ರಸ್ತೆ ಅಪಘಾತಗಳಲ್ಲಿ ಖುದ್ದು ಗಾಯಗೊಂಡವರಿಗೆ ಸರ್ಕಾರ ಅಥವಾ ವಿಮಾದಾರರು ಮೊತ್ತ ಪಾವತಿಸಬೇಕು: ಜಾರ್ಖಂಡ್ ಹೈಕೋರ್ಟ್

ವಾಹನ ಮಾಲೀಕರು ಗಾಯಗೊಂಡರೆ ಅಥವಾ ಅವರ ಸಾವು ಸಂಭವಿಸಿದಲ್ಲಿ ಸರ್ಕಾರ ಇಲ್ಲವೇ ವಿಮಾದಾರರು ನಿಗದಿತ ಮೊತ್ತ ಪಾವತಿಸಲು ಹೊಣೆಗಾರರು ಎಂದು ಕಾನೂನಿನಲ್ಲಿ ಬದಲಾವಣೆ ತರುವುದು ಇಂದಿನ ಅಗತ್ಯ ಎಂದು ನ್ಯಾಯಾಲಯ ಹೇಳಿದೆ.
Motor vehicle accident
Motor vehicle accident(For representation only).
Published on

ರಸ್ತೆ ಅಪಘಾತಗಳಾದಾಗ ಮೋಟಾರು ವಾಹನ ಮಾಲೀಕರು ಅನುಭವಿಸಬಹುದಾದ ವೈಯಕ್ತಿಕ ಗಾಯಗಳಿಗೆ ಪರಿಹಾರ ನೀಡಲು ಸರ್ಕಾರ ಅಥವಾ ವಿಮಾದಾರರು ನಿಗದಿತ ಮೊತ್ತವನ್ನು ಪಾವತಿಸುವಂತೆ ಕಾನೂನಿನಲ್ಲಿ ಬದಲಾವಣೆ ತರಬೇಕೆಂದು ಜಾರ್ಖಂಡ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ರಸ್ತೆ ಅಪಘಾತ ಪ್ರಕರಣಗಳಲ್ಲಿ ಸರ್ಕಾರಕ್ಕೂ ಸ್ವಲ್ಪ ಮಟ್ಟಿನ ಜವಾಬ್ದಾರಿ ಇದೆ ಎಂದು ನ್ಯಾಯಮೂರ್ತಿ ಸಂಜಯ್ ಕುಮಾರ್ ದ್ವಿವೇದಿ ಅವರಿದ್ದ ಪೀಠ ಅವಲೋಕಿಸಿತು.

Also Read
ಮೋಟಾರು ಅಪಘಾತ ಹಾಗೂ ಕಾರ್ಮಿಕ ಪ್ರಕರಣಗಳಲ್ಲಿ ಪರಿಹಾರ ಪಡೆಯದ ಫಲಾನುಭವಿಗಳ ಪತ್ತೆಗೆ ಸುಪ್ರೀಂ ನಿರ್ದೇಶನ

