ತಂತ್ರಜ್ಞಾನ ಆಧಾರಿತ ನ್ಯಾಯಾಂಗ ಸೇವೆ ಒದಗಿಸುವ ನಿಟ್ಟಿನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಭಿನ್ನ ಹೆಜ್ಜೆಯೊಂದನ್ನು ಇರಿಸಿದೆ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಸಮಿತಿ ರಚಿಸುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯನ್ನು ಇನ್ನಷ್ಟು ಸರಾಗ ಮಾಡಲು ಅದು ಮುಂದಾಗಿದೆ.
ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಜವಾದ್ ಅಹ್ಮದ್ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮತ್ತು ನ್ಯಾಯಮೂರ್ತಿ ಪುನೀತ್ ಗುಪ್ತಾ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿದೆ.
"ನ್ಯಾಯಾಂಗದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇದು ನ್ಯಾಯ ವಿತರಣೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಈ ಯೋಜನೆ ಕೈಗೊಂಡಿದ್ದಕ್ಕಾಗಿ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಾಲಯದ ಇತರ ಗೌರವಾನ್ವಿತ ನ್ಯಾಯಾಧೀಶರಿಗೆ ಧನ್ಯವಾದಗಳು" ಎಂದು ವಕೀಲ ಅಂಕುರ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
ಕೆಳಕಂಡ ಅಂಶಗಳನ್ನು ಪರಿಶೀಲಿಸಲು ಆರ್ಟಿಷಿಯಲ್ ಇಂಟೆಲಿಜೆನ್ಸ್ (ಎಐ) ಸಮಿತಿ ರಚಿಸಲಾಗಿದೆ:
ನ್ಯಾಯಾಂಗ ದಾಖಲೆಗಳ ಅನುವಾದದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಭಾಷಾ ತಂತ್ರಜ್ಞಾನದ ಬಳಕೆ.
ಆಡಳಿತಾತ್ಮಕ ಭಾಗದಲ್ಲಿ ಸ್ವಯಂಚಾಲಿತ ನ್ಯಾಯಾಂಗ ಪ್ರಕ್ರಿಯೆಗಾಗಿ ಬಳಕೆ.
ನ್ಯಾಯಾಂಗ ಪ್ರಮಾಣದಲ್ಲಿ ಕಾನೂನು ಸಂಶೋಧನೆಗೆ ನೆರವು ನೀಡಲು.
ಇತರ ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನ ಸಂಭಾವ್ಯ ಬಳಕೆಯ ಅನ್ವೇಷಣೆಗಾಗಿ.
ನ್ಯಾಯಾಂಗದಲ್ಲಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ದಿನನಿತ್ಯದ ಕೆಲ ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸುತ್ತದೆ. ಆ ಮೂಲಕ ಹೆಚ್ಚು ನಿರ್ಣಾಯಕ ಮತ್ತು ಸೂಕ್ಷ್ಮ ಕೆಲಸಗಳಿಗೆ ಗಮನ ನೀಡಲು ಕಾನೂನು ತಂಡಗಳಿಗೆ ಅನುಕೂಲ ಮಾಡಿಕೊಡುತ್ತದೆ. ಪೆರೋಲ್, ಜಾಮೀನು ಹಾಗೂ ಸೂಕ್ತ ಶಿಕ್ಷೆ ನಿರ್ಧರಿಸುವಂತಹ ಕಾನೂನು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನ್ಯಾಯಾಧೀಶರಿಗೆ ಸಹಾಯ ಮಾಡುವ ಅಪಾರ ಸಾಮರ್ಥ್ಯ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ಗೆ ಇದ್ದು, ನ್ಯಾಯಾಂಗ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ ಎಂದು ವ್ಯಾಖ್ಯಾನಿಸಲಾಗಿದೆ.
ಭಾರತೀಯ ನ್ಯಾಯಾಂಗ ವ್ಯವಸ್ಥೆ ನ್ಯಾಯಾಧೀಶರ ಕೊರತೆ ಎದುರಿಸುತ್ತಿದ್ದು ವಿವಿಧ ನ್ಯಾಯಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬಾಕಿ ಉಳಿದಿವೆ. ಎಲ್ಲಾ ಪ್ರಕರಣಗಳಲ್ಲಿ ಸೂಕ್ತ ಸಮಯದೊಳಗೆ ಗುಣಮಟ್ಟದ ತೀರ್ಪುಗಳನ್ನು ನೀಡುವ ಭಾರೀ ಒತ್ತಡ ನ್ಯಾಯಾಂಗದ ಮೇಲೆ ಇದೆ. ನ್ಯಾಯಾಂಗ ಕಾರ್ಯಕ್ಕಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧಾರಿತ ವ್ಯವಸ್ಥೆಯಿಂದಾಗಿ ನ್ಯಾಯಾಧೀಶರಿಗೆ ನಿರ್ಧಾರ ತೆಗೆದುಕೊಳ್ಳಲು ಇದು ಪರಿಣಾಮಕಾರಿಯಾಗಿ ಸಹಾಯ ಮಾಡಲಿದ್ದು, ಇದರಿಂದಾಗಿ ಸರಾಗವಾಗಿ ಅವರು ಗುರಿ ಸಾಧಿಸಲು ಸಾಧ್ಯವಾಗುತ್ತದೆ.
ಆದೇಶವನ್ನು ಇಲ್ಲಿ ಓದಿ: