ಪರಿಗಣಿಸಿತು.

19ನೇ ವಿಧಿ ಅಡಿಯಲ್ಲಿ ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕು ಎಂಬುದು, ಶಾಸಕಾಂಗ ಕೊಠಡಿಯೊಳಗೆ ಶಾಸಕರಿಗೆ "ಸಂಪೂರ್ಣ" ವಾಕ್ ಸ್ವಾತಂತ್ರ್ಯವನ್ನು ನೀಡುವ ವಿಧಿ 194ಕ್ಕಿಂತ ಭಿನ್ನವಾಗಿದೆ ಎಂದಿತು. ಹೀಗಾಗಿ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಸೊರೆನ್ ಅವರಿಗೆ ಅವಕಾಶ ನೀಡದೆ ಇರುವುದು ಯಾವುದೇ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿಲ್ಲ ಎಂದು ಅದು ತೀರ್ಮಾನಿಸಿತು.

ಸೊರೇನ್‌ ವಿರುದ್ಧ ಯಾವುದೇ ಕಾನೂನು ಪ್ರಕ್ರಿಯೆಗಳು ಬಾಕಿ ಉಳಿದಿಲ್ಲದಿದ್ದರೆ, ಖಂಡಿತವಾಗಿಯೂ ಜನಪ್ರತಿನಿಧಿಯಾಗಿ, ಬಜೆಟ್ ಅಧಿವೇಶನದಲ್ಲಿ ಭಾಗವಹಿಸುವ ಅವರ ಹಕ್ಕು ನಿಹಿತ ಹಕ್ಕಾಗಿರುತ್ತಿತ್ತು ಎಂದು ಅದು ಅಭಿಪ್ರಾಯಪಟ್ಟಿದೆ.

ಆಲ್ಲದೆ, ರಿಮಾಂಡ್ ಆದೇಶವನ್ನು ಸೊರೆನ್ ಪ್ರಶ್ನಿಸದ ಕಾರಣ, "ಸದನದ ಕಲಾಪದಲ್ಲಿ ಭಾಗವಹಿಸಲು ಅರ್ಜಿದಾರರಿಗೆ ಯಾವುದೇ ಕಾನೂನುಬದ್ಧ ಹಕ್ಕು ದೊರೆತಿದೆ ಎಂದು ಹೇಳಲಾಗದು" ಎಂಬುದಾಗಿ ನ್ಯಾಯಮೂರ್ತಿ ಪ್ರಸಾದ್ ಅವರು ತೀರ್ಮಾನಿಸಿದರು.

ಮತದಾನ ಅಥವಾ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಹಕ್ಕಿಗೆ ಸಂಬಂಧಿಸಿದ್ದಾಗಿದ್ದರೆ ಮತದಾನ ಅಥವಾ ಪ್ರಮಾಣವಚನ ಸ್ವೀಕರಿಸುವ ಉದ್ದೇಶಕ್ಕಾಗಿ ಶಾಸಕರಿಗೆ ಅಧಿವೇಶನದಲ್ಲಿ ಭಾಗವಹಿಸಲು ಅನುವಾಗುವಂತೆ ಸೂಕ್ತ ಆದೇಶ ಹೊರಡಿಸಬಹುದಿತ್ತು ಎಂದು ಪೀಠ ನುಡಿಯಿತು.

ಸೊರೇನ್‌ ಅವರ ಬಂಧನದ ಹಿನ್ನೆಲೆಯಲ್ಲಿ ಅವರು ಪಡೆದಿರುವ ವಾಕ್ ಸ್ವಾತಂತ್ರ್ಯ, ವಿಧಾನಸಭೆಯಲ್ಲಿ ಅವರಿಗಿರುವ ವಿಶೇಷಾಧಿಕಾರ, ಸಾಂವಿಧಾನಿಕ ಬಾಧ್ಯತೆ ನಿಭಾಯಿಸಲು ಕಲಾಪಗಳಲ್ಲಿ ಭಾಗವಹಿಸಬೇಕು ಎಂಬ ಆಧಾರದಲ್ಲಿ ಅವರ ಬಿಡುಗಡೆಗೆ ಅನುಮತಿಸಲು ಸಂವಿಧಾನದ 26ನೇ ವಿಧಿಯಡಿ ವಿವೇಚನೆ ಬಳಸುವುದು ಸಂಪೂರ್ಣ ಸೂಕ್ತವಲ್ಲ ಎಂದು ಕಡೆಗೆ ನ್ಯಾಯಾಲಯ ತಿಳಿಸಿತು.

ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ರಾಜೀವ್ ರಂಜನ್ , ವಕೀಲರಾದ ಪಿಯೂಷ್ ಚಿತ್ರೇಶ್ ಮತ್ತು ಶ್ರೇ ಮಿಶ್ರಾ ಅವರು ಹೇಮಂತ್ ಸೊರೆನ್ ಅವರನ್ನು ಪ್ರತಿನಿಧಿಸಿದ್ದರು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ ವಿ ರಾಜು ಮತ್ತು ವಕೀಲರಾದ ಜೊಹೆಬ್ ಹುಸೇನ್, ಅಮಿತ್ ಕುಮಾರ್ ದಾಸ್, ಸೌರವ್ ಕುಮಾರ್ ಮತ್ತು ರಿಷಭ್ ದುಬೆ ಅವರು ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ್ದರು.

[ತೀರ್ಪಿನ ಪ್ರತಿಗಾಗಿ ಈ ಕೆಳಗೆ ಕ್ಲಿಕ್ಕಿಸಿ]

Attachment
PDF
Hemant Soren v. Directorate of Enforcement.pdf
Preview
Kannada Bar & Bench
kannada.barandbench.com