"ಸಾರ್ವಜನಿಕ ರಸ್ತೆ ಅಪಘಾತದ ಸಂದರ್ಭದಲ್ಲಿ ಸರ್ಕಾರ ತನ್ನ ಸೀಮಿತ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಸರ್ಕಾರ ರಸ್ತೆ ತೆರಿಗೆ ವಿಧಿಸುತ್ತದೆ. ಸರ್ಕಾರ ಅದನ್ನು ಸ್ವತಃ ಭರಿಸಬಹುದು ಅಥವಾ ಅಧಿಕೃತ ವಿಮಾ ಕಂಪನಿ ವಿಮೆದಾರರು ಪರಿಹಾರ ನೀಡಿದಾಗ ಅವರ ಹೊಣೆಗಾರಿಕೆಯ ಜೊತೆಗೆ ಕಂಪನಿಯನ್ನು ಶಾಸನಬದ್ಧವಾಗಿ ಹೊಣೆಗಾರರನ್ನಾಗಿ ಮಾಡುವ ಮೂಲಕ ಅವರ ಮೇಲೆ ಹೊಣೆಗಾರಿಕೆ ಹೇರಬಹುದು. ಅಂದರೆ, ಮೋಟಾರು ವಾಹನ ಕಾಯಿದೆಯ XIನೇ ಅಧ್ಯಾಯದ ಅಡಿಯಲ್ಲಿ ಅಗತ್ಯವಿರುವಂತೆ ಅವರು ವಿಮಾ ಒಪ್ಪಂದವನ್ನು ಮಾಡಿಕೊಳ್ಳುವ ಕ್ಷಣದಲ್ಲಿ, ಅವರನ್ನು ಕಲ್ಯಾಣ ರಾಜ್ಯದ ಹೊಣೆಗಾರಿಕೆಗೆ ಶಾಸನಬದ್ಧವಾಗಿ ಉತ್ತರದಾಯಿಗಳನ್ನಾಗಿ ಮಾಡಬೇಕು" ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಗಮನಾರ್ಹವಾಗಿ, ಪ್ರಸ್ತುತ ಕಾಯಿದೆಯಡಿ, ವಾಹನ ಮಾಲೀಕರಿಗೆ ಮೂರನೇ ವ್ಯಕ್ತಿಯ ವಿಮೆಯಷ್ಟೇ ಕಡ್ಡಾಯ. ವಾಹನ ಡಿಕ್ಕಿಯ ಸಮಯದಲ್ಲಿ ಮೋಟಾರು ವಾಹನ ಮಾಲೀಕರಿಂದ ಇತರರಿಗೆ ಉಂಟಾಗಬಹುದಾದ ಗಾಯಗಳನ್ನು ಒಳಗೊಳ್ಳುವ ಗುರಿ ಈ ವಿಮೆಯದ್ದು. ವೈಯಕ್ತಿಕ ವಿಮಾ ರಕ್ಷಣೆ (ಅಥವಾ ಮೋಟಾರು ವಾಹನ ಮಾಲೀಕರು ಅನುಭವಿಸಿದ ಗಾಯಗಳನ್ನು ಒಳಗೊಳ್ಳುವ ವಿಮೆ) ಕಡ್ಡಾಯವಲ್ಲ.

ಸರ್ಕಾರ ಅಥವಾ ವಿಮಾದಾರರು ಮೋಟಾರು ವಾಹನ ಮಾಲೀಕರಿಗೆ ಅವರ ವೈಯಕ್ತಿಕ ಗಾಯಗಳನ್ನು ಭರಿಸಲು ನಿಗದಿತ ಮೊತ್ತ ಪಾವತಿಸಲು ಹೊಣೆಗಾರರನ್ನಾಗಿ ಮಾಡುವ ಕಾರ್ಯವಿಧಾನ ಜಾರಿಗಾಗಿ ಕಾಯಿದೆಗೆ ತಿದ್ದುಪಡಿ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.

ಪ್ರಸಕ್ತ ಪ್ರಕರಣದಲ್ಲಿ ಪೊಲೀಸರಿಗೆ ಸೇರಿದ ಬೊಲೆರೊ ಜೀಪ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರು.

ವಿಚಾರಣೆ ನಡೆಸಿದ್ದ ಮೋಟಾರು ಅಪಘಾತಗಳ ಪರಿಹಾರ ನ್ಯಾಯಮಂಡಳಿ ಅವರ ಕುಟುಂಬಗಳಿಗೆ ತಲಾ ₹3,48,880 ಪಾವತಿಸಬೇಕೆಂದು ನಿರ್ದೇಶಿಸಿತ್ತು. ಜೊತೆಗೆ ವಾರ್ಷಿಕ ಬಡ್ಡಿಯ ಶೇ.7.5ರಷ್ಟು ಪರಿಹಾರವನ್ನು ನೀಡಬೇಕೆಂದು ಸೂಚಿಸಿತ್ತು.

