ಮೋದಿ ವಿರುದ್ಧ ಟ್ವೀಟ್: ಜಾಮೀನು ದೊರೆತ ಬೆನ್ನಿಗೇ ಮತ್ತೊಂದು ಪ್ರಕರಣದಲ್ಲಿ ಮೇವಾನಿ ಮರು ಬಂಧನ

ಎರಡು ಸಮುದಾಯಗಳ ನಡುವೆ ದ್ವೇಷ ಸೃಷ್ಟಿಸುವ ಪಿತೂರಿ ಆರೋಪದಡಿ ಅಸ್ಸಾಂ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಜಿಗ್ನೇಶ್ ಮೇವಾನಿಗೆ ಜಾಮೀನು ದೊರೆತಿದೆ.
jignesh mevani
jignesh mevaniFacebook
Published on

ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ್ದನ್ನು ಪ್ರಶ್ನಿಸಿ ನೀಡಲಾದ ದೂರಿಗೆ ಸಂಬಂಧಿಸಿದಂತೆ ಗುಜರಾತ್‌ ವಿಧಾನಸಭೆ ಸದಸ್ಯ ಜಿಗ್ನೇಶ್‌ ಮೇವಾನಿ ಅವರಿಗೆ ಅಸ್ಸಾಂ ನ್ಯಾಯಾಲಯ ಸೋಮವಾರ ಜಾಮೀನು ನೀಡಿದ ಬೆನ್ನಿಗೇ ಅವರನ್ನು ಮತ್ತೊಂದು ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ಅಸ್ಸಾಂ ಮೂಲದ ಬಿಜೆಪಿ ರಾಜಕಾರಣಿ ಅರೂಪ್ ಡೇ ಅವರ ದೂರಿನ ಆಧಾರದ ಮೇಲೆ ಶಾಸಕ ಹಾಗೂ ದಲಿತ ಹೋರಾಟಗಾರ ಜಿಗ್ನೇಶ್‌ ಅವರನ್ನು ಭಾನುವಾರ ಬಂಧಿಸಿ ಒಂದು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಎರಡು ಸಮುದಾಯಗಳ ನಡುವೆ ದ್ವೇಷ ಸೃಷ್ಟಿಸುವ ಪಿತೂರಿ ಆರೋಪದಡಿ ಅಸ್ಸಾಂ ಪೊಲೀಸರು ಜಿಗ್ನೇಶ್ ಮೇವಾನಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯ ತನ್ನ ಆದೇಶ ಕಾಯ್ದಿರಿಸುವ ಮುನ್ನ ಭಾನುವಾರ ಜಾಮೀನು ಅರ್ಜಿಯನ್ನು ಆಲಿಸಿತ್ತು. ನ್ಯಾಯಾಲಯವು ಈ ಪ್ರಕರಣದಲ್ಲಿ ಜಾಮೀನು ನೀಡಿದ ಬೆನ್ನಿಗೇ, ಅಸ್ಸಾಂ ಪೊಲೀಸರು ಮೇವಾನಿ ಅವರನ್ನು ತಮ್ಮ ಕರ್ತವ್ಯ ನಿರ್ವಹಿಸಲು ಅಡ್ಡಿ ಮಾಡಿದ ಹಾಗೂ ಮಹಿಳಾ ಪೊಲೀಸ್‌ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣದಲ್ಲಿ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

Also Read
[ಟೂಲ್‌ಕಿಟ್‌ ಪ್ರಕರಣ] ಪರಿಸರ ಕಾರ್ಯಕರ್ತೆ ದಿಶಾ ರವಿಗೆ ಎಫ್ಐಆರ್ ಪ್ರತಿ ನೀಡುವಂತೆ ಸೂಚಿಸಿದ ದೆಹಲಿ ನ್ಯಾಯಾಲಯ

ಜಿಗ್ನೇಶ್‌ ಅವರನ್ನು ಬುಧವಾರ ತಡರಾತ್ರಿ ಗುಜರಾತ್‌ನಲ್ಲಿ ಬಂಧಿಸಿದ ನಂತರ ಕೊಕ್ರಜಾರ್ ಚೀಫ್‌ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ಮೂರು ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿದ್ದರು.

ತಮ್ಮ ಪಾಸ್‌ವರ್ಡ್‌ ಹಂಚಿಕೊಳ್ಳದೇ ಮೇವಾನಿ ಅಸಹಕಾರ ತೋರುತ್ತಿರುವ ಹಿನ್ನೆಲೆಯಲ್ಲಿ ಅವರ ಬಂಧನ ಅವಧಿ ವಿಸ್ತರಿಸಲು ಭಾನುವಾರದ ವಿಚಾರಣೆ ವೇಳೆ ಪೊಲೀಸರು ಕೋರಿದ್ದರು ಎಂದು ವರದಿಯಾಗಿದೆ.

Kannada Bar & Bench
kannada.barandbench.com