ಲಾಡ್ಜ್‌, ರೆಸಾರ್ಟ್‌ ನಿರ್ಮಿಸಲು ಜೆಎಲ್‌ಆರ್‌ಗೆ ಅನುಮತಿ ಬೇಕಿಲ್ಲ ಎಂದ ಹೈಕೋರ್ಟ್‌; ಅರ್ಜಿದಾರರಿಗೆ ₹50 ಸಾವಿರ ದಂಡ

ನ್ಯಾಯಾಲಯವು ಅರ್ಜಿದಾರರಿಗೆ ರೂ. 50 ಸಾವಿರ ದಂಡ ವಿಧಿಸಿದ್ದು, ಅದನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಒಂದು ತಿಂಗಳ ಒಳಗೆ ಪಾವತಿಸುವಂತೆ ಆದೇಶಿಸಿದೆ.
Karnataka HC and Jungle lodges and resorts

Karnataka HC and Jungle lodges and resorts

Published on

ಜಂಗಲ್‌ ಲಾಡ್ಜ್ಸ್‌ ಮತ್ತು ರೆಸಾರ್ಟ್ಸ್‌ ಲಿಮಿಟೆಡ್‌ ಸಂಸ್ಥೆಯು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ನಿಯಂತ್ರಣಕ್ಕೆ ಒಳಪಟ್ಟಿದೆ. ಹೀಗಾಗಿ, ಕೊಡಗು ಜಿಲ್ಲೆಯ ದುಬಾರೆ ಮೀಸಲು ಅರಣ್ಯ ಪ್ರದೇಶದಲ್ಲಿ ಲಾಡ್ಜ್‌ ಅಥವಾ ರೆಸಾರ್ಟ್‌ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್‌ ಹೇಳಿದ್ದು, ಅರ್ಜಿ ವಜಾ ಮಾಡಿದೆ.

ಕೊಡಗು ಜಿಲ್ಲೆಯವರಾದ ಪಿ ಎಸ್‌ ಮೋಹನ್‌ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ವಿಭಾಗೀಯ ಪೀಠವು ಮನವಿಯನ್ನು ದುರುದ್ದೇಶದಿಂದ ಸಲ್ಲಿಸಲಾಗಿದೆ ಎಂದು ಅರ್ಜಿ ವಜಾ ಮಾಡಿತು. ಅಲ್ಲದೇ, ರೆಸಾರ್ಟ್‌ ನಿರ್ಮಾಣ ಪ್ರಶ್ನಿಸಿದ್ದ ಅರ್ಜಿದಾರರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿದ್ದು, ಅದನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಒಂದು ತಿಂಗಳ ಒಳಗೆ ಪಾವತಿಸುವಂತೆ ಆದೇಶ ಮಾಡಿದೆ.

“ದುಬಾರೆಯಲ್ಲಿ ಜಂಗಲ್‌ ಲಾಡ್ಜ್‌ ನಿರ್ಮಿಸಿರುವ ಜಂಗಲ್‌ ಲಾಡ್ಜ್ಸ್‌ ಮತ್ತು ರೆಸಾರ್ಟ್ಸ್‌, ಕೆಎಸ್‌ಟಿಡಿಸಿ ನಿಯಂತ್ರಣಕ್ಕೆ ಒಳಪಟ್ಟಿದೆ. ಇದು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದ್ದು, ಜಂಗಲ್‌ ಲಾಡ್ಜ್ಸ್‌ ಮತ್ತು ರೆಸಾರ್ಟ್ಸ್‌ನಲ್ಲಿ ಖಾಸಗಿ ವ್ಯಕ್ತಿಗಳ ಹಿತಾಸಕ್ತಿಗಳು ಸೇರಿಲ್ಲ. ಜಂಗಲ್‌ ಲಾಡ್ಜ್ಸ್‌ ರೆಸಾರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕರು ಐಎಫ್‌ಎಸ್‌ ಶ್ರೇಣಿಗೆ ಸೇರಿದ ಸರ್ಕಾರಿ ಅಧಿಕಾರಿಯಾಗಿದ್ದಾರೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

Also Read
ವಾಜಪೇಯಿ ಪ್ರಾಣಿ ಸಂಗ್ರಹಾಲಯವನ್ನು ಹೊಸಪೇಟೆಯ ಬಿಳಿಕಲ್ಲು ಮೀಸಲು ಅರಣ್ಯಕ್ಕೆ ಸ್ಥಳಾಂತರಿಸಲು ಹೈಕೋರ್ಟ್‌ ಅನುಮತಿ

“ಮನವಿಯಲ್ಲಿ ಉಲ್ಲೇಖಿಸಿರುವ ಆಕ್ಷೇಪಗಳಿಗೆ ಪೂರಕವಾಗಿ ಅರ್ಜಿದಾರರು ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಹೀಗಾಗಿ, ಇದು ಪ್ರತಿವಾದಿಗಳ ಮೇಲೆ ಒತ್ತಡ ಉಂಟು ಮಾಡಲು ಸಲ್ಲಿಸಿರುವ ದುರುದ್ದೇಶಪೂರ್ವಕ ಮನವಿಯಾಗಿದೆ. ಅರ್ಜಿದಾರರ ನಡೆಯು ನ್ಯಾಯಾಲಯದ ಅತ್ಯಮೂಲ್ಯವಾದ ಸಮಯವನ್ನು ಹಾಳು ಮಾಡುವುದಾಗಿದೆ. ಇದಕ್ಕಾಗಿ ರೂ.50 ಸಾವಿರ ದಂಡ ವಿಧಿಸುತ್ತಿದ್ದು, ಇದನ್ನು ಕೆಎಸ್‌ಎಲ್‌ಎಸ್‌ಎಗೆ ಒಂದು ತಿಂಗಳ ಒಳಗೆ ಪಾವತಿಸಬೇಕು” ಎಂದು ನ್ಯಾಯಾಲಯದ ಆದೇಶದಲ್ಲಿ ಹೇಳಿದೆ.

Kannada Bar & Bench
kannada.barandbench.com