ಬೊಲೆರೊ ವಾಹನವನ್ನು ನಿರ್ಲಕ್ಷ್ಯದಿಂದ ಚಲಾಯಿಸಿಲ್ಲ ಮತ್ತು ಅಪಘಾತಕ್ಕೆ ಮೋಟಾರ್ ಸೈಕಲ್ ಚಾಲಕರು ಭಾಗಶಃ ತಪ್ಪಿತಸ್ಥರು (ಅಜಾಗರೂಕತೆ) ಎಂದು ವಾದಿಸಿದ ರಾಜ್ಯ ಸರ್ಕಾರ ನ್ಯಾಯಮಂಡಳಿಯ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. ಪರಿಹಾರ ಪಾವತಿಗೆ ಸರ್ಕಾರವನ್ನು ಸಂಪೂರ್ಣವಾಗಿ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ಗೆ ತಿಳಿಸಲಾಯಿತು. ಅಲ್ಲದೆ ಬೊಲೆರೊ ವಾಹನಕ್ಕೆ ವಿಮೆ ಮಾಡಲಾಗಿಲ್ಲ ಎಂದು ಸರ್ಕಾರ ವಾದಿಸಿತು.

Also Read
ವಿಧವೆಯ ಮರು ವಿವಾಹದ ಆಧಾರದಲ್ಲಿ ಮೋಟಾರು ವಾಹನ ಕಾಯಿದೆ ಅಡಿ ಪರಿಹಾರ ನಿರಾಕರಿಸಲಾಗದು: ಬಾಂಬೆ ಹೈಕೋರ್ಟ್‌

ಆದರೂ, ಹೈಕೋರ್ಟ್ ಅಂತಿಮವಾಗಿ ನ್ಯಾಯಮಂಡಳಿಯ ತೀರ್ಪನ್ನು ಎತ್ತಿಹಿಡಿಯಿತು. ವಾಹನ ಪೊಲೀಸರಿಗೆ ಸೇರಿರುವುದರಿಂದ, ಚಾಲಕನ ಕೃತ್ಯಗಳಿಗೆ ಸರ್ಕಾರ ನೇರವಾಗಿ ಹೊಣೆಗಾರನಾಗಿರುತ್ತದೆ ಎಂದು ಅದು ಒತ್ತಿ ಹೇಳಿದೆ.

ವಾಹನ ಸರ್ಕಾರಿ ಸ್ವಾಮ್ಯದ್ದಾಗಿದ್ದು, ಚಾಲಕ ಪೊಲೀಸ್ ಉದ್ಯೋಗಿಯಾಗಿದ್ದ ಮಾತ್ರಕ್ಕೆ ಸರ್ಕಾರ ಹೊಣೆಗಾರಿಕೆಯಿಂದ ವಿನಾಯಿತಿ ಪಡೆದಿದೆ ಎಂದು ಅರ್ಥವಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಂತಹ ವಿಷಯಗಳ ಕುರಿತು ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲೇಖಿಸಿದ ಅದು ಕಾಯಿದೆಯನ್ನಿ ಸಾರ್ವಭೌಮ ಕಾರ್ಯದ ಭಾಗವೆಂದು ತೋರಿಸದ ಹೊರತು (ಸರ್ಕಾರ ಮಾತ್ರ ಮಾಡಬಹುದಾದ ಕಾರ್ಯ, ಇದಕ್ಕೆ ಸಂಬಂಧಿಸಿದಂತೆ ಅದು ವಿನಾಯಿತಿ ಹೊಂದಿರಬಹುದು), ಸರ್ಕಾರವನ್ನು ಯಾವುದೇ ಸಾಮಾನ್ಯ ಉದ್ಯೋಗದಾತರಂತೆ ಹೊಣೆಗಾರರನ್ನಾಗಿ ಮಾಡಬಹುದು ಎಂದು ಅದು ಹೇಳಿದೆ.

Kannada Bar & Bench
kannada.barandbench.com