ಜೋಶಿಮಠ ಭೂಕುಸಿತ ಪ್ರಕರಣ ತುರ್ತು ವಿಚಾರಣೆಗೆ ನಕಾರ: ಚುನಾಯಿತ ಸಂಸ್ಥೆಗಳೇ ಸಮಸ್ಯೆ ಪರಿಶೀಲಿಸಲಿ ಎಂದ ಸುಪ್ರೀಂ

ಜೋಶಿಮಠದ ನಿವಾಸಿಗಳಿಗೆ ತಕ್ಷಣದ ಆರ್ಥಿಕ ನೆರವು ಮತ್ತು ಪರಿಹಾರ ದೊರಕಿಸಿಕೊಡಲು ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಕೋರಿದ್ದರು.
Joshimath and Supreme Court
Joshimath and Supreme Court

ಉತ್ತರಾಖಂಡದ ಪರ್ವತ ಪಟ್ಟಣ ಜೋಶಿಮಠದಲ್ಲಿ ಉಂಟಾಗಿರುವ ಭೂಕುಸಿತಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ.

“ಪ್ರಜಾಪ್ರಭುತ್ವದ ದೇಶದಲ್ಲಿ ತುರ್ತುಪರಿಸ್ಥಿತಿ ಇರುವ ಎಲ್ಲವನ್ನೂ ನ್ಯಾಯಾಲಯಕ್ಕೆ ತರಬೇಕಿಲ್ಲ. ಏಕೆಂದರೆ ಅಂತಹವನ್ನು ಪರಿಶೀಲಿಸಲು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಚುನಾಯಿತ ಸಂಸ್ಥೆಗಳು ಇವೆ” ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರಿದ್ದ ಪೀಠ ತಿಳಿಸಿತು.

ಹಾಗಾಗಿ ನ್ಯಾಯಾಲಯವು ಜನವರಿ 16 ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿತು.

ಜೋಶಿಮಠದ ನಿವಾಸಿಗಳಿಗೆ ತಕ್ಷಣದ ಆರ್ಥಿಕ ನೆರವು ಮತ್ತು ಪರಿಹಾರ ದೊರಕಿಸಿಕೊಡಲು ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಅರ್ಜಿಯಲ್ಲಿ ಕೋರಿದ್ದರು.

ಮನವಿಯನ್ನು ನಿನ್ನೆ (ಸೋಮವಾರ) ಮುಖ್ಯ ನ್ಯಾಯಮೂರ್ತಿಗಳ ಮುಂದೆ ಪ್ರಸ್ತಾಪಿಸಲಾಗಿತ್ತು, ಅವರು ಪ್ರಕರಣವನ್ನು ಇಂದು ಉಲ್ಲೇಖಿಸುವಂತೆ ವಕೀಲರಿಗೆ ಸೂಚಿಸಿದ್ದರು.

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಜೋಶಿಮಠ 17,000 ಜನಸಂಖ್ಯೆ ಹೊಂದಿದ್ದು ಸಮುದ್ರ ಮಟ್ಟದಿಂದ 1,800 ಮೀಟರ್ ಎತ್ತರದಲ್ಲಿದೆ. ಸುಮಾರು 4,500 ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು 610 ಕಟ್ಟಡಗಳು ದೊಡ್ಡ ಪ್ರಮಾಣದ ಬಿರುಕುಗಳು ಮೂಡಿವೆ. ರಸ್ತೆಗಳಲ್ಲಿಯೂ ಸಹ ಬಿರುಕುಗಳು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜೋಶಿಮಠವನ್ನು ದುರಂತ ಪೀಡಿತ ಪ್ರದೇಶ ಎಂದು ಘೋಷಿಸಲಾಗಿದ್ದು ಅನೇಕ ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.

Kannada Bar & Bench
kannada.barandbench.com